
ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ರಾಜ್ಯಕ್ಕೆ ದ್ವಿತೀಯ ಸ್ಥಾನ ದೊರೆತಿದೆ.
ಫಸಲ್ ಬಿಮಾ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ
2024ರ ಮುಂಗಾರು ಮತ್ತು 2024-25ರ ಹಿಂಗಾರು ಹಂಗಾಮಿನ ಒಟ್ಟಾರೆ ಕಾರ್ಯಕ್ಷಮತೆಗಾಗಿ ಕರ್ನಾಟಕವು 'ದೊಡ್ಡ ರಾಜ್ಯಗಳ' ವಿಭಾಗದಲ್ಲಿ ದೇಶದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅನುಷ್ಠಾನದಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ ತನ್ನದಾಗಿಸಿಕೊಂಡಿದೆ.
2024ರ ಮುಂಗಾರು ಮತ್ತು 2024-25ರ ಹಿಂಗಾರು ಹಂಗಾಮಿನಲ್ಲಿ 'ದೊಡ್ಡ ರಾಜ್ಯಗಳ' ವಿಭಾಗದಲ್ಲಿ ಒಟ್ಟಾರೆ ಪ್ರದರ್ಶನಕ್ಕಾಗಿ ದೇಶದಲ್ಲೇ ಎರಡನೇ ಸ್ಥಾನ ರಾಜ್ಯ ಪಡೆದುಕೊಂಡಿದೆ. ರಾಜ್ಯದ ಈ ಸಾಧನೆಗಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರಕ್ಕೆ ಪ್ರಶಂಸನಾ ಪತ್ರವನ್ನು ನೀಡಿದೆ.
ಯೋಜನೆಯಡಿ ರಾಜ್ಯದಲ್ಲಿ ಒಟ್ಟು 27.04 ಲಕ್ಷ ರೈತರು ನೋಂದಾಯಿಸಿಕೊಂಡಿದ್ದು, ಈ ಪೈಕಿ 11.85 ಲಕ್ಷ ರೈತರು ಒಟ್ಟು 2,094 ಕೋಟಿ ರೂಪಾಯಿಗಳ ಬೆಳೆ ವಿಮೆ ಪರಿಹಾರವನ್ನು ಪಡೆದುಕೊಂಡಿದ್ದಾರೆ. ರೈತರಿಗೆ ಸಕಾಲದಲ್ಲಿ ವಿಮೆ ಸೌಲಭ್ಯ ಒದಗಿಸುವಲ್ಲಿ ರಾಜ್ಯದ ಕೃಷಿ ಇಲಾಖೆ ತೋರಿದ ದಕ್ಷತೆಯನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ.
ನಗರದಲ್ಲಿ ಭಾನುವಾರ ಆರಂಭವಾದ ಪಿಎಂ ಫಸಲ್ ಬಿಮಾ ಯೋಜನೆಯ 13ನೇ ರಾಷ್ಟ್ರೀಯ ಪರಿಶೀಲನಾ ಸಮ್ಮೇಳನದಲ್ಲಿ ಕೃಷಿ ಇಲಾಖೆಯ ಆಯುಕ್ತ ವೈ.ಎಸ್. ಪಾಟೀಲ್ ಮತ್ತು ಕೃಷಿ ಇಲಾಖೆಯ ನಿರ್ದೇಶಕರಾದ ಜಿ.ಟಿ. ಪುತ್ರ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ನೈಸರ್ಗಿಕ ವಿಕೋಪಗಳಿಂದ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಕರ್ನಾಟಕವು ಮುಂಚೂಣಿಯಲ್ಲಿರುವುದು ಈ ಪ್ರಶಸ್ತಿಯ ಮೂಲಕ ಸಾಬೀತಾಗಿದೆ.
ಕೇಂದ್ರ ಸರ್ಕಾರವು ದೇಶದ ರೈತರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆ 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'. ಈ ಯೋಜನೆಯು ಪ್ರಕೃತಿ ವಿಕೋಪಗಳಾದ ಅಕಾಲಿಕ ಮಳೆ, ಬರಗಾಲ, ಪ್ರವಾಹ, ಕೀಟಬಾಧೆ ಅಥವಾ ಬೆಂಕಿ ಅನಾಹುತಗಳಿಂದ ಬೆಳೆ ನಷ್ಟ ಅನುಭವಿಸುವ ರೈತರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಕರ್ನಾಟಕದಲ್ಲಿ ಈ ಯೋಜನೆಯನ್ನು 'ಕರ್ನಾಟಕ ರೈತ ಸುರಕ್ಷಾ' ಎಂಬ ಹೆಸರಿನಡಿ ಜಾರಿಗೆ ತರಲಾಗಿದ್ದು, ಇದು ರೈತರು ಕೃಷಿಯಲ್ಲಿ ಸುಸ್ಥಿರತೆಯನ್ನು ಸಾಧಿಸಲು ಮತ್ತು ನಷ್ಟದ ಸಮಯದಲ್ಲಿ ಸಾಲದ ಸುಳಿಗೆ ಸಿಲುಕದಂತೆ ರಕ್ಷಿಸಲು ಪೂರಕವಾಗಿದೆ. ಈ ಯೋಜನೆಯಡಿ ರೈತರು ಅತ್ಯಂತ ಕಡಿಮೆ ವಿಮಾ ಕಂತನ್ನು ಪಾವತಿಸಬೇಕಾಗುತ್ತದೆ. ಮುಂಗಾರು ಬೆಳೆಗಳಿಗೆ ಶೇಕಡಾ 2ರಷ್ಟು, ಹಿಂಗಾರು ಬೆಳೆಗಳಿಗೆ ಶೇಕಡಾ 1.5ರಷ್ಟು ಹಾಗೂ ವಾಣಿಜ್ಯ ಮತ್ತು ತೋಟಗಾರಿಕೆ ಬೆಳೆಗಳಿಗೆ ಶೇಕಡಾ 5ರಷ್ಟು ಪ್ರೀಮಿಯಂ ನಿಗದಿಪಡಿಸಲಾಗಿದೆ. ಉಳಿದ ಹೆಚ್ಚಿನ ಮೊತ್ತದ ಪ್ರೀಮಿಯಂ ಅನ್ನು ಸರ್ಕಾರವೇ ಭರಿಸುವ ಮೂಲಕ ರೈತರ ಮೇಲಿನ ಹೊರೆ ತಗ್ಗಿಸಲಾಗಿದೆ.
ಬೆಳೆ ಕಟಾವು
ಈ ಯೋಜನೆಯು ಕೇವಲ ಬೆಳೆ ಕಟಾವಿನ ನಂತರದ ನಷ್ಟಕ್ಕೆ ಮಾತ್ರವಲ್ಲದೆ, ಬಿತ್ತನೆಯಿಂದ ಹಿಡಿದು ಕೊಯ್ಲಿನ ನಂತರದ ಹಂತದವರೆಗೂ ಇರುತ್ತದೆ. ಒಂದು ವೇಳೆ ಹವಾಮಾನ ವೈಪರೀತ್ಯದಿಂದ ಬಿತ್ತನೆ ಮಾಡಲು ಸಾಧ್ಯವಾಗದಿದ್ದರೆ ಅಥವಾ ಬೆಳೆ ಬೆಳೆಯುವ ಹಂತದಲ್ಲಿ ನಷ್ಟವಾದರೆ ರೈತರು ಪರಿಹಾರ ಪಡೆಯಲು ಅರ್ಹರಿರುತ್ತಾರೆ. ಅಷ್ಟೇ ಅಲ್ಲದೆ, ಬೆಳೆ ಕಟಾವು ಮಾಡಿ ಹೊಲದಲ್ಲಿ ಒಣಗಲು ಹಾಕಿದ 14 ದಿನಗಳ ಒಳಗಾಗಿ ಅಕಾಲಿಕ ಮಳೆಯಿಂದ ಹಾನಿಯಾದರೂ ಈ ವಿಮೆಯು ಅನ್ವಯವಾಗುತ್ತದೆ. ವಿಮೆ ಪಡೆಯಲು ಇಚ್ಛಿಸುವ ರೈತರು ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಜಮೀನಿನ ಪಹಣಿ ಮತ್ತು ಬೆಳೆ ದೃಢೀಕರಣ ಪತ್ರದೊಂದಿಗೆ ಹತ್ತಿರದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ (CSC) ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ನೋಂದಣಿ ಮಾಡಿಕೊಳ್ಳಬಹುದು.
ಯೋಜನೆಯಡಿ ಬೆಳೆ ಹಾನಿಯಾದಲ್ಲಿ ರೈತರು ವಿಳಂಬ ಮಾಡದೆ 72 ಗಂಟೆಗಳ ಒಳಗೆ ವಿಮಾ ಕಂಪನಿಗೆ ಅಥವಾ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕು. ಇದು ಬೆಳೆ ಸಮೀಕ್ಷೆ ನಡೆಸಿ ಶೀಘ್ರವಾಗಿ ಪರಿಹಾರ ವಿತರಿಸಲು ಸಹಾಯ ಮಾಡುತ್ತದೆ. ಸಾಲ ಪಡೆದ ಮತ್ತು ಸಾಲ ಪಡೆಯದ ಇಬ್ಬರೂ ರೈತರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಪರಿಹಾರ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಈ ಯೋಜನೆಯ ವಿಶೇಷತೆಯಾಗಿದೆ.

