ಹೊಸೂರು ಏರ್​ಪೋರ್ಟ್​​ಗೆ ರಕ್ಷಣಾ ಸಚಿವಾಲಯ ನಿರಾಕರಣೆ: ತಮಿಳುನಾಡಿಗೆ ಹಿನ್ನಡೆ, ಕರ್ನಾಟಕಕ್ಕೆ ಭರವಸೆ
x
ಸಂಗ್ರಹ ಚಿತ್ರ.

ಹೊಸೂರು ಏರ್​ಪೋರ್ಟ್​​ಗೆ ರಕ್ಷಣಾ ಸಚಿವಾಲಯ ನಿರಾಕರಣೆ: ತಮಿಳುನಾಡಿಗೆ ಹಿನ್ನಡೆ, ಕರ್ನಾಟಕಕ್ಕೆ ಭರವಸೆ

ಈ ಬೆಳವಣಿಗೆಯು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಮೂಲಸೌಕರ್ಯ ಸ್ಪರ್ಧೆಯ ಹೊಸ ಅಧ್ಯಾಯ ತೆರೆದಿದೆ. ಕರ್ನಾಟಕವು ಈ ಅವಕಾಶ ಸದುಪಯೋಗಿಸಿಕೊಂಡು ತನ್ನ 2ನೇ ವಿಮಾನ ನಿಲ್ದಾಣ ಯೋಜನೆಯನ್ನು ವೇಗಗೊಳಿಸಬಹುದು.


Click the Play button to hear this message in audio format

ತಮಿಳುನಾಡು ಸರ್ಕಾರದ, ಹೊಸೂರು ವಿಮಾನ ನಿಲ್ದಾಣ ಪ್ರಸ್ತಾಪವನ್ನು ರಕ್ಷಣಾ ಸಚಿವಾಲಯ ಜನವರಿ 17 ರಂದು ತಿರಸ್ಕರಿಸಿದೆ. ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಾಯುಪ್ರದೇಶದ ಉಲ್ಲಂಘನೆ ಆಗಬಹುದು ಎಂಬ ಕಾರಣ ಮುಂದಿಟ್ಟು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕದ ಗಡಿ ಪ್ರದೇಶದಲ್ಲಿ ಏರ್​ಪೋರ್ಟ್​​ ನಿರ್ಮಿಸಿ ಬೆಂಗಳೂರು ಮಹಾನಗರದ ಪ್ರಯಾಣಿಕರು ಹಾಗೂ ಉದ್ಯಮಗಳನ್ನು ಸೆಳೆಯುವ ಉದ್ದೇಶ ಹೊಂದಿದ್ದ ತಮಿಳುನಾಡು ಸರ್ಕಾರಕ್ಕೆ ಇದರಿಂದ ಹಿನ್ನಡೆಯಾಗಿದೆ. ಅಂತೆಯೇ ಎರಡನೇ ಏರ್​ಪೋರ್ಟ್​ ನಿರ್ಮಾಣದ ಕರ್ನಾಟಕದ ಕನಸಿಗೆ ರೆಕ್ಕೆ ಬಂದಿದೆ.

ದಿ ಹಿಂದೂ ಸೇರಿದಂತೆ ಪ್ರಮುಖ ಸುದ್ದಿ ಮೂಲಗಳು ಸುದ್ದಿಯನ್ನು ಪ್ರಕಟಿಸಿದೆ. ಅದರ ಪ್ರಕಾರ ಹೊಸೂರು ವಿಮಾನ ನಿಲ್ದಾಣವು 2033 ರವರೆಗೆ ಕಾರ್ಯಸಾಧ್ಯವಲ್ಲ ಎಂದು ಡಿಸೆಂಬರ್ 2025ರಲ್ಲಿಯೇ ಸೂಚಿಸಿದ್ದವು. ಈಗ ರಕ್ಷಣಾ ಸಚಿವಾಲಯದ ಅಧಿಕೃತ ನಿರಾಕರಣೆಯೊಂದಿಗೆ ಯೋಜನೆ ವಿಫಲವಾಗಿದೆ.

ಕರ್ನಾಟಕದ ವಿಮಾನ ನಿಲ್ದಾಣ ಯೋಜನೆಗಳು

ರಾಜ್ಯ ಸರ್ಕಾರವು ಬೆಂಗಳೂರಿಗೆ ಎರಡನೇ ವಿಮಾನ ನಿಲ್ದಾಣಕ್ಕಾಗಿ ಬಿಡದಿ ಅಥವಾ ನೆಲಮಂಗಲ ಸುತ್ತಮುತ್ತಲಿನ ಪ್ರದೇಶಗಳಿಗೆ ಆದ್ಯತೆ ನೀಡಲು ಬಯಸಿತ್ತು. ಹೀಗಾಗಿ ಹೊಸೂರು ನಿಲ್ದಾಣ ಸಾಧ್ಯವಲ್ಲದ ಕಾರಣ ಬೆಂಗಳೂರಿನ ನಿಲ್ದಾಣಕ್ಕೆ ಹೆಚ್ಚಿನ ಭರವಸೆ ಮೂಡಿದೆ. ಕನಕಪುರ, ಬಿಡದಿ ಮತ್ತು ನೆಲಮಂಗಲ ಸೇರಿದಂತೆ ಹಲವಾರು ಸ್ಥಳಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಈ ಎಲ್ಲಾ ಸ್ಥಳಗಳು ಬೆಂಗಳೂರು ನಗರದಿಂದ 45-60 ಕಿಲೋಮೀಟರ್ ದೂರದಲ್ಲಿವೆ, ಇದು ಬೆಳೆಯುತ್ತಿರುವ ಕರ್ನಾಟಕ ವಾಯುಯಾನ ಬೇಡಿಕೆಯನ್ನು ಪೂರೈಸಲು ಸಹಾಯ ಮಾಡುತ್ತದೆ.

ಹೊಸೂರು ಯೋಜನೆಯ ಮುಂದುವರಿಯದ ಕಾರಣ ತಮಿಳುನಾಡಿನ ಪ್ರಾದೇಶಿಕ ವಾಯುಯಾನ ವಿಸ್ತರಣೆಗೆ ಹಿನ್ನಡೆಯಾಗಿದ್ದರೆ, ಕರ್ನಾಟಕದ ಯೋಜನೆಗಳಿಗೆ ವೇಗ ತುಂಬುವ ಸಾಧ್ಯತೆ ಇದೆ. ಇದು ಅಂತರರಾಜ್ಯ ಮೂಲಸೌಕರ್ಯ ಸ್ಪರ್ಧೆಗೆ ಮತ್ತೊಂದು ಆಯಾಮ ಕೊಟ್ಟಿದೆ.

ಕಿರಣ್ ಮಜುಂದಾರ್-ಶಾ ಪ್ರತಿಕ್ರಿಯೆ

ಬಯೋಕಾನ್ ಸಂಸ್ಥಾಪಕರು ಮತ್ತು ಬೆಂಗಳೂರಿನ ಪ್ರಮುಖ ಉದ್ಯಮಿ ಕಿರಣ್ ಮಜುಂದಾರ್-ಶಾ ಅವರು ಈ ನಿರ್ಧಾರದ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಬೆಂಗಳೂರಿನ ನಿವಾಸಿಯಾಗಿ, ಅವರು ಹೊಸೂರು ವಿಮಾನ ನಿಲ್ದಾಣವು ದಕ್ಷಿಣ ಭಾಗದ ಜನರಿಗೆ ಅನುಕೂಲಕರವಾಗುತ್ತಿತ್ತು ಎಂದು ಎಕ್ಸ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದೇ ವೇಳೆ ಅವರು ಕನಕಪುರ ಸ್ಥಳದಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣವು ಈ ನಷ್ಟಕ್ಕೆ ಪರಿಹಾರವಾಗಬಹುದು ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ. ಕನಕಪುರವು ದಕ್ಷಿಣ ಬೆಂಗಳೂರಿಗೆ ಹತ್ತಿರದಲ್ಲಿದೆ, ಇದು ಆ ಪ್ರದೇಶದ ನಿವಾಸಿಗಳಿಗೆ ಅನುಕೂಲಕರವಾಗಬಹುದು ಎಂದು ಹೇಳಿದ್ದಾರೆ.

ಪರಿಸರ ಕಳಕಳಿ ಮತ್ತು ವಿರೋಧಗಳು

ಕನಕಪುರ ಸ್ಥಳದ ಪ್ರಸ್ತಾಪವು ಗಂಭೀರ ಪರಿಸರ ವಿರೋಧಕ್ಕೂ ಕಾರಣವಾಗಲಿದೆ. ಪರಿಸರ ಕಾರ್ಯಕರ್ತರು ಈ ಸ್ಥಳವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಹತ್ತಿರದಲ್ಲಿದೆ ಮತ್ತು ಆನೆಗಳ ಚಲನೆ ಮಾರ್ಗಗಳಿಗೆ ಅಡ್ಡಿಯಾಗುತ್ತದೆ ಎಂದು ಎಚ್ಚರಿಸುತ್ತಿದ್ದಾರೆ. ವಿಮಾನ ನಿಲ್ದಾಣ ನಿರ್ಮಾಣವು ವನ್ಯಜೀವಿ ಆವಾಸಸ್ಥಾನಗಳಿಗೆ ಹಾನಿ ಮಾಡುವ ಸಾಧ್ಯತೆಯಿದೆ.

ಇನ್ನು ಕೆಲವರು ಉತ್ತರ ಕರ್ನಾಟಕ ಮತ್ತು ಇತರ ಪ್ರದೇಶಗಳಿಗೆ ಉತ್ತಮ ಪ್ರವೇಶ ನೀಡುವ ನೆಲಮಂಗಲ ಮತ್ತು ತುಮಕೂರು ಪ್ರದೇಶ ಉತ್ತಮ ಎಂದು ಹೇಳುತ್ತಿದ್ದಾರೆ. ಈ ಸ್ಥಳಗಳು ಪರಿಸರಕ್ಕೆ ಹಾನಿ ಇಲ್ಲದೆ ಪ್ರಾದೇಶಿಕ ಸಂಪರ್ಕಕ್ಕೆ ಪರಿಹಾರ ಎಂದು ಹೇಳಲಾಗುತ್ತಿದೆ.

ಅಂತಾರಾಜ್ಯ ಸ್ಪರ್ಧೆ

ಈ ಬೆಳವಣಿಗೆಯು ಕರ್ನಾಟಕ ಮತ್ತು ತಮಿಳುನಾಡು ನಡುವಿನ ಮೂಲಸೌಕರ್ಯ ಸ್ಪರ್ಧೆಯ ಹೊಸ ಅಧ್ಯಾಯವನ್ನು ತೆರೆದಿದೆ. ಎರಡೂ ರಾಜ್ಯಗಳು ದಕ್ಷಿಣ ಭಾರತದ ವಿಮಾನಯಾನ ಕೇಂದ್ರಗಳಾಗಿ ಬೆಳೆಯಲು ಪ್ರಯತ್ನಿಸುತ್ತಿವೆ. ಈ ನಡುವೆ ಕರ್ನಾಟಕವು ಈ ಅವಕಾಶವನ್ನು ಸದುಪಯೋಗಿಸಿಕೊಂಡು ತನ್ನ ಎರಡನೇ ವಿಮಾನ ನಿಲ್ದಾಣ ಯೋಜನೆಯನ್ನು ವೇಗಗೊಳಿಸಬೇಕೆಂದು ತಜ್ಞರು ಸಲಹೆ ನೀಡುತ್ತಿದ್ದಾರೆ.

Read More
Next Story