ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ಸರ್ಕಾರದ ಭಾಷಣ ಓದದೇ ರಾಜ್ಯಪಾಲ ವಾಕ್‌ಔಟ್!
x
ತಮಿಳುನಾಡು ಸಿಎಂ ಎಂ.ಕೆ. ಸ್ಟ್ಯಾಲಿನ್‌ ಮತ್ತು ರಾಜ್ಯಪಾಲ ಆರ್.ಎನ್. ರವಿ

ತಮಿಳುನಾಡು ವಿಧಾನಸಭೆಯಲ್ಲಿ ಹೈಡ್ರಾಮಾ: ಸರ್ಕಾರದ ಭಾಷಣ ಓದದೇ ರಾಜ್ಯಪಾಲ ವಾಕ್‌ಔಟ್!

ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್. ರವಿ ನಡುವೆ ಮತ್ತೆ ಸಂಘರ್ಷ ಶುರುವಾಗಿದೆ. ವಿಧಾನಸಭೆ ಅಧಿವೇಶನದಲ್ಲಿ ಸರ್ಕಾರದ ಭಾಷಣ ಓದಲು ನಿರಾಕರಿಸಿ ರಾಜ್ಯಪಾಲರು ಹೊರನಡೆದಿರುವ ಘಟನೆ ವರದಿಯಾಗಿದೆ.


ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್‌ ನೇತೃತ್ವದ ಡಿಎಂಕೆ ಸರ್ಕಾರದ ನಡುವಿನ ಸಂಘರ್ಷ ಮಂಗಳವಾರ (ಜನವರಿ 20, 2026) ತಾರಕಕ್ಕೇರಿದೆ. ವರ್ಷದ ಮೊದಲ ಅಧಿವೇಶನದಲ್ಲಿ ಸರ್ಕಾರದ ಸಿದ್ಧಪಡಿಸಿದ ಭಾಷಣವನ್ನು ಓದಲು ನಿರಾಕರಿಸಿದ ರಾಜ್ಯಪಾಲರು, ಸದನದಿಂದ ಹೊರನಡೆದರು. ಈ ವೇಳೆ ಅವರ ಮೈಕ್ರೋಫೋನ್ ಅನ್ನು ಪದೇ ಪದೆ ಆಫ್ ಮಾಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.

ರಾಜಭವನ ನೀಡಿದ 13 ಅಂಶಗಳ ಸ್ಪಷ್ಟನೆ

ರಾಜ್ಯಪಾಲರ ಈ ನಡೆಯನ್ನು ಸಮರ್ಥಿಸಿಕೊಂಡಿರುವ ರಾಜಭವನ (ಲೋಕ್ ಭವನ), 13 ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ.

ರಾಷ್ಟ್ರಗೀತೆಗೆ ಅವಮಾನ: ಅಧಿವೇಶನದ ಆರಂಭದಲ್ಲಿ ತಮಿಳು ಗೀತೆ (Tamil Thai Valthu) ಹಾಡಲಾಗುತ್ತದೆಯೇ ಹೊರತು ರಾಷ್ಟ್ರಗೀತೆಯನ್ನಲ್ಲ. ಆದರೆ, ಅಧಿವೇಶನದ ಆರಂಭ ಮತ್ತು ಅಂತ್ಯ ಎರಡೂ ಕಡೆ ರಾಷ್ಟ್ರಗೀತೆ ಇರಬೇಕು ಎಂಬುದು ರಾಜ್ಯಪಾಲರ ವಾದವಾಗಿದೆ. ಇದು ಸಂಪ್ರದಾಯ ಮತ್ತು ಸಂವಿಧಾನದ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ.

ತಪ್ಪು ಹೂಡಿಕೆ ಮಾಹಿತಿ: 12 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಹೂಡಿಕೆ ಆಕರ್ಷಿಸಲಾಗಿದೆ ಎಂಬ ಸರ್ಕಾರದ ವಾದ ಅಸತ್ಯವಾಗಿದ್ದು, ಹೆಚ್ಚಿನ ಒಪ್ಪಂದಗಳು ಕೇವಲ ಕಾಗದದ ಮೇಲಿವೆ. ಹೂಡಿಕೆಯಲ್ಲಿ ತಮಿಳುನಾಡು 4ನೇ ಸ್ಥಾನದಿಂದ 6ನೇ ಸ್ಥಾನಕ್ಕೆ ಕುಸಿದಿದೆ.

ಅಪರಾಧಗಳ ಹೆಚ್ಚಳ: ರಾಜ್ಯದಲ್ಲಿ ಪೋಕ್ಸೊ (POCSO) ಪ್ರಕರಣಗಳು ಶೇ. 55ರಷ್ಟು ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳು ಶೇ. 33ರಷ್ಟು ಹೆಚ್ಚಾಗಿದ್ದರೂ ಸರ್ಕಾರ ಇದನ್ನು ಮುಚ್ಚಿಟ್ಟಿದೆ.

ದಲಿತರ ಮೇಲಿನ ದೌರ್ಜನ್ಯ: ದಲಿತರ ಮತ್ತು ದಲಿತ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ, ಆದರೆ ಭಾಷಣದಲ್ಲಿ ಈ ಬಗ್ಗೆ ಪ್ರಸ್ತಾಪವಿಲ್ಲ.

ಮಾದಕ ದ್ರವ್ಯ ಮತ್ತು ಆತ್ಮಹತ್ಯೆ: ಯುವಜನತೆಯಲ್ಲಿ ಮಾದಕ ದ್ರವ್ಯ ವ್ಯಸನ ಹೆಚ್ಚಾಗಿದ್ದು, ವರ್ಷಕ್ಕೆ ಸುಮಾರು 2,000 ಮಂದಿ ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯವು 'ಆತ್ಮಹತ್ಯೆಗಳ ರಾಜಧಾನಿ'ಯಾಗುತ್ತಿದೆ ಎಂದು ರಾಜಭವನ ಗಂಭೀರವಾಗಿ ಆರೋಪಿಸಿದೆ.

ಶೈಕ್ಷಣಿಕ ಕುಸಿತ: ಶೇ. 50ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು ಖಾಲಿ ಇರುವುದು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿನ ದುರಾಡಳಿತವನ್ನು ಸರ್ಕಾರ ನಿರ್ಲಕ್ಷಿಸಿದೆ.

ಮೈಕ್ರೋಫೋನ್ ಸ್ಥಗಿತದ ಆರೋಪ: ರಾಜ್ಯಪಾಲರು ಮಾತನಾಡಲು ಪ್ರಯತ್ನಿಸಿದಾಗ ಅವರ ಮೈಕ್ರೋಫೋನ್ ಸಂಪರ್ಕವನ್ನು ಕಡಿತಗೊಳಿಸಲಾಗಿತ್ತು ಎಂದು ರಾಜಭವನ ದೂರಿದೆ. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ರಾಜ್ಯಪಾಲರ ಬೆಂಬಲಿಗರು ವಾದಿಸುತ್ತಿದ್ದಾರೆ.

ಮುಖ್ಯಮಂತ್ರಿ ಎಂ.ಕೆ. ಸ್ಟ್ಯಾಲಿನ್ ಪ್ರತಿಕ್ರಿಯೆ

ರಾಜ್ಯಪಾಲರ ನಡೆಯನ್ನು "ಬಾಲಿಶ ವರ್ತನೆ" ಎಂದು ಟೀಕಿಸಿರುವ ಮುಖ್ಯಮಂತ್ರಿ ಸ್ಟಾಲಿನ್, ಇದು 100 ವರ್ಷಗಳ ಇತಿಹಾಸವಿರುವ ವಿಧಾನಸಭೆಗೆ ಮಾಡಿದ ಅವಮಾನ ಎಂದಿದ್ದಾರೆ. "ರಾಜ್ಯಪಾಲರು ಸರ್ಕಾರದ ಕಾರ್ಯಗಳನ್ನು ಬೆಂಬಲಿಸಬೇಕೇ ಹೊರತು ಅದರ ವಿರುದ್ಧವಾಗಿ ಕೆಲಸ ಮಾಡಬಾರದು" ಎಂದು ಹೇಳಿದ ಅವರು, ಸರ್ಕಾರದ ಭಾಷಣವನ್ನು ದಾಖಲೆಗೆ ಸೇರಿಸುವ ನಿರ್ಣಯವನ್ನು ಮಂಡಿಸಿದರು.

Read More
Next Story