
ವೆನೆಜುವೆಲಾ ಮೇಲೆ ಅಮೆರಿಕ ಕಬ್ಜ:50 ಮಿಲಿಯನ್ ಬ್ಯಾರೆಲ್ ತೈಲ ರಫ್ತು
ನಿಕೋಲಸ್ ಮಡುರೊ ಬಂಧನದ ನಂತರ ವೆನೆಜುವೆಲಾದಿಂದ ಅಮೆರಿಕಕ್ಕೆ ಭಾರಿ ಪ್ರಮಾಣದ ತೈಲ ರಫ್ತಾಗಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಸೇನಾ ಕಾರ್ಯಾಚರಣೆಯಲ್ಲಿ ಡಜನ್‌ಗಟ್ಟಲೆ ಸಾವು-ನೋವು ಸಂಭವಿಸಿದೆ.
ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಬಂಧಿಸಿ ಅಮೆರಿಕಕ್ಕೆ ಕರೆದೊಯ್ದ ಬೆನ್ನಲ್ಲೇ, ಅಲ್ಲಿನ "ಹಂಗಾಮಿ ಸರ್ಕಾರ" ಅಮೆರಿಕಕ್ಕೆ 30 ರಿಂದ 50 ಮಿಲಿಯನ್ ಬ್ಯಾರೆಲ್ ಉನ್ನತ ಗುಣಮಟ್ಟದ ತೈಲವನ್ನು ಮಾರುಕಟ್ಟೆ ದರದಲ್ಲಿ ಪೂರೈಸಲು ಮುಂದಾಗಿದೆ. ಈ ಬಗ್ಗೆ ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಈ ತೈಲದಿಂದ ಬರುವ ಹಣವನ್ನು ಅಮೆರಿಕ ಮತ್ತು ವೆನೆಜುವೆಲಾ ಎರಡೂ ದೇಶಗಳ ಜನರ ಹಿತದೃಷ್ಟಿಯಿಂದ ಸದ್ಬಳಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಇನ್ನು ಈ ಉಭಯ ರಾಷ್ಟ್ರಗಳ ನಡುವಿನ ತೈಲ ವ್ಯಾಪಾರದ ಮೌಲ್ಯ ಸರಿಸುಮಾರು 2.8 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ.
ಸೇನಾ ಕಾರ್ಯಾಚರಣೆಯಲ್ಲಿ ಅನೇಕರು ಬಲಿ
ಇನ್ನು ಮಡುರೊ ಅವರನ್ನು ಸೆರೆಹಿಡಿಯಲು ಅಮೆರಿಕ ನಡೆಸಿದ ಮಧ್ಯರಾತ್ರಿಯ ಕಾರ್ಯಾಚರಣೆಯಲ್ಲಿ ವೆನೆಜುವೆಲಾದ ಕನಿಷ್ಠ 24 ಭದ್ರತಾ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಕ್ಯಾರಕಾಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ವೆನೆಜುವೆಲಾದಲ್ಲಿದ್ದ ಕ್ಯೂಬಾದ 32 ಮಿಲಿಟರಿ ಅಧಿಕಾರಿಗಳು ಸಹ ಈ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ.
ಮಡುರೊ ವಿರುದ್ಧ ಡ್ರಗ್ ಟ್ರಾಫಿಕಿಂಗ್ ಆರೋಪಗಳಿದ್ದು, ಅವರ ಬಂಧನಕ್ಕೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು ಟ್ರಂಪ್ ಆಡಳಿತವು 50 ಮಿಲಿಯನ್ ಡಾಲರ್‌ಗೆ (ಅಂದಾಜು 415 ಕೋಟಿ ರೂ.) ಹೆಚ್ಚಿಸಿತ್ತು.
ತೈಲ ಕಂಪನಿಗಳೊಂದಿಗೆ ಸಭೆ
ಅಮೆರಿಕದ ಈ ನಡೆಯು ಕೇವಲ ಬಂಧನಕ್ಕೆ ಸೀಮಿತವಾಗಿಲ್ಲ, ಬದಲಿಗೆ ವೆನೆಜುವೆಲಾದ ಬೃಹತ್ ತೈಲ ನಿಕ್ಷೇಪಗಳ ಮೇಲೆ ಹಿಡಿತ ಸಾಧಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಶ್ವೇತಭವನವು ಈ ಶುಕ್ರವಾರ ಎಕ್ಸಾನ್, ಚೆವ್ರಾನ್ ಮತ್ತು ಕೊನೊಕೊಫಿಲಿಪ್ಸ್ ನಂತಹ ಜಾಗತಿಕ ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಮಹತ್ವದ ಸಭೆ ಕರೆದಿದೆ. ವೆನೆಜುವೆಲಾದ ತೈಲ ಸಂಪತ್ತನ್ನು ಅಮೆರಿಕದ ಇಂಧನ ಕಂಪನಿಗಳಿಗೆ ಮುಕ್ತಗೊಳಿಸುವುದು ಟ್ರಂಪ್ ಸರ್ಕಾರದ ನೇರ ಗುರಿಯಾಗಿದೆ.
ಟ್ರಂಪ್ ವಾದವೇನು?
ಡೆಮೋಕ್ರಾಟ್ ಪಕ್ಷದ ಟೀಕೆಗಳಿಗೆ ಉತ್ತರಿಸಿದ ಟ್ರಂಪ್, "ಜೋ ಬೈಡನ್ ಕೂಡ ಮಡುರೊ ಬಂಧನಕ್ಕೆ ಕರೆ ನೀಡಿದ್ದರು. ಇಷ್ಟು ದೊಡ್ಡ ಕಾರ್ಯಾಚರಣೆ ಯಶಸ್ವಿಯಾದಾಗ ಅವರು ನನಗೆ ಅಭಿನಂದನೆ ಸಲ್ಲಿಸಬೇಕು" ಎಂದು ಹೇಳಿದ್ದಾರೆ. ವೆನೆಜುವೆಲಾದ ತೈಲ ನಿಕ್ಷೇಪಗಳನ್ನು ಅಮೆರಿಕದ ಕಂಪನಿಗಳಿಗೆ ಮುಕ್ತಗೊಳಿಸಲು ಅವರು ಒತ್ತಡ ಹೇರುತ್ತಿದ್ದಾರೆ.

