
ಭಾರತದಲ್ಲಿ ನಡೆಯುವ ಟಿ20 ವಿಶ್ವಕಪ್ ಟೂರ್ನಿ ಬಹಿಷ್ಕರಿಸಿದ ಬಾಂಗ್ಲಾದೇಶ ತಂಡ
ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು, ಭಾರತಕ್ಕೆ ತಮ್ಮ ಕ್ರಿಕೆಟ್ ತಂಡವನ್ನು ಕಳುಹಿಸದಿರಲು ನಿರ್ಧರಿಸಿದ್ದ ಬಾಂಗ್ಲಾದೇಶ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಟೂರ್ನಿಯಿಂದಲೇ ಹಿಂದೆ ಸರಿಯಲು ನಿರ್ಧರಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಘಾತಕಾರಿ ಬೆಳವಣಿಗೆಯೊಂದರಲ್ಲಿ, ಬಾಂಗ್ಲಾದೇಶ ಸರ್ಕಾರವು 2026ರ ಟಿ20 ವಿಶ್ವಕಪ್ ಟೂರ್ನಿಯನ್ನು ಅಧಿಕೃತವಾಗಿ ಬಹಿಷ್ಕರಿಸುವುದಾಗಿ ಘೋಷಿಸಿದೆ. ಭಾರತದಲ್ಲಿ ನಡೆಯಲಿರುವ ತಮ್ಮ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನಿರಾಕರಿಸಿದ ಬೆನ್ನಲ್ಲೇ ಬಾಂಗ್ಲಾದೇಶ ಸರ್ಕಾರ ತನ್ನ ನಿರ್ಧಾರ ಪ್ರಕಟಿಸಿದೆ.
ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು, ಭಾರತಕ್ಕೆ ತಮ್ಮ ಕ್ರಿಕೆಟ್ ತಂಡವನ್ನು ಕಳುಹಿಸದಿರಲು ನಿರ್ಧರಿಸಿದ್ದ ಬಾಂಗ್ಲಾದೇಶ, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಇಡೀ ಟೂರ್ನಿಯಿಂದಲೇ ಹಿಂದೆ ಸರಿಯಲು ನಿರ್ಧರಿಸಿದೆ. "ನಮ್ಮ ಆಟಗಾರರ ಸುರಕ್ಷತೆಯೇ ನಮಗೆ ಮುಖ್ಯ. ಭಾರತದಲ್ಲಿ ಆಡಲು ಇರುವ ಭದ್ರತಾ ಆತಂಕಗಳನ್ನು ಐಸಿಸಿ ಗಂಭೀರವಾಗಿ ಪರಿಗಣಿಸದ ಕಾರಣ, ನಾವು ಟೂರ್ನಿಯನ್ನು ಬಹಿಷ್ಕರಿಸುತ್ತಿದ್ದೇವೆ" ಎಂದು ಬಾಂಗ್ಲಾದೇಶ ಸರ್ಕಾರ ಸ್ಪಷ್ಟಪಡಿಸಿದೆ.
ಐಸಿಸಿ ಗಡುವು ಮತ್ತು ಸಂಘರ್ಷ
ಈ ನಿರ್ಧಾರಕ್ಕೂ ಮುನ್ನ ಐಸಿಸಿ ಮತ್ತು ಬಾಂಗ್ಲಾದೇಶದ ನಡುವೆ ತೀವ್ರ ಸಂಘರ್ಷ ಏರ್ಪಟ್ಟಿತ್ತು. ಭಾರತದಲ್ಲಿ ಆಟಗಾರರಿಗೆ ಯಾವುದೇ ಬೆದರಿಕೆ ಇಲ್ಲ ಎಂದು ಪ್ರತಿಪಾದಿಸಿದ್ದ ಐಸಿಸಿ, ಬಾಂಗ್ಲಾದೇಶ ತಂಡಕ್ಕೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅಂತಿಮ ಗಡುವು ನೀಡಿತ್ತು. "ಭಾರತಕ್ಕೆ ಬಂದು ಆಡಿ, ಇಲ್ಲದಿದ್ದರೆ ನಿಮ್ಮ ಸ್ಥಾನಕ್ಕೆ ಬೇರೆ ತಂಡವನ್ನು ನೇಮಿಸಲಾಗುವುದು" ಎಂದು ಬುಧವಾರ ಎಚ್ಚರಿಕೆ ನೀಡಿತ್ತು. ತಕ್ಷಣವೇ ಐಸಿಸಿಯ ಈ ನಿಲುವನ್ನು "ಸ್ವೀಕಾರಾರ್ಹವಲ್ಲ" ಎಂದು ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್ ಹೇಳಿದ್ದರು. ಇದೀಗ ಸರ್ಕಾರವೇ ನೇರವಾಗಿ ಮಧ್ಯಪ್ರವೇಶಿಸಿ ಬಹಿಷ್ಕಾರದ ಘೋಷಣೆ ಮಾಡಿದೆ.
ಭದ್ರತಾ ಭೀತಿ ಮತ್ತು 'ನ್ಯಾಯ'ದ ನಿರೀಕ್ಷೆ ಹುಸಿ
ಆರಂಭದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಮೂಲಕ ಐಸಿಸಿ ತಮಗೆ "ನ್ಯಾಯ" ಒದಗಿಸಲಿದೆ ಎಂದು ಹೇಳಿತ್ತು. "ನಾವು ಭಾರತಕ್ಕೆ ಹೋಗುವುದಿಲ್ಲ, ಆದರೆ ಟೂರ್ನಿಯಲ್ಲಿ ಭಾಗವಹಿಸಲು ಶ್ರೀಲಂಕಾದಲ್ಲಿ ಅವಕಾಶ ಕೊಡಿ" ಎಂದು ಮನವಿ ಮಾಡಿತ್ತು. ಆದರೆ ಐಸಿಸಿ ತನ್ನ ಮೂಲ ವೇಳಾಪಟ್ಟಿಗೆ ಬದ್ಧವಾಗಿ ಉಳಿದಿದ್ದರಿಂದ, ಬಾಂಗ್ಲಾದೇಶ ಸರ್ಕಾರ ಅಂತಿಮವಾಗಿ ಟೂರ್ನಿಯಿಂದಲೇ ಹೊರಗುಳಿಯುವ ನಿರ್ಧಾರಕ್ಕೆ ಬಂದಿದೆ.
ಬಾಂಗ್ಲಾದೇಶದ ನಿರ್ಧಾರದಿಂದಾಗಿ, ಐಸಿಸಿ ಈಗ ಬಾಂಗ್ಲಾದೇಶದ ಸ್ಥಾನಕ್ಕೆ ಬೇರೆ ತಂಡವನ್ನು ಸೇರಿಸಿಕೊಳ್ಳುವ ಅಥವಾ ವೇಳಾಪಟ್ಟಿ ಪರಿಷ್ಕರಿಸುವ ಅನಿವಾರ್ಯತೆಗೆ ಸಿಲುಕಿದೆ. ಬಾಂಗ್ಲಾದೇಶ ಹಿಂದೆ ಸರಿದಿರುವುದರಿಂದ ಐಸಿಸಿ ಸುಮಾರು 20 ಕೋಟಿ ವೀಕ್ಷಕರನ್ನು ಕಳೆದುಕೊಳ್ಳಲಿದೆ ಎಂದು ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಂ ಅಭಿಪ್ರಾಯಪಟ್ಟಿದ್ದಾರೆ. ಫೆಬ್ರವರಿ 7ರಿಂದ ಮಾರ್ಚ್ 8 ರವರೆಗೆ ನಡೆಯಲಿರುವ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥೇಯರಾಗಿದ್ದರೂ, ಬಾಂಗ್ಲಾದೇಶದ ಪಂದ್ಯಗಳು ಕೋಲ್ಕತ್ತಾ ಮತ್ತು ಮುಂಬೈನಲ್ಲಿ ನಿಗದಿಯಾಗಿದ್ದವು.

