
ದೇಶಾದ್ಯಂತ ವೈಕುಂಠ ಏಕಾದಶಿ ಸಂಭ್ರಮ: ವೆಂಕಟೇಶ್ವರ ಸನ್ನಿಧಿಗಳಲ್ಲಿ ಭಕ್ತ ಸಾಗರ
ವೈಕುಂಠ ಏಕಾದಶಿ 2025ರ ಪ್ರಯುಕ್ತ ಬೆಂಗಳೂರಿನ ಅಮೃತ ನಗರದ ಲಕ್ಷ್ಮಿ ವೆಂಕಟೇಶ್ವರ ದೇಗುಲ ಹಾಗೂ ತಿರುಪತಿಯಲ್ಲಿ ಭಕ್ತ ಸಾಗರವೇ ಹರಿದುಬಂದಿದೆ. ಚಳಿಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ವೈಕುಂಠ ದ್ವಾರ ದರ್ಶನ ಪಡೆಯುತ್ತಿದ್ದಾರೆ.
ಇಂದು ಪವಿತ್ರ ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ದೇಶಾದ್ಯಂತ ಹಬ್ಬದ ಕಳೆ ಮನೆಮಾಡಿದೆ. ಮುಂಜಾನೆಯಿಂದಲೇ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಪುನಸ್ಕಾರಗಳು ಆರಂಭವಾಗಿದ್ದು, ಭಕ್ತರು ಪರಮಾತ್ಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.
ತಿರುಪತಿಯಲ್ಲಿ ಭಕ್ತರ ಮಹಾಪೂರ
ವಿಶ್ವಪ್ರಸಿದ್ಧ ತಿರುಪತಿ ತಿರುಮಲ ಕ್ಷೇತ್ರಕ್ಕೆ ವೈಕುಂಠ ದ್ವಾರ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ಭಕ್ತ ಸಾಗರವೇ ಹರಿದುಬಂದಿದೆ. ಬೆಳಿಗ್ಗೆ 12:05 ಕ್ಕೆ ವೈಕುಂಠ ದ್ವಾರ ತೆರೆದಿದ್ದು, ವೆಂಕಟೇಶ್ವರನ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗ್ತಿದೆ. ತಿಮ್ಮಪ್ಪನ ಸನ್ನಿಧಿಯಲ್ಲಿ 'ಗೋವಿಂದ' ನಾಮಸ್ಮರಣೆ ಮುಗಿಲು ಮುಟ್ಟಿದ್ದು, ಸಾವಿರಾರು ಭಕ್ತರು ವೈಕುಂಠ ದ್ವಾರದ ಮೂಲಕ ಪ್ರವೇಶಿಸಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ತಿರುಮಲ ತಿರುಪತಿ ದೇವಸ್ಥಾನಗಳು (ಟಿಟಿಡಿ) 10 ದಿನಗಳವರೆಗೆ, ಅಂದರೆ ಡಿಸೆಂಬರ್ 30 ರಿಂದ ಜನವರಿ 8, 2026 ರವರೆಗೆ ವೈಕುಂಠ ದ್ವಾರ ದರ್ಶನವನ್ನು ನೀಡುತ್ತಿವೆ. ಈ ವಿಶೇಷ ದರ್ಶನವು ವರ್ಷದಲ್ಲಿ ಈ ಹತ್ತು ದಿನಗಳವರೆಗೆ ಮಾತ್ರ ಲಭ್ಯವಿರುತ್ತದೆ, ಹೀಗಾಗಿ ಲಕ್ಷಾಂತರ ಭಕ್ತರು ಗೋವಿಂದನ ದರ್ಶನ ಪಡೆಯಲಿದ್ದಾರೆ.
ಬೆಂಗಳೂರಿನಲ್ಲಿ ಭಕ್ತಿಯ ಪರಾಕಾಷ್ಠೆ
ಇತ್ತ ರಾಜಧಾನಿ ಬೆಂಗಳೂರಿನಲ್ಲೂ ವೈಕುಂಠ ಏಕಾದಶಿಯ ಸಂಭ್ರಮ ಜೋರಾಗಿದೆ. ನಗರದ ಪ್ರಮುಖ ಶ್ರೀನಿವಾಸ ದೇಗುಲಗಳು ತಳಿರು-ತೋರಣ ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ. ವಿಶೇಷವಾಗಿ ಬೆಂಗಳೂರಿನ ಅಮೃತ ನಗರದಲ್ಲಿರುವ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ಸಾವಿರಾರು ಭಕ್ತರು ಜಮಾಯಿಸಿದ್ದಾರೆ. ಕಡು ಚಳಿಯನ್ನು ಲೆಕ್ಕಿಸದೆ, ಕಿಲೋಮೀಟರ್‌ಗಟ್ಟಲೆ ಉದ್ದದ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.
ಇಸ್ಕಾನ್ ದೇವಾಲಯ, ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ ಸೇರಿದಂತೆ ನಗರದಾದ್ಯಂತ ಇರುವ ವಿಷ್ಣು ದೇವಾಲಯಗಳಲ್ಲಿ ಭಕ್ತರಿಗಾಗಿ ವೈಕುಂಠ ದ್ವಾರಗಳನ್ನು ನಿರ್ಮಿಸಲಾಗಿದ್ದು, ಎಲ್ಲೆಡೆ ಹಬ್ಬದ ವಾತಾವರಣ ಮನೆಮಾಡಿದೆ.
ಬೆಂಗಳೂರಿನ ವೈಯಾಲಿಕಾವಲ್ ಟಿಟಿಡಿ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಮಧ್ಯರಾತ್ರಿ 1:30 ರಿಂದ ನಾಳೆ ರಾತ್ರಿ 11 ಘಂಟೆಯ ತನಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 80 ಸಾವಿರ ಭಕ್ತರು ಬರುವ ನಿರೀಕ್ಷೆ ಇದೆ. ಪ್ರತ್ಯೇಕ ಬ್ಯಾರಿಕೇಡ್ ಹಾಕಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗಿನ ಜಾವದಿಂದಲೇ ದರ್ಶನಕ್ಕೆ ಭಕ್ತರು ಆಗಮಿಸುತ್ತಿದ್ದಾರೆ.

