
Telangana Sigachi pharma fire LIVE ’ ತೆಲಂಗಾಣ ಫಾರ್ಮಾ ಘಟಕದಲ್ಲಿ ಸ್ಫೋಟ : ಸಾವಿನ ಸಂಖ್ಯೆ 42ಕ್ಕೆ ಏರಿಕೆ, ₹1 ಕೋಟಿ ಪರಿಹಾರ ಘೋಷಣೆ
ಈ ಘಟನೆ ಕುರಿತು ಮಾಹಿತಿ ಪಡೆಯಲು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಮಂಗಳವಾರ ಬೆಳಿಗ್ಗೆ ದುರಂತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಸಿ. ದಾಮೋದರ್ ರಾಜನರಸಿಂಹ ತಿಳಿಸಿದ್ದಾರೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್ ಕೈಗಾರಿಕಾ ವಲಯದಲ್ಲಿರುವ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಘಟಕದಲ್ಲಿ ಸೋಮವಾರ ಸಂಭವಿಸಿದ ಭೀಕರ ರಿಯಾಕ್ಟರ್ ಸ್ಫೋಟ ಮತ್ತು ಅಗ್ನಿ ಅನಾಹುತದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿದೆ. ರಕ್ಷಣಾ ಕಾರ್ಯಕರ್ತರು ಭಗ್ನಾವಶೇಷಗಳನ್ನು ತೆರವುಗೊಳಿಸುವ ಕಾರ್ಯವನ್ನು ತೀವ್ರಗೊಳಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಸಾವು-ನೋವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರವು 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ. ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಹಾರ ಕಾರ್ಯಾಚರಣೆಗಳನ್ನು ಪರಿಶೀಲಿಸಿದರು. ಈ ವೇಳೆ, ಗಂಭೀರವಾಗಿ ಗಾಯಗೊಂಡವರಿಗೆ 10 ಲಕ್ಷ ರೂಪಾಯಿ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಘೋಷಿಸಿದರು. ಅಲ್ಲದೆ, ಸಾವನ್ನಪ್ಪಿದವರ ಕುಟುಂಬಗಳಿಗೆ ತಕ್ಷಣದ ನೆರವುಗಾಗಿ 1 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ನೀಡಲು ಆದೇಶಿಸಿದ್ದಾರೆ. ಕಂಪನಿಯು ಸಹ ಪರಿಹಾರದಲ್ಲಿ ತನ್ನ ಪಾಲನ್ನು ನೀಡಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ.
ಸೋಮವಾರ ಬೆಳಿಗ್ಗೆ 8.15 ರಿಂದ 9.35 ರ ನಡುವೆ ಮೈಕ್ರೋಕ್ರಿಸ್ಟಲೈನ್ ಸೆಲ್ಯುಲೋಸ್ (MCC) ಒಣಗಿಸುವ ಘಟಕದಲ್ಲಿ ಸ್ಫೋಟ ಸಂಭವಿಸಿದೆ ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ. ರಿಯಾಕ್ಟರ್ ಸ್ಫೋಟದ ತೀವ್ರತೆಗೆ ಕೈಗಾರಿಕಾ ಶೆಡ್ ಸಂಪೂರ್ಣವಾಗಿ ನೆಲಸಮವಾಗಿದ್ದು, ಕಾರ್ಮಿಕರನ್ನು ಹಲವು ಅಡಿಗಳಷ್ಟು ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಸ್ಫೋಟದ ನಂತರ ಹೊತ್ತಿಕೊಂಡ ಬೆಂಕಿ ಪಕ್ಕದ ಕಟ್ಟಡಗಳಿಗೂ ವ್ಯಾಪಿಸಿದ್ದು, ನಿಯಂತ್ರಿಸಲು ದೊಡ್ಡ ಪ್ರಮಾಣದ ಅಗ್ನಿಶಾಮಕ ಕಾರ್ಯಾಚರಣೆ ಅಗತ್ಯವಾಯಿತು. ಘಟನಾ ಸ್ಥಳದಲ್ಲಿ National Disaster Response Force (NDRF), State Disaster Response Force (SDF) ಸಿಬ್ಬಂದಿ, ಸ್ಥಳೀಯ ಅಗ್ನಿಶಾಮಕ ದಳ ಮತ್ತು ಪೊಲೀಸರು ಅವಿರತವಾಗಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
Live Updates
- 1 July 2025 9:44 AM IST
ತೆಲಂಗಾಣದ ಸಿಗಾಚಿ ಫಾರ್ಮಾ ಕಾರ್ಖಾನೆ ಸ್ಫೋಟ: ಸಾವಿನ ಸಂಖ್ಯೆ 42ಕ್ಕೆ ಏರಿಕೆ, ಮತ್ತಷ್ಟು ಏರುವ ಸಾಧ್ಯತೆ
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಪಾಶಮೈಲಾರಾಮ್‌ನಲ್ಲಿರುವ ಸಿಗಾಚಿ ಇಂಡಸ್ಟ್ರೀಸ್‌ನ ಫಾರ್ಮಾ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ ಮೃತರ ಸಂಖ್ಯೆ 42ಕ್ಕೆ ಏರಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸ್ಫೋಟ ಸಂಭವಿಸಿದ ನಂತರ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಗ್ನಾವಶೇಷಗಳಿಂದ ಇನ್ನಷ್ಟು ಶವಗಳನ್ನು ಹೊರತೆಗೆಯಲಾಗುತ್ತಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತವು ಸೋಮವಾರ ಸಂಭವಿಸಿದ್ದು, ಕಾರ್ಖಾನೆಯಲ್ಲಿ ನಡೆದ ರಾಸಾಯನಿಕ ಕ್ರಿಯೆಯೇ ಸ್ಫೋಟಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಸಿಗಾಚಿ ಇಂಡಸ್ಟ್ರೀಸ್ ಲಿಮಿಟೆಡ್ ಔಷಧೀಯ ಪದಾರ್ಥಗಳ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ ಕಂಪನಿಯಾಗಿದೆ.