
ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ಕ್ರಿಕೆಟ್ ತಂಡ ಹಿಂದೇಟು ಹಾಕಿದೆ.
ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದು ಅಸಾಧ್ಯ, ಪಾಕಿಸ್ತಾನದಲ್ಲಿ ಆಡಲು ಸಿದ್ಧ: ಬಾಂಗ್ಲಾದೇಶದ ಹಠ
ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರ ಐಪಿಎಲ್ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶವು ತನ್ನ ದೇಶದಲ್ಲಿ ಐಪಿಎಲ್ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ.
ಭಾರತದಲ್ಲಿ ನಡೆಯಲಿರುವ 2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಬಾಂಗ್ಲಾದೇಶ ಕ್ರಿಕೆಟ್ ತಂಡ ಹಿಂದೇಟು ಹಾಕಿದೆ. ಭಾರತದಲ್ಲಿ ಬಾಂಗ್ಲಾದೇಶದ ವಿರುದ್ಧದ ಮನೋಭಾವ ಬಲವಾಗಿರುವುದರಿಂದ ಅಲ್ಲಿ ಹೋಗಿ ಕ್ರಿಕೆಟ್ ಆಡುವುದು ಅಸಾಧ್ಯ ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಹೇಳಿಕೆ ನೀಡಿದ್ದಾರೆ.
ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಸಿಫ್ ನಜ್ರುಲ್, "ಕಳೆದ 16 ತಿಂಗಳುಗಳಿಂದ ಭಾರತದಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಮತ್ತು ಅಲ್ಲಿನ ಕೋಮು ವಾತಾವರಣವನ್ನು ಗಮನಿಸಿದರೆ, ನಮ್ಮ ತಂಡವನ್ನು ಅಲ್ಲಿಗೆ ಕಳುಹಿಸುವುದು ಸುರಕ್ಷಿತವಲ್ಲ. ನಾವು ಶ್ರೀಲಂಕಾ, ಯುಎಇ ಅಥವಾ ಪಾಕಿಸ್ತಾನದಲ್ಲಿ ಬೇಕಾದರೂ ಪಂದ್ಯಗಳನ್ನು ಆಡಲು ಸಿದ್ಧರಿದ್ದೇವೆ. ಆದರೆ, ಭಾರತದಲ್ಲಿ ಪಂದ್ಯ ಆಡುವ ಪ್ರಶ್ನೆಯೇ ಇಲ್ಲ," ಎಂದು ಸ್ಪಷ್ಟಪಡಿಸಿದ್ದಾರೆ.
ಐಸಿಸಿಗೆ ಟಾಂಗ್
ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ವಿರುದ್ಧವೂ ಹರಿಹಾಯ್ದಿರುವ ಅವರು, "ಐಸಿಸಿ ನಿಜವಾಗಿಯೂ ಜಾಗತಿಕ ಸಂಸ್ಥೆಯಾಗಿದ್ದರೆ ಅಥವಾ ಭಾರತದ ಆದೇಶವನ್ನು ಪಾಲಿಸದಿದ್ದರೆ, ನಮಗೆ ಭಾರತದ ಹೊರಗೆ ಆಡಲು ಅವಕಾಶ ನೀಡಬೇಕು. ಕ್ರಿಕೆಟ್ ಆಟದ ಮೇಲೆ ಯಾರದ್ದೇ ಏಕಸ್ವಾಮ್ಯ ಇರಬಾರದು. ನಾವು ಈ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ," ಎಂದು ಎಚ್ಚರಿಸಿದ್ದಾರೆ.
ಐಪಿಎಲ್ ವಿವಾದವೇ ಮೂಲ
ಇತ್ತೀಚೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರೆಹಮಾನ್ ಅವರ ಐಪಿಎಲ್ ಒಪ್ಪಂದವನ್ನು ರದ್ದುಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಬಾಂಗ್ಲಾದೇಶವು ತನ್ನ ದೇಶದಲ್ಲಿ ಐಪಿಎಲ್ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ. ಈ ಘಟನೆಯು ಎರಡು ದೇಶಗಳ ನಡುವಿನ ಕ್ರಿಕೆಟ್ ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿದೆ.
ಕೋಲ್ಕತ್ತಾ ಮತ್ತು ಮುಂಬೈ ಬದಲಿಗೆ ಭಾರತದ ಬೇರೆ ನಗರಗಳಲ್ಲಿ ಪಂದ್ಯ ಆಯೋಜಿಸುವ ಪ್ರಸ್ತಾಪವನ್ನು ಐಸಿಸಿ ಮುಂದಿಟ್ಟಿತ್ತಾದರೂ, ಬಾಂಗ್ಲಾದೇಶ ಅದನ್ನು ತಿರಸ್ಕರಿಸಿದೆ. "ಭಾರತ ಎಂದರೆ ಭಾರತವೇ. ನಮಗೆ ಭಾರತದ ಯಾವುದೇ ಮೂಲೆಯಲ್ಲಿಯೂ ಸೂಕ್ತ ವಾತಾವರಣವಿಲ್ಲ. ನಮ್ಮ ಪಂದ್ಯಗಳನ್ನು ಶ್ರೀಲಂಕಾ ಅಥವಾ ಪಾಕಿಸ್ತಾನಕ್ಕೆ ಸ್ಥಳಾಂತರಿಸಿ," ಎಂದು ನಜ್ರುಲ್ ಒತ್ತಾಯಿಸಿದ್ದಾರೆ .

