
`ನಾನು ಸಭ್ಯ ವ್ಯಕ್ತಿ… ನನ್ನನ್ನು ಕಿಡ್ನಾಪ್ ಮಾಡಲಾಗಿದೆʼ -ಕೋರ್ಟ್‌ನಲ್ಲಿ ಮಡುರೊ ಅಳಲು
ಅಮೆರಿಕದ ಮಿಲಿಟರಿ ಕಾರ್ಯಾಚರಣೆಯಲ್ಲಿ ಬಂಧಿತರಾದ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ನ್ಯೂಯಾರ್ಕ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಮೆರಿಕದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಕಾನೂನು ಕ್ರಮ ಎನ್ನಲಾದ ಕಾರ್ಯಾಚರಣೆಯಲ್ಲಿ ವೆನೆಜುವೆಲಾದ ನಾಯಕ ನಿಕೋಲಸ್ ಮಡುರೊ ಅವರನ್ನು ಬಂಧಿಸಿ ಸೋಮವಾರ ಮ್ಯಾನ್‌ಹ್ಯಾಟನ್‌ನ ಫೆಡರಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಈ ವೇಳೆ ಮಡುರೊ ತಮ್ಮ ಮೇಲಿನ ಡ್ರಗ್ ಟ್ರಾಫಿಕಿಂಗ್ (ಮಾದಕ ವಸ್ತು ಸಾಗಣೆ) ಆರೋಪಗಳನ್ನು ನಿರಾಕರಿಸಿದ್ದಲ್ಲದೆ, "ನಾನು ನನ್ನ ದೇಶದ ಅಧ್ಯಕ್ಷ ಮತ್ತು ಒಬ್ಬ ಸಭ್ಯ ಮನುಷ್ಯ" ಎಂದು ಪ್ರತಿಪಾದಿಸಿದರು.
ನ್ಯಾಯಾಲಯದಲ್ಲಿ ನಡೆದಿದ್ದೇನು?
ನೀಲಿ ಬಣ್ಣದ ಜೈಲು ಸಮವಸ್ತ್ರ ಧರಿಸಿದ್ದ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರನ್ನು ಸಶಸ್ತ್ರ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತರಲಾಯಿತು. ಸ್ಪ್ಯಾನಿಷ್ ಭಾಷೆಯಲ್ಲಿ ಮಾತನಾಡಿದ ಮಡುರೊ, "ನನ್ನನ್ನು ಸೆರೆಹಿಡಿಯಲಾಗಿದೆ. ನಾನು ನಿರಪರಾಧಿ, ನಾನು ತಪ್ಪಿತಸ್ಥನಲ್ಲ" ಎಂದು ಕೂಗಿದರು. ಆದರೆ ನ್ಯಾಯಾಧೀಶರು ಅವರ ಮಾತನ್ನು ಅರ್ಧಕ್ಕೆ ತಡೆದರು.
ಕೋರ್ಟ್‌ಗೆ ಹಾಜರಾದ ನಿಕೋಲಸ್ ಮಡುರೊ
ಶನಿವಾರ ಮುಂಜಾನೆ ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಅದ್ಭುತ ಮಿಲಿಟರಿ ಕಾರ್ಯಾಚರಣೆಯಲ್ಲಿ ಮಡುರೊ ದಂಪತಿಯನ್ನು ಅವರ ಮನೆಯಿಂದಲೇ ವಶಕ್ಕೆ ಪಡೆಯಲಾಗಿತ್ತು.
ಗಂಭೀರ ಆರೋಪಗಳು
ಅಮೆರಿಕದ ನ್ಯಾಯಾಂಗ ಇಲಾಖೆಯು ಮಡುರೊ ವಿರುದ್ಧ 25 ಪುಟಗಳ ಆರೋಪಪಟ್ಟಿಯನ್ನು ಸಲ್ಲಿಸಿದೆ.
ಮಾದಕ ವಸ್ತು ಸಾಗಣೆ: ಸಾವಿರಾರು ಟನ್ ಕೊಕೇನ್ ಅನ್ನು ಅಮೆರಿಕಕ್ಕೆ ಸಾಗಿಸಲು ಡ್ರಗ್ ಕಾರ್ಟೆಲ್‌ಗಳ ಜೊತೆ ಮಡುರೊ ಕೈಜೋಡಿಸಿದ್ದಾರೆ ಎಂಬ ಗಂಭೀರ ಆರೋಪವಿದೆ.
ಹಿಂಸಾಚಾರ ಮತ್ತು ಕೊಲೆ: ಡ್ರಗ್ ಹಣ ನೀಡದವರ ಅಥವಾ ತಮ್ಮ ದಾರಿಗೆ ಅಡ್ಡ ಬಂದವರ ಅಪಹರಣ, ಹಲ್ಲೆ ಮತ್ತು ಕೊಲೆಗೆ ಮಡುರೊ ದಂಪತಿ ಆದೇಶ ನೀಡಿದ್ದರು ಎಂದು ಆರೋಪಿಸಲಾಗಿದೆ.
ಲಂಚದ ಆರೋಪ: ಮಡುರೊ ಪತ್ನಿ ಸಿಲಿಯಾ ಅವರು ಮಾದಕ ವಸ್ತು ಸಾಗಣೆದಾರರಿಗೆ ಸಹಾಯ ಮಾಡಲು ಲಕ್ಷಾಂತರ ಡಾಲರ್ ಲಂಚ ಪಡೆದಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.
ಅಮೆರಿಕದ 'ಆಡಳಿತ' ಬದಲಾವಣೆ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದು, ವೆನೆಜುವೆಲಾವನ್ನು ತಾತ್ಕಾಲಿಕವಾಗಿ ಅಮೆರಿಕವೇ ಮುನ್ನಡೆಸಲಿದೆ ಎಂದು ಸೂಚಿಸಿದ್ದಾರೆ. ಅಲ್ಲದೆ, ಕೊಲಂಬಿಯಾದ ಅಧ್ಯಕ್ಷ ಗುಸ್ತಾವೊ ಪೆಟ್ರೋ ವಿರುದ್ಧವೂ ವಾಗ್ದಾಳಿ ನಡೆಸಿದ ಟ್ರಂಪ್, ಅವರು ಅಮೆರಿಕಕ್ಕೆ ಕೊಕೇನ್ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಮಡುರೊ ಪರ ವಕೀಲರು ಈ ಬಂಧನವನ್ನು ಕಾನೂನುಬಾಹಿರ ಎಂದು ವಾದಿಸುವ ಸಾಧ್ಯತೆಯಿದೆ. ಮಡುರೊ ಒಬ್ಬ ದೇಶದ ಸಾರ್ವಭೌಮ ಮುಖ್ಯಸ್ಥರಾಗಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಬರುವುದಿಲ್ಲ ಎಂಬುದು ಅವರ ವಾದ. ಆದರೆ, 2024ರ ವಿವಾದಿತ ಚುನಾವಣೆಯ ನಂತರ ಅಮೆರಿಕವು ಮಡುರೊ ಅವರನ್ನು ವೆನೆಜುವೆಲಾದ ಅಧಿಕೃತ ಅಧ್ಯಕ್ಷ ಎಂದು ಮಾನ್ಯ ಮಾಡಿಲ್ಲ.
ಮಡುರೊ ಅವರ ಮುಂದಿನ ವಿಚಾರಣೆಯು ಮಾರ್ಚ್ 17ಕ್ಕೆ ನಿಗದಿಯಾಗಿದೆ. ಅಪರಾಧ ಸಾಬೀತಾದಲ್ಲಿ ಅವರು ಜೀವಾವಧಿ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.

