
ಧರ್ಮ vs ಹಕ್ಕು: 7 ವರ್ಷದ ಬಾಲಕಿಯ ದೀಕ್ಷೆಗೆ ಸೂರತ್ ನ್ಯಾಯಾಲಯದಿಂದ ತಡೆ!
ಮಗುವಿನ ತಂದೆ 'ಪಾಲಕರು ಮತ್ತು ವಾರ್ಡ್‌ಗಳ ಕಾಯ್ದೆ, 1890' ಅಡಿಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮ್ಮನ್ನು ಮಗುವಿನ ಕಾನೂನು ಪಾಲಕರನ್ನಾಗಿ ನೇಮಕ ಮಾಡುವಂತೆ ಕೋರಿದ್ದರು.
ಗುಜರಾತ್‌ನ ಸೂರತ್‌ನಲ್ಲಿ ಒಂದು ಕೌಟುಂಬಿಕ ನ್ಯಾಯಾಲಯವೊಂದು ನೀಡಿರುವ ತೀರ್ಪು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಕೇವಲ ಏಳು ವರ್ಷದ ಬಾಲಕಿಯೊಬ್ಬಳಿಗೆ ಜೈನ ಸನ್ಯಾಸತ್ವಕ್ಕೆ ದೀಕ್ಷೆ ನೀಡುವ ಮಹತ್ವದ ಧಾರ್ಮಿಕ ನಿರ್ಧಾರಕ್ಕೆ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಮಗುವಿನ ತಂದೆ, ತಮ್ಮ ಒಪ್ಪಿಗೆಯಿಲ್ಲದೆ ಮತ್ತು ಮಗು ಅಪ್ರಾಪ್ತ ವಯಸ್ಸಿನದಾಗಿರುವ ಕಾರಣ ಈ ಧಾರ್ಮಿಕ ಕಾರ್ಯವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.
ಸೂರತ್‌ನ ಕುಟುಂಬ ನ್ಯಾಯಾಲಯದ ನ್ಯಾಯಾಧೀಶ ಎಸ್.ವಿ. ಮನ್ಸೂರಿ ಅವರು, 2026ರ ಫೆಬ್ರವರಿ 8ರಂದು ಮುಂಬೈನಲ್ಲಿ ನಡೆಯಲಿದ್ದ ಬಾಲಕಿಯ 'ದೀಕ್ಷಾ' ಸಮಾರಂಭಕ್ಕೆ ತಾತ್ಕಾಲಿಕ ತಡೆ ನೀಡುವ ಆದೇಶವನ್ನು ಹೊರಡಿಸಿದ್ದಾರೆ. ಅಷ್ಟೇ ಅಲ್ಲದೆ, ನ್ಯಾಯಾಲಯದ ಮುಂದಿನ ನಿರ್ದೇಶನ ಬರುವವರೆಗೆ ಮಗುವನ್ನು ದೀಕ್ಷಾ ಸಮಾರಂಭದಲ್ಲಿ ಭಾಗವಹಿಸದಂತೆ ನೋಡಿಕೊಳ್ಳುವುದಾಗಿ ತಾಯಿಯು ಅಫಿಡವಿಟ್ ಸಲ್ಲಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.
ತಂದೆಯಿಂದಲೇ ಪ್ರಶ್ನೆ
ಮಗುವಿನ ತಂದೆ 'ಪಾಲಕರು ಮತ್ತು ವಾರ್ಡ್‌ಗಳ ಕಾಯ್ದೆ, 1890' ಅಡಿಯಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ತಮ್ಮನ್ನು ಮಗುವಿನ ಕಾನೂನು ಪಾಲಕರನ್ನಾಗಿ ನೇಮಕ ಮಾಡುವಂತೆ ಕೋರಿದ್ದರು. ತನ್ನಿಂದ ದೂರವಾಗಿರುವ ಪತ್ನಿ, ಬಾಲಕಿಯ ಸಣ್ಣ ವಯಸ್ಸಿನ ಹೊರತಾಗಿಯೂ, ತಮ್ಮ ಅನುಮತಿ ಪಡೆಯದೆ ಏಕಪಕ್ಷೀಯವಾಗಿ ದೀಕ್ಷೆ ನೀಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಏಳು ವರ್ಷದ ಮಗುವಿಗೆ ಇಷ್ಟು ದೊಡ್ಡ ಜೀವನದ ನಿರ್ಧಾರ ತೆಗೆದುಕೊಳ್ಳಲು ಅಗತ್ಯ ತಿಳಿವಳಿಕೆ ಅಥವಾ ಸಾಮರ್ಥ್ಯವಿಲ್ಲ ಎಂದು ತಂದೆ ವಾದಿಸಿದ್ದಾರೆ. ಈ ನಡುವೆ, ಪತ್ನಿಯು ತನ್ನ ಒಪ್ಪಿಗೆ ಇಲ್ಲದೆ ಮಗುವನ್ನು ಅಹಮದಾಬಾದ್ ಮತ್ತು ಮುಂಬೈನಲ್ಲಿರುವ ಜೈನ ಮುನಿಗಳ ಆಶ್ರಮಗಳಿಗೆ ಕರೆದೊಯ್ದಿದ್ದಾರೆ ಮತ್ತು ಮಗುವನ್ನು ಭೇಟಿಯಾಗಲು ಕೂಡ ಬಿಟ್ಟಿಲ್ಲ ಎಂದೂ ಅವರು ದೂರಿದ್ದಾರೆ.
ದಂಪತಿಗಳು 2012ರಲ್ಲಿ ವಿವಾಹವಾಗಿದ್ದು, 2024ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ತಂದೆಯ ಅರ್ಜಿಯ ಪ್ರಕಾರ, ದೀಕ್ಷೆಗೆ ಒಪ್ಪಿದರೆ ಮಾತ್ರ ಮನೆಗೆ ಮರಳಿ ಬರುವುದಾಗಿ ತಾಯಿ ಷರತ್ತು ವಿಧಿಸಿದ್ದರು.
ತಾಯಿಯಿಂದ ಫೋಟೋಗಳ ಮೂಲಕ ತೀವ್ರ ವಿರೋಧ
ನ್ಯಾಯಾಲಯದ ಆದೇಶಕ್ಕೆ ಪ್ರತಿಕ್ರಿಯಿಸಿದ ಬಾಲಕಿಯ ತಾಯಿ, ತಂದೆಯ ಹಕ್ಕುಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸಿದ್ದಾರೆ ಮತ್ತು ಛಾಯಾಚಿತ್ರಗಳು ಹಾಗೂ ದಾಖಲೆಗಳನ್ನು ಹಾಜರುಪಡಿಸಿದ್ದಾರೆ. ಈ ನಿರ್ಧಾರವನ್ನು ತಂದೆಯ ಅನುಮತಿಯಿಲ್ಲದೆ ತೆಗೆದುಕೊಳ್ಳಲಾಗಿದೆ ಎಂಬ ವಾದವನ್ನು ಅವರು ನಿರಾಕರಿಸಿದ್ದಾರೆ.
ದೀಕ್ಷೆಗೆ ಆಚಾರ್ಯರಿಂದ ಅನುಮತಿ ಪಡೆಯಲಾದ ಹಿಂದಿನ ಧಾರ್ಮಿಕ ಸಮಾರಂಭದಲ್ಲಿ ತಂದೆ ಮತ್ತು ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು ಎಂಬುದಕ್ಕೆ ಸಾಕ್ಷಿಯಾಗಿ ಫೋಟೋಗಳನ್ನು ಸಲ್ಲಿಸಿದ್ದಾರೆ. ಈ ಪ್ರಕ್ರಿಯೆಯ ಬಗ್ಗೆ ತಂದೆಗೆ ಸಂಪೂರ್ಣ ಅರಿವಿತ್ತು ಮತ್ತು ಅವರು ಅದಕ್ಕೆ ಒಪ್ಪಿಗೆ ನೀಡಿದ್ದರು ಎಂದು ಅವರು ಕೋರ್ಟ್‌ಗೆ ತಿಳಿಸಿದ್ದಾರೆ. ತಂದೆಗೆ ಆಕ್ಷೇಪಣೆ ಇದ್ದಿದ್ದರೆ, ಅವರು ನ್ಯಾಯಾಲಯವನ್ನು ಸಂಪರ್ಕಿಸುವ ಬದಲು ಧಾರ್ಮಿಕ ನಾಯಕರ ಬಳಿಯೇ ಆಕ್ಷೇಪಣೆ ಎತ್ತಬಹುದಿತ್ತು ಎಂಬುದು ತಾಯಿಯ ವಾದ.
'ಒತ್ತಡದಿಂದ ಭಾಗವಹಿಸಿದ್ದೆ'
ತಾಯಿ ಸಲ್ಲಿಸಿದ ಛಾಯಾಚಿತ್ರಗಳ ಬಗ್ಗೆ ಪ್ರತಿಕ್ರಿಯಿಸಿದ ತಂದೆ, ತಾವು ಕಾರ್ಯಕ್ರಮದಲ್ಲಿ ಹಾಜರಾಗಿದ್ದು ನಿಜ, ಆದರೆ ಅದು ಪತ್ನಿಯ ಒತ್ತಡದಿಂದ ಮತ್ತು ಕೇವಲ ಆಶೀರ್ವಾದ ಪಡೆಯಲು ಮಾತ್ರ ಎಂದು ಸ್ಪಷ್ಟಪಡಿಸಿದರು. ಆ ಸಮಯದಲ್ಲಿ ದೀಕ್ಷೆಯ ದಿನಾಂಕ ಅಂತಿಮಗೊಳಿಸಿರಲಿಲ್ಲ. ಮಗುವಿಗೆ ಪ್ರಬುದ್ಧತೆ ಬಂದ ನಂತರವೇ ದೀಕ್ಷೆಯ ಬಗ್ಗೆ ಪರಿಗಣಿಸಲು ಮೊದಲು ಒಪ್ಪಿಗೆ ನೀಡಲಾಗಿತ್ತು. ಆದರೆ ದೀಕ್ಷೆಯ ಅಂತಿಮ ದಿನಾಂಕದ ಬಗ್ಗೆ ತಿಳಿದ ನಂತರ ಮಗುವಿನ ಹಿತಾಸಕ್ತಿಯನ್ನು ಗಮನಿಸಿ ನ್ಯಾಯಾಲಯದ ಮೊರೆ ಹೋದೆ ಎಂದು ಅವರು ತಿಳಿಸಿದ್ದಾರೆ.
ಪೋಷಕರು ಪರಸ್ಪರ ವಿರೋಧಾತ್ಮಕ ಹೇಳಿಕೆಗಳನ್ನು ನೀಡಿದ ಮತ್ತು ಮಗುವಿನ ವಯಸ್ಸು ಕೇವಲ ಏಳು ವರ್ಷಗಳಾಗಿರುವ ಕಾರಣ, ನ್ಯಾಯಾಲಯವು ಮಗುವಿನ ಹಿತಾಸಕ್ತಿ ಕಾಪಾಡಲು ಮತ್ತು ಈ ನಿರ್ಧಾರದ ಬಗ್ಗೆ ನ್ಯಾಯಾಂಗದ ಪರಿಶೀಲನೆ ನಡೆಸಲು ದೀಕ್ಷೆಗೆ ತಡೆ ನೀಡಿದೆ. ಈ ಮಹತ್ವದ ಪ್ರಕರಣದ ಮುಂದಿನ ವಿಚಾರಣೆ ಜನವರಿ 2ಕ್ಕೆ ನಿಗದಿಪಡಿಸಲಾಗಿದೆ.
ಯಾರಿಗೆಲ್ಲ ದೀಕ್ಷೆ
ಮುಂಬೈನಲ್ಲಿ ಫೆಬ್ರವರಿಯಲ್ಲಿ ನಡೆಯಬೇಕಿದ್ದ ಸಾಮೂಹಿಕ ದೀಕ್ಷೆಯಲ್ಲಿ 59 ಮಂದಿ ಭಾಗವಹಿಸಲಿದ್ದರು, ಅವರಲ್ಲಿ 71 ವರ್ಷದವರು ಹಿರಿಯ ವ್ಯಕ್ತಿಯಾಗಿದ್ದರೆ 7 ವರ್ಷದ ಬಾಲಕಿಯು ಅತ್ಯಂತ ಕಿರಿಯಳು ಈ ಹಿಂದೆ ಸೂರತ್ ನ್ಯಾಯಾಲಯಗಳು ಪಾಲನೆ ವಿವಾದದ ಮೇಲೆ 12 ವರ್ಷದ ಬಾಲಕನ ದೀಕ್ಷೆಗೂ ತಡೆ ನೀಡಿದ ನಿದರ್ಶನಗಳಿವೆ.

