
Telangana Sigachi pharma fire LIVE ’ ತೆಲಂಗಾಣ ಫಾರ್ಮಾ ಘಟಕದಲ್ಲಿ ಸ್ಫೋಟ : ಸಾವಿನ ಸಂಖ್ಯೆ 42ಕ್ಕೆ ಏರಿಕೆ, ₹1 ಕೋಟಿ ಪರಿಹಾರ ಘೋಷಣೆ
ಈ ಘಟನೆ ಕುರಿತು ಮಾಹಿತಿ ಪಡೆಯಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಮಂಗಳವಾರ ಬೆಳಿಗ್ಗೆ ದುರಂತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಸಿ. ದಾಮೋದರ್ ರಾಜನರಸಿಂಹ ತಿಳಿಸಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್ ಕೈಗಾರಿಕಾ ವಲಯದಲ್ಲಿರುವ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಘಟಕದಲ್ಲಿ ಸೋಮವಾರ ಸಂಭವಿಸಿದ ಭೀಕರ ರಿಯಾಕ್ಟರ್ ಸ್ಫೋಟ ಮತ್ತು ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿದೆ. ರಕ್ಷಣಾ ಕಾರ್ಯಕರ್ತರು ಭಗ್ನಾವಶೇಷಗಳನ್ನು ತೆರವುಗೊಳಿಸುವ ಕಾರ್ಯವನ್ನು ತೀವ್ರಗೊಳಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಸಾವು-ನೋವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರವು 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು. ಈ ವೇಳೆ, ಗಂಭೀರವಾಗಿ ಗಾಯಗೊಂಡವರಿಗೆ 10 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಅಲ್ಲದೆ, ಸಾವನ್ನಪ್ಪಿದವರ ಕುಟುಂಬಗಳಿಗೆ ತಕ್ಷಣದ ನೆರವುಗಾಗಿ 1 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ನೀಡಲು ಆದೇಶಿಸಿದ್ದಾರೆ. ಕಂಪನಿಯು ಸಹ ಪರಿಹಾರದಲ್ಲಿ ತನ್ನ ಪಾಲನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸೋಮವಾರ ಬೆಳಿಗ್ಗೆ 8.15 ರಿಂದ 9.35 ರ ನಡುವೆ ಮೈಕ್ರೋಕ್ರಿಸ್ಟಲೈನ್ ಸೆಲ್ಯುಲೋಸ್ (MCC) ಒಣಗಿಸುವ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ರಿಯಾಕ್ಟರ್ ಸ್ಫೋಟದ ತೀವ್ರತೆಗೆ ಕೈಗಾರಿಕಾ ಶೆಡ್ ಸಂಪೂರ್ಣವಾಗಿ ನೆಲಸಮವಾಗಿದ್ದು, ಕಾರ್ಮಿಕರನ್ನು ಹಲವು ಅಡಿಗಳಷ್ಟು ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಸ್ಫೋಟದ ನಂತರ ಹೊತ್ತಿಕೊಂಡ ಬೆಂಕಿ ಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದ್ದು, ನಿಯಂತ್ರಿಸಲು ದೊಡ್ಡ ಪ್ರಮಾಣದ ಅಗ್ನಿಶಾಮಕ ಕಾರ್ಯಾಚರಣೆ ಅಗತ್ಯವಾಯಿತು. ಘಟನಾ ಸ್ಥಳದಲ್ಲಿ National Disaster Response Force (NDRF), State Disaster Response Force (SDF) ಸಿಬ್ಬಂದಿ, ಸ್ಥಳೀಯ ಅಗ್ನಿಶಾಮಕ ದಳ ಮತ್ತು ಪೊಲೀಸರು ಅವಿರತವಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Live Updates
- 1 July 2025 2:51 PM IST
ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದ ಸಿ.ಎಂ ರೇವಂತ್ ರೆಡ್ಡಿ
ಸಿಗಾಚಿ ಫಾರ್ಮಾ ಇಂಡಸ್ಟ್ರೀಸ್‌ನಲ್ಲಿ ಸಂಭವಿಸಿದ ಸ್ಪೋಟದಲ್ಲಿ ಗಾಯಗೊಂಡು ಪತಂಚೇರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ತೆಲಂಗಾಣ ಸಿ.ಎಂ ರೇವಂತ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
- 1 July 2025 1:36 PM IST
ಸಿಗಾಚಿ ಕಂಪನಿ, ಸರ್ಕಾರದಿಂದ 1 ಕೋಟಿ ಪರಿಹಾರ : ಸಿಎಂ
ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಂಗಳವಾರ ತೆಲಂಗಾಣದ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್‌ನ ಫಾರ್ಮಾ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 1 ಕೋಟಿ ಪರಿಹಾರ ನೀಡುವ ಬಗ್ಗೆ ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್‌ನ ಆಡಳಿತ ಮಂಡಳಿಯೊಂದಿಗೆ ತಮ್ಮ ಸರ್ಕಾರ ಮಾತುಕತೆ ನಡೆಸಲಿದೆ ಎಂದು ತಿಳಿಸಿದ್ದಾರೆ.
ಈ ಸ್ಪೋಟದಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 10 ಲಕ್ಷ ರೂ., ಗಾಯಗೊಂಡು ಸ್ವಲ್ಪ ಚೇತರಿಸಿಕೊಂಡ ನಂತರ ಕೆಲಸಕ್ಕೆ ಮರಳಬಹುದಾದವರಿಗೆ 5 ಲಕ್ಷ ರೂ. ನೀಡಲಾಗುವುದು ಎಂದು ಸಿಎಂ ಹೇಳಿದರು.
"ಮೃತ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಕಂಪನಿ ಆಡಳಿತ ಮಂಡಳಿಯೊಂದಿಗೆ ಮಾತನಾಡಲಿದೆ. ಸರ್ಕಾರ ಮತ್ತು ಕಂಪನಿ ಎರಡೂ ಕಡೆಯಿಂದ 1 ಕೋಟಿ ರೂ. ಪರಿಹಾರ ನೀಡುವುದಾಗಿ ನಾನು ಆದೇಶ ಹೊರಡಿಸಿದ್ದೇನೆ. ಅಲ್ಲದೆ, ರಾಜ್ಯ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಮತ್ತು ಯಾವುದೇ ತಕ್ಷಣದ ಮತ್ತು ತುರ್ತು ವೆಚ್ಚಗಳನ್ನು ಪೂರೈಸಲು ಗಾಯಾಳುಗಳಿಗೆ 50,000 ರೂ. ಪಾವತಿಸಲಿದೆ ಎಂದು ಅವರು ಘೋಷಿಸಿದ್ದಾರೆ.
ಅಧಿಕಾರಿಗಳು ಒದಗಿಸಿದ ಮಾಹಿತಿಯ ಪ್ರಕಾರ, ಹೆಚ್ಚಿನ ಮೃತರು ಒಡಿಶಾ, ಬಿಹಾರ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ತೆಲಂಗಾಣ ರಾಜ್ಯದವರಾಗಿದ್ದರು. ಸ್ಫೋಟದ ಸಮಯದಲ್ಲಿ 143 ಜನರಿದ್ದರು, ಅದರಲ್ಲಿ 56 ಜನರು ಅಧಿಕಾರಿಗಳ ಸಂಪರ್ಕದಲ್ಲಿದ್ದಾರೆ. ಉಳಿದ ಜನರಿಗಾಗಿ ಹುಡುಕಾಟ ನಡೆಯುತ್ತಿದೆ. ಮೂವತ್ತಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವರು ಇನ್ನೂ ಕಾಣೆಯಾಗಿದ್ದಾರೆ. ಅಧಿಕಾರಿಗಳು ಮಾಹಿತಿ ಸಂಗ್ರಹಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಅವರು ತಿಳಿಸಿದರು.
ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ರಾಜ್ಯ ಸರ್ಕಾರ ಮತ್ತು ಸಿಗಾಚಿ ಭರಿಸುವುದು. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ಬಳಿಕ ಅವರು ಆಸ್ಪತ್ರೆಯಲ್ಲಿ ಗಾಯಾಳುಗಳನ್ನು ಭೇಟಿ ಮಾಡಿದರು.
- 1 July 2025 1:27 PM IST
ಸಿಗಾಚಿ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಸ್ಫೋಟ – ಕಂಪೆನಿ ಆಡಳಿತ ಮಂಡಳಿಗೆ ಛೀಮಾರಿ ಹಾಕಿದ ಸರ್ಕಾರ
ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್‌ನ ಆಡಳಿತ ಮಂಡಳಿ ವಿರುದ್ಧ ತೆಲಂಗಾಣ ಸರ್ಕಾರ ಮಂಗಳವಾರ ಛೀಮಾರಿ ಹಾಕಿದೆ. ತೆಲಂಗಾಣದ ಸಿಗಾಚಿ ಫಾರ್ಮಾ ಕಾರ್ಖಾನೆಯಲ್ಲಿ ಸ್ಪೋಟ ಸಂಭವಿಸಿ ಹಲವರು ಮೃತಪಟ್ಟಿದ್ದರೂ, ಈ ಘಟನೆ ಬಳಿಕ ಅಧಿಕಾರಿಗಳು ಸ್ಥಳದಲ್ಲಿಲ್ಲದಿರುವುದು ಸರ್ಕಾರವನ್ನು ಕೋಪಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಚಿವರಾದ ಶ್ರೀಧರ್ ಬಾಬು, ದಾಮೋದರ ರಾಜ ನರಸಿಂಹ, ಜಿ. ವಿವೇಕ್ ಮತ್ತು ಪಿ. ಋಷಿನಿವಾಸ ರೆಡ್ಡಿ ಅವರೊಂದಿಗೆ ಕಾರ್ಖಾನೆ ಸ್ಫೋಟ ಸ್ಥಳಕ್ಕೆ ಭೇಟಿ ನೀಡಿ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಪರಿಶೀಲಿಸಿದರು. ಹಿಂದಿನ ಇದೇ ರೀತಿಯ ಘಟನೆಗಳು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳು ಸೇರಿದಂತೆ ಘಟನೆಯ ಕುರಿತು ಸಮಗ್ರ ವರದಿಯನ್ನು ಮುಖ್ಯಮಂತ್ರಿ ಕೇಳಿದರು.
ಸಿಗಾಚಿಗೆ ಸೇರಿದ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಸ್ಫೋಟ ಮತ್ತು ಬೆಂಕಿ ಅವಘಡದಲ್ಲಿ ಸುಮಾರು 35ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಅಧಿಕ ಮಂದಿ ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ ಕಂಪನಿಯ ಅಧಿಕಾರಿಯೊಬ್ಬರು, ಸಿಗಾಚಿಯ ಸ್ಥಾಪಕ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು ಸೋಮವಾರ ಇಲ್ಲಿದ್ದರು ಎಂದು ತಿಳಿಸಿದರು.
"ದೊಡ್ಡ ಅಪಘಾತ ಸಂಭವಿಸಿದೆ. ಅವರು (ಹಿರಿಯ ಆಡಳಿತ ಮಂಡಳಿ) ಬರಬೇಕು. ಅವರು ಮೃತ ವ್ಯಕ್ತಿಯ ಕುಟುಂಬಗಳನ್ನು ಭೇಟಿ ಮಾಡಬೇಕು. ನೀವು ಪರಿಸ್ಥಿತಿಯನ್ನು ತಪ್ಪಿಸಲು ಸಾಧ್ಯವಿಲ್ಲ. ಅವರು ಬರಬೇಕು. ಅವರನ್ನು ಬರಲು ಹೇಳಿ," ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
"ನಿಮ್ಮ ಉನ್ನತ ಆಡಳಿತ ಮಂಡಳಿಯು 24 ಗಂಟೆಗಳ ನಂತರವೂ ಇಲ್ಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ಅವರು ಅಷ್ಟೊಂದು ಕಾರ್ಯನಿರತರಾಗಿದ್ದರೆ, ಅವರು ಕಾರ್ಖಾನೆಯನ್ನು ಏಕೆ ನಡೆಸಬೇಕು? ಇಂತಹ ದೊಡ್ಡ ಘಟನೆ, ಮಾರಕ ಘಟನೆ ನಡೆದಿದೆ. ಮತ್ತು ನಮ್ಮ ಸರ್ಕಾರ ಇದನ್ನು ತುಂಬಾ ಗಂಭೀರವಾಗಿ ಪರಿಗಣಿಸುತ್ತದೆ ಎಂದು ಶ್ರೀಧರ್ ಬಾಬು ಹೇಳಿದರು. ಕಳೆದ 24 ಗಂಟೆಗಳಿಂದ ಸಚಿವರಾದ ರಾಜ ನರಸಿಂಹ ಮತ್ತು ವಿವೇಕ್ ಅವರು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅವರು ಒತ್ತಿ ಹೇಳಿದರು.
- 1 July 2025 1:10 PM IST
ಸಂತಾಪ ಸೂಚಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯ್
"ತೆಲಂಗಾಣದಲ್ಲಿ ಸಂಭವಿಸಿದ ದುರಂತ ರಾಸಾಯನಿಕ ಕಾರ್ಖಾನೆ ಸ್ಫೋಟದಿಂದ ನಾನು ಆಘಾತಕ್ಕೊಳಗಾಗಿದ್ದೇನೆ. ಮೃತ ಕುಟುಂಬಗಳೊಂದಿಗೆ ಹಾಗೂ ಗಾಯಗೊಂಡ ಎಲ್ಲರೊಂದಿಗೂ ನಮ್ಮ ಸಹಾನುಭೂತಿ ಇರುತ್ತದೆ. ಕೇರಳ ರಾಜ್ಯವು ಸಂಪೂರ್ಣವಾಗಿ ಅವರೊಂದಿಗೆ ಏಕತೆಯಿಂದ ನಿಂತಿದೆʼʼ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯ್ ಸಂತಾಪ ಸೂಚಿಸಿದ್ದಾರೆ.
- 1 July 2025 11:31 AM IST
ಸಿಗಾಚಿ ಕಾರ್ಖಾನೆ ಸ್ಫೋಟ: ಸಿಎಂ ರೇವಂತ್ ರೆಡ್ಡಿ ಭೇಟಿ, ಸಂತ್ರಸ್ತರಿಗೆ ಚಿಕಿತ್ಸೆ ಭರವಸೆ
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್‌ನ ಫಾರ್ಮಾ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದ ಸ್ಥಳಕ್ಕೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮಂಗಳವಾರ ಭೇಟಿ ನೀಡಿದ್ದಾರೆ. ಈ ವೇಳೆ ಅವರೊಂದಿಗೆ ಕೆಲವು ಸಚಿವ ಸಂಪುಟ ಸಹೋದ್ಯೋಗಿಗಳೂ ಇದ್ದರು.
- 1 July 2025 10:38 AM IST
ಸಿಗಾಚಿ ಕಾರ್ಖಾನೆ ಸ್ಫೋಟ: ಸಿಎಂ ರೇವಂತ್ ರೆಡ್ಡಿ, ರಾಜ್ಯಪಾಲರಿಂದ ತೀವ್ರ ಸಂತಾಪ
ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಕಾರ್ಖಾನೆಯಲ್ಲಿ ಸಿಲುಕಿರುವ ಎಲ್ಲಾ ಕಾರ್ಮಿಕರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಗಾಯಗೊಂಡವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಸ್ಫೋಟಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲವಾದರೂ, ಪ್ರಾಥಮಿಕವಾಗಿ ರಾಸಾಯನಿಕ ಕ್ರಿಯೆಯಿಂದ ಇದು ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಈ ದುರಂತದಲ್ಲಿ ಈಗಾಗಲೇ 42 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆಯಿದೆ.
ತೆಲಂಗಾಣ ರಾಜ್ಯಪಾಲ ಜಿಷ್ಣು ದೇವ್ ವರ್ಮಾ ಕೂಡ ಈ ಭೀಕರ ಅಪಘಾತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ರಾಜ್ಯಪಾಲರು, ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಈ ಘಟನೆ ರಾಜ್ಯದಲ್ಲಿ ಕೈಗಾರಿಕಾ ಸುರಕ್ಷತೆಯ ಬಗ್ಗೆ ಗಂಭೀರ ಚರ್ಚೆಗೆ ನಾಂದಿ ಹಾಡಿದೆ.
- 1 July 2025 10:27 AM IST
ಪ್ರಧಾನಿ ಮೋದಿ ಸಂತಾಪ, ಮೃತರಿಗೆ 2 ಲಕ್ಷ ರೂ. ಪರಿಹಾರ ಘೋಷಣೆ
ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್‌ನ ಫಾರ್ಮಾ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಾಂತ್ವನ ಹೇಳಿರುವ ಪ್ರಧಾನಿಗಳು, ಮೃತರ ಕುಟುಂಬಗಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಯಿಂದ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಅಲ್ಲದೆ, ಈ ದುರ್ಘಟನೆಯಲ್ಲಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ನಗದು ಪರಿಹಾರವನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಘೋಷಿಸಿದೆ. ಸೋಮವಾರ ಸಂಭವಿಸಿದ ಈ ಸ್ಫೋಟದಲ್ಲಿ ಸಾವಿನ ಸಂಖ್ಯೆ 42ಕ್ಕೆ ಏರಿದ್ದು, ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಕಾರ್ಖಾನೆಯ ಡ್ರೈಯಿಂಗ್ ಘಟಕದಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.
- 1 July 2025 10:25 AM IST
5 ಕಿ.ಮೀ. ದೂರದವರೆಗೂ ಕೇಳಿದ ಸ್ಫೋಟದ ಸದ್ದು
ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಕಾರ್ಖಾನೆಯಲ್ಲಿ ಸೋಮವಾರ ಸಂಭವಿಸಿದ ಸ್ಫೋಟದ ಭೀಕರತೆ ಈಗ ಮತ್ತಷ್ಟು ಸ್ಪಷ್ಟವಾಗಿದೆ. ಸ್ಫೋಟದ ತೀವ್ರತೆಯು ಎಷ್ಟು ಪ್ರಬಲವಾಗಿತ್ತೆಂದರೆ, ಅದರ ಸದ್ದು ಸುಮಾರು 5 ಕಿಲೋಮೀಟರ್ ದೂರದವರೆಗೂ ಕೇಳಿಸಿದೆ. ಘಟನೆಯಿಂದ ಕಾರ್ಖಾನೆಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದ್ದು, ಭಾರೀ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿತ್ತು.
ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ 10 ವಾಹನಗಳನ್ನು ಬಳಸಲಾಗಿದೆ. ಇಡೀ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯ ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಸಿಬ್ಬಂದಿ ಪಾಲ್ಗೊಂಡು ರಕ್ಷಣಾ ಕಾರ್ಯ ನಡೆಸಿದರು.
ತೆಲಂಗಾಣ ರಾಜ್ಯ ವಿಪತ್ತು ನಿರ್ವಹಣೆ ಮತ್ತು ಅಗ್ನಿಶಾಮಕ ಸೇವೆಗಳ ನಿರ್ದೇಶಕ ವೈ. ನಾಗಿ ರೆಡ್ಡಿ ಅವರ ಪ್ರಕಾರ, "ಕಾರ್ಖಾನೆಯ ಡ್ರೈಯಿಂಗ್ ಘಟಕದಲ್ಲಿ ಒತ್ತಡ ಹೆಚ್ಚಾಗಿ ಸ್ಫೋಟ ಸಂಭವಿಸಿರುವ ಸಾಧ್ಯತೆ ಇದೆ." ಈ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಈಗಾಗಲೇ 42ಕ್ಕೆ ಏರಿದ್ದು, ಭಗ್ನಾವಶೇಷಗಳನ್ನು ತೆರವುಗೊಳಿಸುವ ಕಾರ್ಯ ಮುಂದುವರಿದಿರುವುದರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಮೃತದೇಹಗಳ ಗುರುತು ಪತ್ತೆಗಾಗಿ ಡಿಎನ್‌ಎ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ.
- 1 July 2025 10:24 AM IST
ಸಿಗಾಚಿ ಕಾರ್ಖಾನೆ ಸ್ಫೋಟ: 90 ಕಾರ್ಮಿಕರು ಪ್ರಮುಖ ಸ್ಫೋಟದ ಕೇಂದ್ರದಲ್ಲಿದ್ದರು, ಡಿಎನ್‌ಎ ಪರೀಕ್ಷೆ ಅಗತ್ಯ
ಸೋಮವಾರ ಬೆಳಿಗ್ಗೆ 9:28 ರಿಂದ 9:35ರ ನಡುವೆ ಸ್ಫೋಟ ಸಂಭವಿಸಿದ್ದು, ಆ ಸಮಯದಲ್ಲಿ ಸುಮಾರು 150 ಕಾರ್ಮಿಕರು ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಐಜಿಪಿ ವಿ. ಸತ್ಯನಾರಾಯಣ ಕಾರ್ಖಾನೆಯ ಮೂಲಗಳನ್ನು ಉಲ್ಲೇಖಿಸಿ ತಿಳಿಸಿದ್ದಾರೆ. ಸ್ಫೋಟದ ತೀವ್ರತೆಯು ಎಷ್ಟು ಭೀಕರವಾಗಿತ್ತೆಂದರೆ, ಸುಮಾರು 90 ಕಾರ್ಮಿಕರು ಸ್ಫೋಟ ಸಂಭವಿಸಿದ ಸ್ಥಳದ ಅತ್ಯಂತ ಸಮೀಪದಲ್ಲೇ ಇದ್ದರು ಎಂದು ಐಜಿಪಿ ಹೇಳಿದ್ದಾರೆ. ಈ ಕಾರಣದಿಂದಲೇ ಸಾವಿನ ಸಂಖ್ಯೆ ಏರಿಕೆ ಕಂಡಿದ್ದು, ಪ್ರಸ್ತುತ 42 ಮಂದಿ ಮೃತಪಟ್ಟಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ದುರದೃಷ್ಟವಶಾತ್, ಮೃತಪಟ್ಟವರಲ್ಲಿ ಕೆಲವರ ದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಹೀಗಾಗಿ, ಮೃತದೇಹಗಳ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದುರಂತದಲ್ಲಿ ಕುಟುಂಬಗಳನ್ನು ಕಳೆದುಕೊಂಡವರಿಗೆ ಇದು ಮತ್ತಷ್ಟು ನೋವು ತಂದಿದೆ.