
ನಿಮಗಾಗಿ ಸಿನಿಮಾವನ್ನೇ ತ್ಯಾಗ ಮಾಡುತ್ತಿದ್ದೇನೆ ಎಂದು ಮಲೇಷ್ಯಾದಲ್ಲಿ ಅಭಿಮಾನಿಗಳ ಮುಂದೆ ದಳಪತಿ ವಿಜಯ್ ಭಾವುಕ ಮಾತು
ವಿಜಯ್ ಫ್ಯಾನ್ಸ್ ದಾಂಧಲೆ; ಬಟ್ಟೆ ಎಳೆದಾಡಿ ಹುಚ್ಚಾಟ- ಏರ್‌ಪೋರ್ಟ್‌ನಲ್ಲಿ ಜಾರಿ ಬಿದ್ದ ನಟ
ವಿಜಯ್ ಅವರ ಕೊನೆಯ ಚಿತ್ರವೆನ್ನಲಾದ 'ಜನ ನಾಯಕನ್' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕಾಗಿ ಅವರು ಮಲೇಷ್ಯಾಕ್ಕೆ ತೆರಳಿದ್ದರು. ಈ ಕಾರ್ಯಕ್ರಮಕ್ಕೆ ಬರೊಬ್ಬರಿ 1 ಲಕ್ಷ ಅಭಿಮಾನಿಗಳು ಸಾಕ್ಷಿಯಾಗಿದ್ದರು.
ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ 'ತಮಿಳಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷದ ಅಧ್ಯಕ್ಷ ದಳಪತಿ ವಿಜಯ್ ಅವರು ಮಲೇಷ್ಯಾದಿಂದ ಚೆನ್ನೈಗೆ ಮರಳಿದ ವೇಳೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ಆಯತಪ್ಪಿ ಬಿದ್ದರುವ ಘಟನೆ ನಡೆದಿದೆ.
ತಮ್ಮ ಕೊನೆಯ ಚಿತ್ರ ಎನ್ನಲಾದ 'ಜನ ನಾಯಕನ್' ಸಿನಿಮಾದ ಆಡಿಯೋ ಬಿಡುಗಡೆ ಸಮಾರಂಭಕ್ಕಾಗಿ ವಿಜಯ್ ಮಲೇಷ್ಯಾಕ್ಕೆ ತೆರಳಿದ್ದರು. ಭಾನುವಾರ ರಾತ್ರಿ ಅವರು ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ, ನೆಚ್ಚಿನ ನಟನನ್ನು ಸ್ವಾಗತಿಸಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ಉಂಟಾದ ಭಾರಿ ಜನದಟ್ಟಣೆಯಲ್ಲಿ ಸಿಲುಕಿದ ವಿಜಯ್, ಕಾರು ಏರಲು ಪ್ರಯತ್ನಿಸುತ್ತಿದ್ದಾಗ ಆಯತಪ್ಪಿ ಕೆಳಗೆ ಬಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಅವರನ್ನು ಮೇಲೆತ್ತಿ ಸುರಕ್ಷಿತವಾಗಿ ಕಾರಿನೊಳಗೆ ಕಳುಹಿಸಿದರು.
ವಿಡಿಯೊ ಇಲ್ಲಿದೆ
ಮಲೇಷ್ಯಾದಲ್ಲಿ ದಾಖಲೆ ಬರೆದ 'ಜನ ನಾಯಕನ್' ಕಾರ್ಯಕ್ರಮ
ಡಿಸೆಂಬರ್ 27 ರಂದು ಮಲೇಷ್ಯಾದ ಕೌಲಾಲಂಪುರದ ಬುಕಿತ್ ಜಲೀಲ್ ಕ್ರೀಡಾಂಗಣದಲ್ಲಿ 'ಜನ ನಾಯಕನ್' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಸುಮಾರು 1 ಲಕ್ಷಕ್ಕೂ ಅಧಿಕ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಭಾರಿ ಸಂಖ್ಯೆಯ ಜನಸಂದಣಿಯಿಂದಾಗಿ ಈ ಕಾರ್ಯಕ್ರಮವು 'ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್' ಸೇರಿದೆ. ಮಲೇಷ್ಯಾವು ಶ್ರೀಲಂಕಾದ ನಂತರ ವಿಶ್ವದ ಎರಡನೇ ಅತಿ ದೊಡ್ಡ ತಮಿಳು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ.
ವೇದಿಕೆಯಲ್ಲಿ ವಿಜಯ್ ಭಾವುಕ ಮಾತು
ಈ ಸಮಾರಂಭದಲ್ಲಿ ಮಾತನಾಡಿದ ನಟ ವಿಜಯ್ ತಮ್ಮ ರಾಜಕೀಯ ಪ್ರವೇಶ ಮತ್ತು ಸಿನಿಮಾ ನಿವೃತ್ತಿಯ ಬಗ್ಗೆ ಭಾವುಕರಾಗಿ ಮಾತನಾಡಿದರು. "ನಾನು ಚಿತ್ರರಂಗಕ್ಕೆ ಬಂದಾಗ ಒಂದು ಸಣ್ಣ ಮರಳಿನ ಮನೆ ಕಟ್ಟುವ ಕನಸು ಕಂಡಿದ್ದೆ, ಆದರೆ ನೀವು ನನಗಾಗಿ ಒಂದು ಅರಮನೆಯನ್ನೇ ನಿರ್ಮಿಸಿಕೊಟ್ಟಿದ್ದೀರಿ. ನನಗಾಗಿ ಎಲ್ಲವನ್ನೂ ತ್ಯಾಗ ಮಾಡಿದ ಅಭಿಮಾನಿಗಳಿಗಾಗಿ ನಾನು ಈಗ ಸಿನಿಮಾವನ್ನೇ ತ್ಯಾಗ ಮಾಡುತ್ತಿದ್ದೇನೆ. ಇನ್ನು ಮುಂದೆ ನಿಮಗಾಗಿ ನಿಲ್ಲಲು ನಿರ್ಧರಿಸಿದ್ದೇನೆ" ಎಂದು ಹೇಳಿದರು.
ಎಚ್. ವಿನೋತ್ ನಿರ್ದೇಶನದ ಈ ಚಿತ್ರದ ಸಂಗೀತ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿಯರಾದ ಪೂಜಾ ಹೆಗ್ಡೆ, ಪ್ರಿಯಾಮಣಿ, ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. 'ದಳಪತಿ ತಿರುವಿಳ' ಹೆಸರಿನಲ್ಲಿ ನಡೆದ ಈ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ವಿಜಯ್ ಯೇಸುದಾಸ್, ಅನುರಾಧಾ ಶ್ರೀರಾಮ್ ಸೇರಿದಂತೆ 30ಕ್ಕೂ ಹೆಚ್ಚು ಗಾಯಕರು ವಿಜಯ್ ಅವರ ಹಿಟ್ ಹಾಡುಗಳನ್ನು ಹಾಡುವ ಮೂಲಕ ಗಮನ ಸೆಳೆದರು.

