ಟಿವಿಕೆ ಪಕ್ಷಕ್ಕೆ ಲಕ್ಕಿ ಸಿಂಬಲ್: ಅಧಿಕೃತ ವಿಸಿಲ್ ಚಿಹ್ನೆ ಬಿಡುಗಡೆ ಮಾಡಿದ ನಟ ವಿಜಯ್
x

ವೇದಿಕೆಯ ಮೇಲೆ ಸ್ವತಃ ವಿಸಿಲ್ ಊದುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದರು

ಟಿವಿಕೆ ಪಕ್ಷಕ್ಕೆ ಲಕ್ಕಿ ಸಿಂಬಲ್: ಅಧಿಕೃತ 'ವಿಸಿಲ್' ಚಿಹ್ನೆ ಬಿಡುಗಡೆ ಮಾಡಿದ ನಟ ವಿಜಯ್

ಚುನಾವಣಾ ಆಯೋಗವು ಟಿವಿಕೆ ಪಕ್ಷಕ್ಕೆ 'ವಿಸಿಲ್' ಚಿಹ್ನೆ ಮಂಜೂರು ಮಾಡಿದೆ. ಇಂದಿನ ಸಮಾವೇಶದಲ್ಲಿ ವಿಜಯ್ ಈ ಹೊಸ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು.


Click the Play button to hear this message in audio format

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿರುವ ನಟ ಹಾಗೂ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಮುಖ್ಯಸ್ಥ ವಿಜಯ್, 2026ರ ವಿಧಾನಸಭಾ ಚುನಾವಣೆಗಾಗಿ ಭಾನುವಾರ ಮಹಾಬಲಿಪುರಂನಲ್ಲಿ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು.

ಚೆನ್ನೈನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಈ ಕಡಲತೀರದ ಪಟ್ಟಣದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ವಿಜಯ್ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

'ವಿಸಿಲ್' ಚಿಹ್ನೆ ಅನಾವರಣ

ಇತ್ತೀಚೆಗಷ್ಟೇ ಚುನಾವಣಾ ಆಯೋಗವು ಟಿವಿಕೆ ಪಕ್ಷಕ್ಕೆ 'ವಿಸಿಲ್' ಚಿಹ್ನೆ ಮಂಜೂರು ಮಾಡಿದೆ. ಇಂದಿನ ಸಮಾವೇಶದಲ್ಲಿ ವಿಜಯ್, ಹೊಸ ಚಿಹ್ನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. ವೇದಿಕೆ ಮೇಲೆ ಸ್ವತಃ ವಿಸಿಲ್ ಊದುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದರು. ತಮ್ಮ ಜನಪ್ರಿಯ ಸಿನಿಮಾ 'ಬಿಗಿಲ್' ಶೈಲಿಯಲ್ಲಿಯೇ ಪ್ರಚಾರ ಆರಂಭಿಸಿದ ವಿಜಯ್, ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ಚುನಾವಣಾ ಕಣವನ್ನು 'ಪ್ರಜಾಪ್ರಭುತ್ವದ ಯುದ್ಧ' ಎಂದು ಬಣ್ಣಿಸಿದರು.

ಡಿಎಂಕೆ-ಎಐಎಡಿಎಂಕೆ ವಿರುದ್ಧ ಆಕ್ರೋಶ

ತಮಿಳುನಾಡಿನ ಪ್ರಮುಖ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಎರಡನ್ನೂ ಟೀಕಿಸಿದ ವಿಜಯ್‌ "ಎಐಎಡಿಎಂಕೆ ನೇರವಾಗಿ ಬಿಜೆಪಿಗೆ ಶರಣಾಗಿದ್ದರೆ, ಆಡಳಿತಾರೂಢ ಡಿಎಂಕೆ ಪರೋಕ್ಷವಾಗಿ ಶರಣಾಗಿದೆ. ಆದರೆ ನಮ್ಮ ಪಕ್ಷ ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ" ಎಂದು ಗುಡುಗಿದರು.

ಪ್ರಸ್ತುತ ಆಡಳಿತವನ್ನು 'ದುಷ್ಟ ಶಕ್ತಿ' ಮತ್ತು ಹಿಂದಿನ ಆಡಳಿತವನ್ನು 'ಭ್ರಷ್ಟ ಶಕ್ತಿ' ಎಂದು ಕರೆದ ಅವರು, ಈ ಎರಡೂ ಶಕ್ತಿಗಳನ್ನು ಅಧಿಕಾರದಿಂದ ದೂರ ಇಡುವ ಶಕ್ತಿ ಕೇವಲ ಟಿವಿಕೆಗೆ ಮಾತ್ರ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಶರಣಾಗಲು ಬಂದಿಲ್ಲ

ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿದ ವಿಜಯ್ "ಯಾರೋ ಒಬ್ಬರಿಗೆ ಶರಣಾಗಲು ನಾನು ರಾಜಕೀಯಕ್ಕೆ ಬಂದಿಲ್ಲ. ಟಿವಿಕೆ ತನ್ನ ಸ್ವಂತ ಬಲದ ಮೇಲೆ ಗೆಲುವು ಸಾಧಿಸಲಿದೆ" ಎಂದರು.

ಅಲ್ಲದೆ, ಕಳೆದ 30 ವರ್ಷಗಳಿಂದ ರಾಜಕೀಯ ಪಕ್ಷಗಳು ನಮ್ಮನ್ನು ಕಡೆಗಣಿಸಿವೆ, ಆದರೆ ಇಂದು ಜನರು ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿದ್ದಾರೆ. ಕಾರ್ಯಕರ್ತರು ಕೇವಲ ನನ್ನ ಮೇಲೆ ಮಾತ್ರವಲ್ಲದೆ ಪಕ್ಷದ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಡಬೇಕು ಎಂದು ಕರೆ ನೀಡಿದರು.

Read More
Next Story