
ವಿಶ್ವಸಂಸ್ಥೆ ಬೆಂಬಲಿತ 66 ಜಾಗತಿಕ ಸಂಸ್ಥೆಗಳಿಂದ ಅಮೆರಿಕ ಹೊರಕ್ಕೆ: ಟ್ರಂಪ್ ಆದೇಶ
ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಒಪ್ಪಂದದಿಂದ ಅಮೆರಿಕ ಹೊರಬರುತ್ತಿರುವುದು ಜಾಗತಿಕ ಹವಾಮಾನ ಕ್ರಿಯೆಗೆ ದೊಡ್ಡ ಪೆಟ್ಟು ನೀಡಿದೆ. 1992ರ ಈ ಒಪ್ಪಂದವು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮೂಲಾಧಾರವಾಗಿದೆ.
ಜಾಗತಿಕ ಸಹಕಾರದಿಂದ ಅಮೆರಿಕವನ್ನು ಮತ್ತಷ್ಟು ದೂರವಿಡುವ ನಿಟ್ಟಿನಲ್ಲಿ ವಿಭಿನ್ನ ಹೆಜ್ಜೆ ಇಟ್ಟಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವಸಂಸ್ಥೆ (ಯುಎನ್) ಬೆಂಬಲಿತ ಬರೋಬ್ಬರಿ 66 ಅಂತಾರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ಆಯೋಗಗಳಿಂದ ಅಮೆರಿಕವನ್ನು ಹಿಂಪಡೆಯುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದಾರೆ. ಇದರಲ್ಲಿ ಹವಾಮಾನ ಬದಲಾವಣೆ, ಕಾರ್ಮಿಕ ಹಕ್ಕುಗಳು ಮತ್ತು ಜನಸಂಖ್ಯಾ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮುಖ ಸಂಸ್ಥೆಗಳು ಸೇರಿವೆ.
ಬುಧವಾರ (ಜ.7) ಟ್ರಂಪ್ ಈ ಮಹತ್ವದ ಆದೇಶಕ್ಕೆ ಸಹಿ ಹಾಕಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಅಮೆರಿಕದ ಭಾಗವಹಿಸುವಿಕೆ ಮತ್ತು ಅನುದಾನದ ಕುರಿತು ಮರುಪರಿಶೀಲನೆ ನಡೆಸುವಂತೆ ತಮ್ಮ ಆಡಳಿತಕ್ಕೆ ಸೂಚನೆ ನೀಡಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ. ಟ್ರಂಪ್ ಆಡಳಿತವು "ವೋಕ್" (woke) ಸಂಸ್ಕೃತಿ ಅಥವಾ ಅತಿಯಾದ ಉದಾರವಾದಿ ಮತ್ತು ವೈವಿಧ್ಯಮಯ ಉಪಕ್ರಮಗಳಿಗೆ ಒತ್ತು ನೀಡುತ್ತಿವೆ ಎಂದು ಪರಿಗಣಿಸಿರುವ ಹವಾಮಾನ ಮತ್ತು ಕಾರ್ಮಿಕ ವಲಯದ ಸಲಹಾ ಮಂಡಳಿಗಳನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಅನಗತ್ಯ ಮತ್ತು ದುಂದುವೆಚ್ಚದ ಆರೋಪ
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕದ ವಿದೇಶಾಂಗ ಇಲಾಖೆ (ಸ್ಟೇಟ್ ಡಿಪಾರ್ಟ್‌ಮೆಂಟ್), "ಟ್ರಂಪ್ ಆಡಳಿತವು ಈ ಸಂಸ್ಥೆಗಳನ್ನು ವ್ಯಾಪ್ತಿಮೀರಿದ, ಸರಿಯಾದ ನಿರ್ವಹಣೆ ಇಲ್ಲದ, ಅನಗತ್ಯ ಮತ್ತು ದುಂದುವೆಚ್ಚದ ಸಂಸ್ಥೆಗಳೆಂದು ಪರಿಗಣಿಸಿದೆ. ಇವು ಅಮೆರಿಕದ ಹಿತಾಸಕ್ತಿಗಳಿಗೆ ವಿರುದ್ಧವಾಗಿರುವ ಮತ್ತು ರಾಷ್ಟ್ರದ ಸಾರ್ವಭೌಮತ್ವ, ಸ್ವಾತಂತ್ರ್ಯ ಹಾಗೂ ಸಮೃದ್ಧಿಗೆ ಧಕ್ಕೆ ತರುವ ಅಜೆಂಡಾಗಳನ್ನು ಹೊಂದಿವೆ," ಎಂದು ಸಮರ್ಥಿಸಿಕೊಂಡಿದೆ. ಟ್ರಂಪ್ ಅವರ ಈ ನಡೆ, ಜಾಗತಿಕ ಸವಾಲುಗಳನ್ನು ಎದುರಿಸಲು ರಾಷ್ಟ್ರಗಳ ನಡುವಿನ ಸಹಕಾರವನ್ನು ಕಡಿತಗೊಳಿಸುವ ತಂತ್ರವಾಗಿದೆ. ಈಗಾಗಲೇ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸೆರೆ ಮತ್ತು ಗ್ರೀನ್‌ಲ್ಯಾಂಡ್ ಸ್ವಾಧೀನದ ಇರಾದೆಯಂತಹ ವಿಷಯಗಳಿಂದ ಮಿತ್ರರಾಷ್ಟ್ರಗಳು ಮತ್ತು ಎದುರಾಳಿಗಳಲ್ಲಿ ಆತಂಕ ಮೂಡಿಸಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಹವಾಮಾನ ಬದಲಾವಣೆ ಹೋರಾಟಕ್ಕೆ ಹಿನ್ನಡೆ
ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆಯ ಚೌಕಟ್ಟು ಒಪ್ಪಂದದಿಂದ (UNFCCC) ಅಮೆರಿಕ ಹೊರಬರುತ್ತಿರುವುದು ಜಾಗತಿಕ ಹವಾಮಾನ ಕ್ರಿಯೆಗೆ ದೊಡ್ಡ ಪೆಟ್ಟು ನೀಡಿದೆ. 1992ರ ಈ ಒಪ್ಪಂದವು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಮೂಲಾಧಾರವಾಗಿದೆ. ಹವಾಮಾನ ಬದಲಾವಣೆಯನ್ನು ಕೇವಲ "ಬೂಟಾಟಿಕೆ" ಎಂದು ಕರೆಯುವ ಟ್ರಂಪ್, ಶ್ವೇತಭವನಕ್ಕೆ ಮರಳಿದ ಕೂಡಲೇ ಪ್ಯಾರಿಸ್ ಒಪ್ಪಂದದಿಂದಲೂ ಹಿಂದೆ ಸರಿದಿದ್ದರು. ವಿಶ್ವದ ಅತಿದೊಡ್ಡ ಆರ್ಥಿಕತೆ ಮತ್ತು ಅತಿ ಹೆಚ್ಚು ಇಂಗಾಲ ಹೊರಸೂಸುವ ರಾಷ್ಟ್ರಗಳಲ್ಲಿ ಒಂದಾದ ಅಮೆರಿಕದ ಸಹಕಾರವಿಲ್ಲದೆ ಹವಾಮಾನ ಬದಲಾವಣೆ ವಿರುದ್ಧದ ಹೋರಾಟ ಕಷ್ಟಕರವಾಗಲಿದೆ ಎಂದು ವಿಜ್ಞಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಹವಾಮಾನ ವಿಜ್ಞಾನಿ ರಾಬ್ ಜಾಕ್ಸನ್ ಅವರ ಪ್ರಕಾರ, ಅಮೆರಿಕದ ಈ ನಡೆಯು ಇತರ ರಾಷ್ಟ್ರಗಳಿಗೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳಲು ನೆಪ ಒದಗಿಸಿದಂತಾಗುತ್ತದೆ.
ಆಯ್ದ ಸಂಸ್ಥೆಗಳಿಗೆ ಮಾತ್ರ ಮಣೆ
ಟ್ರಂಪ್ ಆಡಳಿತವು ವಿಶ್ವಸಂಸ್ಥೆಯೊಂದಿಗಿನ ವ್ಯವಹಾರದಲ್ಲಿ "ಬೇಕಾದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವ" (a-la-carte approach) ನೀತಿಯನ್ನು ಅನುಸರಿಸುತ್ತಿದೆ. ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿಲ್ಲದ ವಿಶ್ವ ಆರೋಗ್ಯ ಸಂಸ್ಥೆ (WHO), ಯುನೆಸ್ಕೋ (UNESCO) ಮತ್ತು ಮಾನವ ಹಕ್ಕುಗಳ ಮಂಡಳಿಯಂತಹ ಸಂಸ್ಥೆಗಳಿಂದ ಈಗಾಗಲೇ ಅಮೆರಿಕ ಬೆಂಬಲ ಹಿಂಪಡೆದಿದೆ. ಆದರೆ, ಚೀನಾದೊಂದಿಗೆ ತೀವ್ರ ಪೈಪೋಟಿ ಇರುವ ಅಂತಾರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ, ಅಂತಾರಾಷ್ಟ್ರೀಯ ಕಡಲ ಸಂಸ್ಥೆಗಳಂತಹ ಜಾಗತಿಕ ಮಾನದಂಡಗಳನ್ನು ರೂಪಿಸುವ ಸಂಸ್ಥೆಗಳಲ್ಲಿ ಅಮೆರಿಕ ತನ್ನ ಪ್ರಭಾವವನ್ನು ಮುಂದುವರಿಸಲು ನಿರ್ಧರಿಸಿದೆ.
ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಒದಗಿಸುವ ವಿಶ್ವಸಂಸ್ಥೆಯ ಜನಸಂಖ್ಯಾ ನಿಧಿಯ ಮೇಲೂ ಟ್ರಂಪ್ ಕೆಂಗಣ್ಣು ಬೀರಿದ್ದಾರೆ. ಚೀನಾದಂತಹ ದೇಶಗಳಲ್ಲಿ ಬಲವಂತದ ಗರ್ಭಪಾತಕ್ಕೆ ಈ ಸಂಸ್ಥೆ ಸಹಕರಿಸುತ್ತಿದೆ ಎಂದು ರಿಪಬ್ಲಿಕನ್ ಪಕ್ಷದ ನಾಯಕರು ಆರೋಪಿಸುತ್ತಲೇ ಬಂದಿದ್ದಾರೆ. ಬೈಡನ್ ಆಡಳಿತವಿದ್ದಾಗ ಈ ಆರೋಪಗಳಿಗೆ ಸಾಕ್ಷ್ಯವಿಲ್ಲ ಎಂದು ಕಂಡುಕೊಂಡು ಅನುದಾನವನ್ನು ಮರುಸ್ಥಾಪಿಸಲಾಗಿತ್ತು. ಈಗ ಟ್ರಂಪ್ ಮತ್ತೆ ಅನುದಾನ ಕಡಿತಗೊಳಿಸಿದ್ದಾರೆ. ಇವುಗಳಲ್ಲದೆ, ಇಂಟರ್‌ನ್ಯಾಷನಲ್ ಕಾಟನ್ ಅಡ್ವೈಸರಿ ಕಮಿಟಿ, ಇಂಟರ್‌ನ್ಯಾಷನಲ್ ಟ್ರಾಪಿಕಲ್ ಟಿಂಬರ್ ಆರ್ಗನೈಸೇಶನ್ ಮತ್ತು ಯುನೈಟೆಡ್ ನೇಷನ್ಸ್ ಯೂನಿವರ್ಸಿಟಿಯಂತಹ ಸಂಸ್ಥೆಗಳಿಂದಲೂ ಅಮೆರಿಕ ಹೊರಬರಲಿದೆ.

