Vaikuntha Ekadashi celebrations to be held at TTD temple in Bengaluru on December 30; special arrangements for darshan
x

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಶ್ರೀವಾರಿ ದೇವಾಲಯ

ಬೆಂಗಳೂರಿನ ಟಿಟಿಡಿ ದೇವಾಲಯದಲ್ಲಿ ಡಿ.30ಕ್ಕೆ ವೈಕುಂಠ ಏಕಾದಶಿ; ದರ್ಶನಕ್ಕೆ ವಿಶೇಷ ವ್ಯವಸ್ಥೆ

ಮಂಗಳವಾರ ರಾತ್ರಿ 11.45 ರ ವರೆಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲು ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.


Click the Play button to hear this message in audio format

ವೈಕುಂಠ ಏಕಾದಶಿ ಪರ್ವ ದಿನದ ಪ್ರಯುಕ್ತ, ಬೆಂಗಳೂರಿನ ವೈಯಾಲಿಕಾವಲ್‌ನ 16ನೇ ಕ್ರಾಸ್‌ನಲ್ಲಿರುವ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಟಿಟಿಡಿ ಮಾಹಿತಿ ಕೇಂದ್ರದಲ್ಲಿ ಮಂಗಳವಾರ (ಡಿ.30) ಭಕ್ತರಿಗೆ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಟಿಟಿಡಿ ಬೆಂಗಳೂರು ಸಲಹಾ ಸಮಿತಿ ಅಧ್ಯಕ್ಷ ಕೆ. ವೀರಾಂಜನೇಯಲು ತಿಳಿಸಿದರು.

ಈ ಕುರಿತು ಮಾಹಿತಿ ನೀಡಿರುವ ಅವರು, "ವೈಕುಂಠ ಏಕಾದಶಿಯಂದು ಭಕ್ತರಿಗೆ ಸುಗಮ ಮತ್ತು ಅನುಕೂಲಕರ ದರ್ಶನ ಕಲ್ಪಿಸುವ ನಿಟ್ಟಿನಲ್ಲಿ ಸಮಿತಿಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಮಂಗಳವಾರ ಬೆಳಗಿನ ಜಾವ 1.35 ರಿಂದ ರಾತ್ರಿ 11.45 ರ ವರೆಗೆ ನಿರಂತರ ದರ್ಶನಕ್ಕೆ ಅವಕಾಶವಿರುತ್ತದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸರತಿ ಸಾಲಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಪವಿತ್ರ ದಿನದಂದು ಆಗಮಿಸುವ ಭಕ್ತಾದಿಗಳಿಗೆ ನಿರಂತರ ಅನ್ನಪ್ರಸಾದ ವಿನಿಯೋಗವಿರುತ್ತದೆ," ಎಂದು ತಿಳಿಸಿದರು.

ಟಿಟಿಡಿ ಉತ್ಪನ್ನ ಮಾರಾಟ

ದೇವಸ್ಥಾನದ ಆವರಣದಲ್ಲಿ ಬೆಳಗಿನ ಜಾವ 2ರಿಂದ ಪ್ರತೀ ಲಡ್ಡುಗೆ 50 ರೂ. ನಂತೆ ಶ್ರೀವಾರಿ ಲಡ್ಡು ಪ್ರಸಾದ ಮಾರಾಟ ಮಾಡಲಾಗುತ್ತಿದ್ದು, ದಾಸ್ತಾನು ಇರುವವರೆಗೂ ಇದು ಲಭ್ಯವಿರುತ್ತದೆ. ಭಕ್ತರ ಅನುಕೂಲಕ್ಕಾಗಿ 2026ರ ಟಿಟಿಡಿ ಡೈರಿಗಳು, ಕ್ಯಾಲೆಂಡರ್‌ಗಳು, ಅಗರಬತ್ತಿ ಮತ್ತು ಇತರೆ ಟಿಟಿಡಿ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಸಹ ತೆರೆಯಲಾಗುವುದು. ಈ ಬಾರಿ 70 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಮಾಹಿತಿ ನೀಡಿದರು.

ತ್ವರಿತ ದರ್ಶನಕ್ಕೂ ವ್ಯವಸ್ಥೆ

ದರ್ಶನಕ್ಕಾಗಿ 16 ನೇ ಕ್ರಾಸ್, ಚೌಡಯ್ಯ ಸ್ಮಾರಕ ಸಭಾಂಗಣದಿಂದ ಮತ್ತು 2 ನೇ ಮುಖ್ಯ ರಸ್ತೆಯಿಂದ ಸರತಿ ಸಾಲುಗಳು ಪ್ರಾರಂಭವಾಗುತ್ತವೆ. ಸ್ವಯಂಸೇವಕರ ಸಹಾಯದಿಂದ ವೃದ್ಧರು ಮತ್ತು ಅಂಗವಿಕಲರಿಗೆ ಆರಾಮದಾಯಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 200 ರೂ. ಪಾವತಿಸಿದವರಿಗೆ ತ್ವರಿತ ದರ್ಶನ ಮಾಡಲು ಅವಕಾಶ ನೀಡಲಾಗುವುದು ಎಂದರು.

ತಿರುಮಲದಲ್ಲೂ ಅಗತ್ಯ ಸಿದ್ಧತೆ

"ತಿರುಮಲದಲ್ಲಿಯೂ ವೈಕುಂಠ ಏಕಾದಶಿಯ ಪ್ರಯುಕ್ತ ಬೃಹತ್ ಮಟ್ಟದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಬಾರಿ ವೈಕುಂಠ ದ್ವಾರದ ಮೂಲಕ ಪ್ರತಿದಿನ ಸುಮಾರು 80,000 ಕ್ಕೂ ಹೆಚ್ಚು ಭಕ್ತರಿಗೆ ದರ್ಶನ ಭಾಗ್ಯವನ್ನು ಕಲ್ಪಿಸಲು ಟಿಟಿಡಿ ಆಡಳಿತ ಮಂಡಳಿ ಯೋಜಿಸಿದೆ. ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಕಾಯುವ ಸಮಯದಲ್ಲಿ ಅನ್ನಪ್ರಸಾದ ಮತ್ತು ಪಾನೀಯಗಳ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಭಕ್ತರ ಸುರಕ್ಷತೆ ಮತ್ತು ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ," ಎಂದು ವಿವರಿಸಿದರು.

ಏಕಾದಶಿ ದಿನವೇ ನಡೆದಿತ್ತು ಅವಘಡ

ತಿರುಮಲದಲ್ಲಿ ಜನವರಿ 8ರಂದು ನಡೆದ ವೈಕುಂಠ ಏಕಾದಶಿ ಪ್ರಯುಕ್ತ ಟೋಕನ್ ವಿತರಣೆಯ ವೇಳೆ ನಡೆದ ನೂಕುನುಗ್ಗಲಿನಿಂದ ಆರು ಭಕ್ತಾಧಿಗಳು ಮೃತಪಟ್ಟಿದ್ದು, 40ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ಗಾಯಗೊಂಡವರನ್ನು ತಿರುಪತಿಯ ರುಯಾ ಮತ್ತು ಸ್ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ತಿರುಪತಿಯ ವಿಷ್ಣು ನಿವಾಸಂ, ಶ್ರೀನಿವಾಸಂ ಮತ್ತು ಬೈರಾಗಿ ಪಟ್ಟೆಡಾ ಬಳಿಯ ಟೋಕನ್ ವಿತರಣಾ ಕೇಂದ್ರಗಳ ಬಳಿ ಈ ಘಟನೆ ಸಂಭವಿಸಿತ್ತು. ಸುಮಾರು 1.2 ಲಕ್ಷ ಸರ್ವ ದರ್ಶನ ಟೋಕನ್‌ಗಳನ್ನು ಪಡೆಯಲು ಲಕ್ಷಾಂತರ ಭಕ್ತರು ಏಕಕಾಲಕ್ಕೆ ಮುಗಿಬಿದ್ದ ಪರಿಣಾಮ ದುರಂತ ಸಂಭವಿಸಿತ್ತು.

Read More
Next Story