
ಪುದುಚೇರಿಯಲ್ಲಿ ಝಂಡಾ ಊರಲು ಟಿವಿಕೆ ಸಜ್ಜು; ಹೇಗೆ ನಡೀತು ವಿಜಯ್ ರ‍್ಯಾಲಿ?
ಕರೂರು ಕಾಲ್ತುಳಿತ ದುರ್ಘಟನೆಯಲ್ಲಿ41 ಜನ ಸಾವನ್ನಪ್ಪಿದ ನಂತರ ಮೊದಲ ಬಾರಿಗೆ ಟಿವಿಕೆ ಮುಖ್ಯಸ್ಥ ವಿಜಯ್ ಪುದುಚೇರಿಯಲ್ಲಿ ರ‍್ಯಾಲಿ ನಡೆಸಿದ್ದಾರೆ
ಸುಮಾರು ಮೂರು ತಿಂಗಳ ಹಿಂದೆ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದ್ದ ಕರೂರು ಕಾಲ್ತುಳಿತ ಪ್ರಕರಣದ ನಂತರ ಇದೇ ಮೊದಲ ಬಾರಿಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ, ನಟ ವಿಜಯ್ ಇಂದು ಪುದುಚೇರಿಯಲ್ಲಿ ಬೃಹತ್ ರ‍್ಯಾಲಿ ನಡೆಸಿದ್ದಾರೆ. ಭಾರೀ ಬಿಗಿ ಬಂದೋಬಸ್ತ್‌ನಲ್ಲಿ, ಭದ್ರತೆಯಡಿಯಲ್ಲಿ ಪುದುಚೇರಿಯ ಎಕ್ಸ್‌ಪೋ ಮೈದಾನದಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ಹಿಂದೆ ಕರೂರಿನಲ್ಲಿ ನಡೆದ ಯಾವುದೇ ಯಡವಟ್ಟು ಇನ್ನು ಮುಂದೆ ನಡೆಯದಂತೆ ಪಕ್ಷ ಭಾರೀ ಎಚ್ಚರಿಕೆ ವಹಿಸಿದ್ದು, ಭದ್ರತಾ ವ್ಯವಸ್ಥೆಯಲ್ಲಿ ಯಾವುದೇ ರಾಜಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.
ಇಷ್ಟೆಲ್ಲ ಬಿಗಿ ಭದ್ರತೆ ನಡುವೆಯೇ ಮತ್ತೊಂದು ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೈಯಲ್ಲಿ ಬಂದೂಕು ಹಿಡಿದು ವ್ಯಕ್ತಿಯೊಬ್ಬ ಕಾರ್ಯಕ್ರಮಕ್ಕೆ ಪ್ರವೇಶಿಸಲು ಯತ್ನಿಸಿದ್ದು, ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಆತನನ್ನು ತಡೆದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಸಂದರ್ಭದಲ್ಲಿಆ ವ್ಯಕ್ತಿಯನ್ನು ಪಕ್ಷದ ಶಿವಗಂಗೈ ಜಿಲ್ಲಾ ಕಾರ್ಯದರ್ಶಿ ಪ್ರಭು ಅವರ ಬಾಡಿ ಗಾರ್ಡ್ ಡೇವಿಡ್ ಎಂದು ಗುರುತಿಸಲಾಗಿದೆ.
ಕೇವಲ 5000 ಜನರಿಗೆ ಅವಕಾಶ
ಇನ್ನು ಕರೂರು ಕಾಲ್ತುಳಿತ ದುರ್ಘಟನೆಯಲ್ಲಿ41 ಜನ ಸಾವನ್ನಪ್ಪಿದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ವಿಜಯ್ ಅವರ ಈ ಸಾರ್ವಜನಿಕ ಕಾರ್ಯಕ್ರಮ ಹೇಗೆ ನಡೆಯುತ್ತಿದೆ ಎಂಬುದನ್ನು ನೋಡುವುದಾದರೆ ಕಾರ್ಯಕ್ರಮಕ್ಕೆ ಕೇವಲ 5000 ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕಾರ್ಯಕ್ರಮಕ್ಕಾಗಿ ಸಹಸ್ರಾರು ವಿಜಯ್ ಬೆಂಬಲಿಗರು ಟಿವಿಕೆ ಕಾರ್ಯಕರ್ತರು ಸ್ಥಳಕ್ಕೆ ಪ್ರವೇಶಿಸಲು ಪ್ರಯತ್ನಿಸುವಾಗ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಅವರನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. ಆದರೂ ಜನ ಬ್ಯಾರಿಕೇಡ್‌ಗಳನ್ನು ಹಾರುತ್ತಿರುವುದು ಕಂಡುಬಂದಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿರುವುದು ಕಂಡು ಬಂದಿತ್ತು.
ಸಭೆಗೂ ಮುನ್ನ, ಪುದುಚೇರಿ ಪೊಲೀಸರು ಕಟ್ಟುನಿಟ್ಟಾದ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣ ಕ್ರಮಗಳನ್ನು ಕುರಿತು ವಿವರವಾದ ಸಲಹೆಯನ್ನು ನೀಡಿದರು. ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಕಾನೂನು ಮತ್ತು ಸುವ್ಯವಸ್ಥೆ) ಆರ್ ಕಲೈವಾಣನ್ ಅವರು, ತಮಿಳಗ ವೆಟ್ರಿ ಕಳಗಂ ವಿನಂತಿಸಿದಂತೆ ಹಾಜರಾತಿಯನ್ನು 5,000 ಜನರಿಗೆ ಕಟ್ಟುನಿಟ್ಟಾಗಿ ಸೀಮಿತಗೊಳಿಸಲಾಗಿದೆ ಎಂದು ಹೇಳಿದ್ದರು.
QR ಕೋಡ್ ಪಾಸ್ ಇದ್ದರೆ ಮಾತ್ರ ಎಂಟ್ರಿ
ನೆರೆಯ ತಮಿಳುನಾಡಿನ ನಿವಾಸಿಗಳು ಸ್ಥಳಕ್ಕೆ ಪ್ರವೇಶಿಸುವುದನ್ನು ಪೊಲೀಸರು ನಿಷೇಧಿಸಿದ್ದಾರೆ. ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರಿಗೆ ಪ್ರವೇಶವನ್ನು ನಿರಾಕರಿಸಲಾಗಿತ್ತು. ಪಕ್ಷವು ನೀಡಿದ ಮಾನ್ಯ QR ಕೋಡ್ ಪಾಸ್ ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಕಾರ್ಯಕ್ರಮದ ಸ್ಥಳಕ್ಕೆ ಪ್ರವೇಶಿಸಲು ಅವಕಾಶವಿತ್ತು. ಪುದುಚೇರಿ ಮರೀನಾ, ಕ್ರೀಡಾ ಕ್ರೀಡಾಂಗಣದ ಹಿಂಭಾಗ ಮತ್ತು ಹಳೆಯ ಬಂದರು ಪ್ರದೇಶ ಸೇರಿದಂತೆ ಗೊತ್ತುಪಡಿಸಿದ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ.
ಕುಡಿಯುವ ನೀರು, ಶೌಚಾಲಯ ಸೌಲಭ್ಯಗಳು, ಆಂಬ್ಯುಲೆನ್ಸ್‌ಗಳು, ಪ್ರಥಮ ಚಿಕಿತ್ಸಾ ವೈದ್ಯಕೀಯ ತಂಡಗಳು, ಅಗ್ನಿಶಾಮಕ ಯಂತ್ರಗಳು ಮತ್ತು ಸ್ಥಳದಲ್ಲಿ ಸರಿಯಾದ ತಡೆಗೋಡೆ ವ್ಯವಸ್ಥೆ ಮಾಡುವಂತೆ ಆಯೋಜಕರಿಗೆ ನಿರ್ದೇಶಿಸಲಾಗಿತ್ತು. ಇನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಿಜಯ್ ರೋಡ್ ಶೋಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕಟ್ಟುನಿಟ್ಟಿನ ಷರತ್ತುಗಳ ಅಡಿಯಲ್ಲಿ ಸಾರ್ವಜನಿಕ ಸಭೆಯನ್ನು ಮಾತ್ರ ನಡೆಸಲು ಅವಕಾಶ ನೀಡಿದ್ದಾರೆ ಎನ್ನಲಾಗಿದೆ.
ದುರಂತದ ಬೆನ್ನಲ್ಲೇ ಈ ಕಾರ್ಯಕ್ರಮ ಏಕೆ?
ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕರೂರ್ ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿರುವಾಗಲೇ ಈ ಸಭೆಯನ್ನು ಏರ್ಪಡಿಸಿರುವುದಕ್ಕೆ ಕಾರಣ ಏನು ಎಂಬುದನ್ನು ನೋಡುವುದಾದರೆ ತಮಿಳುನಾಡು, ಕೇರಳ ಮತ್ತು ಪುದುಚೇರಿಯಲ್ಲಿ ಭಾರೀ ಅಭಿಮಾನಿಗಳನ್ನು ಹೊಂದಿರುವ ವಿಜಯ್, ಕೇಂದ್ರಾಡಳಿತ ಪ್ರದೇಶದಲ್ಲಿ ತಮ್ಮ ಪಕ್ಷದ ಹೆಜ್ಜೆಗುರುತನ್ನು ಬಲಪಡಿಸುವ ಪ್ರಬಲ ಗುರಿಯನ್ನು ಹೊಂದಿದ್ದಾರೆ. ಅವರ ಈ ಭೇಟಿ ರಾಜಕೀಯವಾಗಿ ಮಹತ್ವದ್ದಾಗಿದೆ. ಆ ಮೂಲಕ ತಮ್ಮ ಪಕ್ಷ ಕೇವಲ ಒಂದೇ ರಾಜ್ಯಕ್ಕೆ ಸೀಮಿತವಾಗದೇ ನಿಧಾನಕ್ಕೆ ದಕ್ಷಿಣದಲ್ಲಿ ತನ್ನ ಛಾಪನ್ನು ಮೂಡಿಸುವ ಸಣ್ಣ ಪ್ರಯತ್ನದಲ್ಲಿದೆ ಟಿವಿಕೆ.
ಕರೂರ್‌ನಲ್ಲಿ ಏನಾಗಿತ್ತು?
ಸೆಪ್ಟೆಂಬರ್ 27ರಂದು ಸ್ಟಾರ್ ನಟ ವಿಜಯ್ ಅವರು ತಮ್ಮ ಹೊಸ ರಾಜಕೀಯ ಪಕ್ಷದ ಸಮಾವೇಶವನ್ನು ಕರೂರಿನಲ್ಲಿ ಆಯೋಜಿಸಿದ್ದರು. 10,000 ಜನರು ಬರುವ ನಿರೀಕ್ಷೆ ಇತ್ತು. ಆದರೆ, 27,000 ಜನರು ಸೇರಿದ್ದರು. ಈ ವೇಳೆ ನೂಕುನುಗ್ಗಲು ಹೆಚ್ಚಾಗಿ, ಕಾಲ್ತುಳಿತ ಸಂಭವಿಸಿ 41 ಮಂದಿ ಬಲಿಯಾಗಿದ್ದರು. ನಟ ವಿಜಯ್ ತಡವಾಗಿ ಬಂದಿದ್ದೇ ಕಾಲ್ತುಳಿತಕ್ಕೆ ಕಾರಣ ಎನ್ನುವುದು ಪೊಲೀಸರ ಮತ್ತು ತಮಿಳುನಾಡು ಸರ್ಕಾರದ ವಾದ. ಆದರೆ, ನಟ ವಿಜಯ್ ಹಾಗೂ ಇತರರು ಈ ಘಟನೆಯನ್ನು ಸ್ವತಂತ್ರ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸುತ್ತಾ ಬಂದಿದ್ದರು. ಮದ್ರಾಸ್ ಹೈಕೋರ್ಟ್ನಿಂದ ಎಸ್ಐಟಿ ತನಿಖೆಗೆ ನೀಡಲಾಗಿದ್ದ ನಿರ್ದೇಶನವನ್ನು ವಿಜಯ್ ಅವರ ತಮಿಳಗ ವೆಟ್ರಿ ಕಳಗಂ ಪಕ್ಷ ಆಕ್ಷೇಪಿಸಿತ್ತು.
ತನಿಖೆ ಯಾವ ಹಂತದಲ್ಲಿದೆ?
ಇನ್ನು ಕರೂರು ಕಾಲ್ತುಳಿತ ಪ್ರಕರಣದ ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ನೋಡುವುದಾದರೆ, ಪ್ರಕರಣವನ್ನು ಸಿಬಿಐಗೆ ವಹಿಸಿ ಕಳೆದ ತಿಂಗಳು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು. ಸುಪ್ರೀಂಕೋರ್ಟ್ ಈ ಪ್ರಕರಣದ ಮೇಲ್ವಿಚಾರಣೆ ನಡೆಸಲು ಮೂರು ಸದಸ್ಯರ ಮಂಡಳಿಯನ್ನು ರಚಿಸಿದೆ. ಮಾಜಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅಜಯ್ ರಸ್ತೋಗಿ ಅವರಿಗೆ ಈ ಮಂಡಳಿಯ ನೇತೃತ್ವ ವಹಿಸಲಾಗಿದೆ. ಈ ಪ್ರಕರಣದಲ್ಲಿ ಸಿಬಿಐ ತನಿಖೆಯ ಮೇಲೆ ನಿಗಾ ಇಡುವಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ನ್ಯಾ| ರಸ್ತೋಗಿ ಅವರಿಗೆ ಕೋರ್ಟ್ ಸೂಚನೆ ನೀಡಿದೆ.

