ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶರ್ಜೀಲ್ ಇಮಾಮ್‌ಗೆ ಜಾಮೀನು ಇಲ್ಲ…ಐವರಿಗೆ ಸುಪ್ರೀಂ ರಿಲೀಫ್‌!
x
ಉಮರ್‌ ಖಾಲಿದ್‌ ಮತ್ತು ಶರ್ಜೀಲ್ ಇಮಾಮ್

ದೆಹಲಿ ಗಲಭೆ ಪ್ರಕರಣ: ಉಮರ್ ಖಾಲಿದ್, ಶರ್ಜೀಲ್ ಇಮಾಮ್‌ಗೆ ಜಾಮೀನು ಇಲ್ಲ…ಐವರಿಗೆ ಸುಪ್ರೀಂ ರಿಲೀಫ್‌!

2020ರ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್‌ಗೆ ಜಾಮೀನು ನಿರಾಕರಿಸಿದ ಸುಪ್ರೀಂ ಕೋರ್ಟ್, ಗುಲ್ಫಿಶಾ ಫಾತಿಮಾ ಸೇರಿದಂತೆ ಐವರಿಗೆ ಜಾಮೀನು ನೀಡಿದೆ.


2020ರ ದೆಹಲಿ ಗಲಭೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಜನವರಿ 5) ಅತ್ಯಂತ ನಿರ್ಣಾಯಕ ತೀರ್ಪು ನೀಡಿದೆ. ವಿದ್ಯಾರ್ಥಿ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ಇದೇ ಪ್ರಕರಣದ ಇತರ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಈ ತೀರ್ಪನ್ನು ಪ್ರಕಟಿಸಿದೆ.

ಐವರಿಗೆ ಜಾಮೀನು

ಈ ಪ್ರಕರಣದಲ್ಲಿ ಜೈಲಿನಲ್ಲಿದ್ದ ಗುಲ್ಫಿಶಾ ಫಾತಿಮಾ, ಮೀರನ್ ಹೈದರ್, ಶಿಫಾ ಉರ್ ರೆಹಮಾನ್, ಮೊಹಮ್ಮದ್ ಸಲೀಂ ಖಾನ್ ಮತ್ತು ಶಾದಾಬ್ ಅಹ್ಮದ್ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಜಾಮೀನು ಪಡೆದ ಐವರು ಆರೋಪಿಗಳಿಗೆ ಸುಮಾರು 12 ಕಠಿಣ ಷರತ್ತುಗಳನ್ನು ವಿಧಿಸಲಾಗಿದೆ. ಇವುಗಳ ಉಲ್ಲಂಘನೆಯಾದಲ್ಲಿ ವಿಚಾರಣಾ ನ್ಯಾಯಾಲಯವು ಜಾಮೀನು ರದ್ದುಗೊಳಿಸಬಹುದು.

ಖಾಲಿದ್-ಇಮಾಮ್‌ಗೆ ನಿರಾಕರಣೆ ಏಕೆ?

ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಪಾತ್ರವು ಇತರ ಆರೋಪಿಗಳಿಗಿಂತ ಭಿನ್ನವಾಗಿದೆ ಮತ್ತು ಗಂಭೀರವಾಗಿದೆ ಎಂದು ಪೀಠ ಹೇಳಿದೆ. "ಪ್ರಮುಖ ಆರೋಪಿಗಳು ಮತ್ತು ಸಹಕರಿಸಿದವರ ನಡುವಿನ ವ್ಯತ್ಯಾಸವನ್ನು ಕಡೆಗಣಿಸುವುದು ಅಸಮಂಜಸವಾಗುತ್ತದೆ" ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಸಾಕ್ಷಿಗಳ ವಿಚಾರಣೆ ಪೂರ್ಣಗೊಂಡ ನಂತರ ಅಥವಾ ಇಂದಿನಿಂದ ಒಂದು ವರ್ಷದ ನಂತರ ಇವರಿಬ್ಬರು ಮತ್ತೆ ಜಾಮೀನಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ದೆಹಲಿ ಪೊಲೀಸರ ವಾದವೇನಿತ್ತು?

ದೆಹಲಿ ಪೊಲೀಸರ ಪರವಾಗಿ ಹಾಜರಾದ ಅಡಿಷನಲ್ ಸಾಲಿಸಿಟರ್ ಜನರಲ್ ಎಸ್‌ವಿ ರಾಜು, "2020ರ ಗಲಭೆಯು ಆಕಸ್ಮಿಕವಲ್ಲ, ಇದು ಭಾರತದ ಸಾರ್ವಭೌಮತ್ವದ ಮೇಲೆ ನಡೆದ ಸುಸಂಘಟಿತ ಮತ್ತು ಪೂರ್ವಯೋಜಿತ ದಾಳಿ" ಎಂದು ವಾದಿಸಿದ್ದರು. ಶರ್ಜೀಲ್ ಇಮಾಮ್ ಅವರ ಭಾಷಣಗಳು ಇತರ ಆರೋಪಿಗಳ ವಿರುದ್ಧದ ಸಾಕ್ಷ್ಯಗಳಾಗಿವೆ ಮತ್ತು ಉಮರ್ ಖಾಲಿದ್ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಗಲಭೆಗಿಂತ ಮೊದಲೇ ದೆಹಲಿಯಿಂದ ಹೊರಹೋಗಲು ಯೋಜಿಸಿದ್ದ ಎಂದು ಪೊಲೀಸರು ಪ್ರತಿಪಾದಿಸಿದ್ದರು.

ಆರೋಪಿಗಳ ಪ್ರತಿವಾದ

ಶರ್ಜೀಲ್ ಇಮಾಮ್ ಪರ ವಕೀಲರು, "ಯಾವುದೇ ಅಪರಾಧ ಸಾಬೀತಾಗುವ ಮೊದಲೇ ನನ್ನ ಕಕ್ಷಿದಾರರನ್ನು 'ಅಪಾಯಕಾರಿ ಬೌದ್ಧಿಕ ಭಯೋತ್ಪಾದಕ' ಎಂದು ಕರೆಯಲಾಗುತ್ತಿದೆ" ಎಂದು ಬೇಸರ ವ್ಯಕ್ತಪಡಿಸಿದ್ದರು. ಕೇವಲ ಭಾಷಣಗಳು ಕ್ರಿಮಿನಲ್ ಪಿತೂರಿಯಾಗಲು ಸಾಧ್ಯವಿಲ್ಲ ಎಂಬುದು ಅವರ ವಾದವಾಗಿತ್ತು.

ಏನಿದು ಪ್ರಕರಣ?

2020ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಪೌರತ್ವ ತಿದ್ದುಪಡಿ ಕಾಯ್ದೆ (CAA) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ (NRC) ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಫೆಬ್ರವರಿ 23 ರಿಂದ 26ರ ವರೆಗೆ ಈಶಾನ್ಯ ದೆಹಲಿಯಲ್ಲಿ ಭೀಕರ ಕೋಮು ಗಲಭೆ ಸಂಭವಿಸಿತ್ತು. ಈ ಹಿಂಸಾಚಾರದಲ್ಲಿ ಒಟ್ಟು 53 ಜನರು ಸಾವನ್ನಪ್ಪಿದರು ಮತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮನೆಗಳು, ಅಂಗಡಿಗಳು ಮತ್ತು ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿತ್ತು.

ದೆಹಲಿ ಪೊಲೀಸರು ಈ ಗಲಭೆಯನ್ನು ಕೇವಲ ಆಕಸ್ಮಿಕ ಹಿಂಸಾಚಾರವೆಂದು ಪರಿಗಣಿಸದೆ, ಇದೊಂದು "ದೊಡ್ಡ ಮಟ್ಟದ ಪಿತೂರಿ" ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡುವ ಸಮಯದಲ್ಲಿ ಭಾರತ ಸರ್ಕಾರದ ವರ್ಚಸ್ಸನ್ನು ಕೆಡಿಸಲು ಮತ್ತು ದೇಶದಲ್ಲಿ ಅಸ್ಥಿರತೆ ಉಂಟುಮಾಡಲು ಪ್ರತಿಭಟನೆಯ ಹೆಸರಿನಲ್ಲಿ ಈ ಗಲಭೆಯನ್ನು ಯೋಜಿಸಲಾಗಿತ್ತು ಎಂಬುದು ಪೊಲೀಸರು ತನಿಖಾ ವರದಿಯಲ್ಲಿ ತಿಳಿಸಿದ್ದರು.

ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಪಾತ್ರವೇನು?

ಶರ್ಜೀಲ್ ಇಮಾಮ್ ಮಾಡಿದ್ದ ಕೆಲವು ಭಾಷಣಗಳು "ಪ್ರಚೋದನಾತ್ಮಕ"ವಾಗಿದ್ದವು ಮತ್ತು ಅಸ್ಸಾಂ ಅನ್ನು ಭಾರತದಿಂದ ಪ್ರತ್ಯೇಕಿಸುವ ಬಗ್ಗೆ ಮಾತನಾಡಿದ್ದ ಎಂಬುದು ಪೊಲೀಸರ ಆರೋಪ. ಈ ಭಾಷಣಗಳೇ ಗಲಭೆಗೆ ಪ್ರೇರಣೆ ಎಂದು ಪೊಲೀಸರು ವಾದಿಸುತ್ತಿದ್ದಾರೆ. ಉಮರ್ ಖಾಲಿದ್ ವಿವಿಧ ಗುಂಪುಗಳೊಂದಿಗೆ ಸೇರಿ ಗಲಭೆಯನ್ನು ವ್ಯವಸ್ಥಿತವಾಗಿ ರೂಪಿಸಿದ "ಮಾಸ್ಟರ್‌ಮೈಂಡ್" ಎಂದು ಪೊಲೀಸರು ಆರೋಪಿಸಿದ್ದಾರೆ.

Read More
Next Story