
158 ಪ್ರಯಾಣಿಕರಿದ್ದ ಎಕ್ಸ್‌ಪ್ರೆಸ್ ರೈಲಿನ ಬೋಗಿಗಳಲ್ಲಿ ಅಗ್ನಿ ಅವಘಡ; ಒಬ್ಬ ಸಾವು
ಆಂಧ್ರಪ್ರದೇಶದ ಯಲಮಂಚಿಲಿ ಬಳಿ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಎರಡು ಎಸಿ ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ವಿಜಯವಾಡದ 70 ವರ್ಷದ ವೃದ್ಧ ಸಾವನ್ನಪ್ಪಿದ್ದಾನೆ.
ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಇಲ್ಲಿ ಯಲಮಂಚಿಲಿ ಎಂಬಲ್ಲಿ ಸೋಮವಾರ ಮುಂಜಾನೆ ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡು ಒಬ್ಬ ಪ್ರಯಾಣಿಕ ದಾರುಣವಾಗಿ ಮೃತಪಟ್ಟಿದ್ದಾನೆ. ವಿಶಾಖಪಟ್ಟಣಂನಿಂದ ಸುಮಾರು 66 ಕಿ.ಮೀ ದೂರದಲ್ಲಿ ಈ ಭೀಕರ ಘಟನೆ ನಡೆದಿದೆ.
ಘಟನೆಯ ವಿವರ
ಪೊಲೀಸ್ ಮೂಲಗಳ ಪ್ರಕಾರ, ಸೋಮವಾರ ಮುಂಜಾನೆ ಸುಮಾರು 12:45ಕ್ಕೆ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದಿದೆ. ಪ್ಯಾಂಟ್ರಿ ಕಾರ್ ಪಕ್ಕದಲ್ಲಿದ್ದ B1 ಮತ್ತು M2 ಎಸಿ ಬೋಗಿಗಳಲ್ಲಿ ಬೆಂಕಿ ವ್ಯಾಪಿಸಿತ್ತು. ಬೆಂಕಿ ಹೊತ್ತಿಕೊಂಡಾಗ ಒಂದು ಬೋಗಿಯಲ್ಲಿ 82 ಮತ್ತು ಮತ್ತೊಂದು ಬೋಗಿಯಲ್ಲಿ 76 ಪ್ರಯಾಣಿಕರಿದ್ದರು. ರೈಲಿನ ಲೋಕೋ ಪೈಲಟ್‌ಗಳು ಸಮಯಪ್ರಜ್ಞೆ ಮೆರೆದು ತಕ್ಷಣವೇ ರೈಲನ್ನು ನಿಲ್ಲಿಸಿದ್ದರಿಂದ ಹೆಚ್ಚಿನ ಪ್ರಾಣಾಪಾಯ ತಪ್ಪಿದೆ.
ದುರ್ಘಟನೆ ವಿಡಿಯೊ ಇಲ್ಲಿದೆ
ವೃದ್ಧನ ದುರ್ಮರಣ
ದಟ್ಟವಾದ ಹೊಗೆ ಮತ್ತು ಬೆಂಕಿಯ ಜ್ವಾಲೆಯಿಂದಾಗಿ ಪ್ರಯಾಣಿಕರಲ್ಲಿ ಆತಂಕ ಮನೆಮಾಡಿತು. ಎಲ್ಲರೂ ರೈಲಿನಿಂದ ಹೊರಗೆ ಓಡಿ ಬಂದರಾದರೂ, ಸಂಪೂರ್ಣ ಸುಟ್ಟು ಕರಕಲಾಗಿದ್ದ B1 ಬೋಗಿಯಲ್ಲಿ ಒಬ್ಬರ ಮೃತದೇಹ ಪತ್ತೆಯಾಗಿದೆ. ಮೃತರನ್ನು ವಿಜಯವಾಡ ಮೂಲದ 70 ವರ್ಷದ ಚಂದ್ರಶೇಖರ್ ಸುಂದರ್ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಎರಡೂ ಬೋಗಿಗಳು ಸಂಪೂರ್ಣ ಸುಟ್ಟು ಹೋಗಿದ್ದವು.
ಪ್ರಯಾಣಿಕರ ಪರದಾಟ
ಈ ಅವಘಡದಿಂದಾಗಿ ರೈಲಿನಲ್ಲಿದ್ದ ಪ್ರಯಾಣಿಕರ ಎಲ್ಲಾ ಬಟ್ಟೆಬರೆ ಮತ್ತು ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯ ನಂತರ ವಿಶಾಖಪಟ್ಟಣಂ-ವಿಜಯವಾಡ ಮಾರ್ಗದ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಸುಮಾರು 2,000 ಪ್ರಯಾಣಿಕರು ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದರು. ಸುಟ್ಟ ಬೋಗಿಗಳನ್ನು ಬೇರ್ಪಡಿಸಿದ ನಂತರ, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿ ರೈಲನ್ನು ಗಮ್ಯಸ್ಥಾನಕ್ಕೆ ಕಳುಹಿಸಿಕೊಡಲಾಯಿತು.

