ಬೆಳೆ ವಿಮೆಗೆ ಆ್ಯಪ್ ಬಾಧೆ | ಇಲಾಖೆ ತಾಂತ್ರಿಕ ಲೋಪ: ಅತಿವೃಷ್ಟಿ ನಡುವೆ ರೈತರಿಗೆ ಸಂಕಷ್ಟ
x

ಬೆಳೆ ವಿಮೆಗೆ ಆ್ಯಪ್ ಬಾಧೆ | ಇಲಾಖೆ ತಾಂತ್ರಿಕ ಲೋಪ: ಅತಿವೃಷ್ಟಿ ನಡುವೆ ರೈತರಿಗೆ ಸಂಕಷ್ಟ

ಇಲಾಖೆಯ ಯಡವಟ್ಟುಗಳಿಗೆ ರೈತರ ಹಿತ ಬಲಿ ಕೊಡುವುದು ಸರಿಯಲ್ಲ. ಆದ್ದರಿಂದ ಆ.30ರವರೆಗೆ ಬೆಳೆ ವಿಮೆ ಪ್ರೀಮಿಯಂ ತುಂಬುವ ಗಡುವು ವಿಸ್ತರಿಸಬೇಕು ಮತ್ತು ತಾಂತ್ರಿಕ ಗೊಂದಲಗಳನ್ನು ಕೂಡಲೇ ಬಗೆಹರಿಸಿಕೊಂಡು ರೈತರಿಗೆ ತೊಂದರೆಯಾಗದಂತೆ ಖಾತರಿಪಡಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದ್ದಾರೆ


ರಾಜ್ಯದಲ್ಲಿ ಈ ಬಾರಿ ಹಿಂದೆಂದೂ ಕಾಣದ ಪ್ರಮಾಣದ ಭೀಕರ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಡಿಕೆ, ಶುಂಠಿ, ಮೆಕ್ಕೆಜೋಳ ಮುತಾಂದ ಪ್ರಮುಖ ಬೆಳೆಗಳ ನಾಶ ವ್ಯಾಪಕವಾಗಿದೆ.

ಅಡಿಕೆಗೆ ಕೊಳೆರೋಗ ವಿಪರೀತವಾಗಿದ್ದು, ಶೇ.60ಕ್ಕೂ ಅಧಿಕ ಬೆಳೆ ಈಗಾಗಲೇ ಉದುರಿ ನೆಲ ಸೇರಿದೆ. ಅಧಿಕ ಶೀತ ಮತ್ತು ಜವುಗಿನಿಂದಾಗಿ ಶುಂಠಿ ಮತ್ತು ಮೆಕ್ಕೆಜೋಳ ಬೆಳೆಗಳೂ ಬಹುತೇಕ ನಾಶವಾಗಿದ್ದು, ಈ ಎರಡೂ ಬೆಳೆಗಳು ರೈತರಿಗೆ ಕೈಕೊಟ್ಟಿವೆ. ಇನ್ನು ಭತ್ತದ ನಾಟಿ ಕೂಡ ಪ್ರವಾಹಕ್ಕೆ ಸಿಲುಕಿ, ನೀರಿನ ಹಾವಳಿಗೆ ಸಿಲುಕಿ ಸಾಕಷ್ಟು ನಷ್ಟವಾಗಿದೆ.

ಆ ಹಿನ್ನೆಲೆಯಲ್ಲಿ ಮಲೆನಾಡು, ಕರಾವಳಿ ಸೇರಿದಂತೆ ಇಡೀ ರಾಜ್ಯದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂಕಷ್ಟದ ಹೊತ್ತಲ್ಲಿ ರೈತರಿಗೆ ಆಸರೆಯಾಗಬೇಕು, ನಷ್ಟದ ಹೊತ್ತಲ್ಲಿ ಕನಿಷ್ಟ ಆರ್ಥಿಕ ಭದ್ರತೆ ಖಾತರಿಪಡಿಸಬೇಕು ಎಂಬ ಉದ್ದೇಶದಿಂದ ಆರಂಭಿಸಿರುವ ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ(PMFBY) ಅಥವಾ ಬೆಳೆ ವಿಮೆ(Crop Insurance) ಕೂಡ ಈ ರೈತರ ಪಾಲಿಗೆ ಗಗನ ಕುಸುಮವಾಗಿದೆ.

ರೈತರ ಫ್ರೂಟ್ಸ್ ಐಡಿ(ಎಫ್ಐಡಿ) ಮತ್ತು ಚಾಲ್ತಿ ಪಹಣಿಯ ಬೆಳೆ ವಿವರ ಹೊಂದಾಣಿಕೆ ವ್ಯತ್ಯಾಸ, ಪೌತಿ ಖಾತೆಯಾದ ಪಹಣಿಗಳ ವಿವರವನ್ನು ವಿಮಾ ಪೋರ್ಟಲ್(https://samrakshane.karnataka.gov.in/) ಸ್ವೀಕರಿಸದೇ ಇರುವುದು, ಹೊಸದಾಗಿ ಪೋಡಿಯಾದ ಖಾತೆಗಳ ವಿವರ ವೆಬ್‌ನಲ್ಲಿ ಅಪ್ಡೇಟ್ ಆಗದೇ ಇರುವುದು, ಪಹಣಿ ಮತ್ತು ಆಧಾರ್ ಲಿಂಕ್ ಆಗಿದ್ದರೂ ವೆಬ್‌ನಲ್ಲಿ ಅದನ್ನು ತೋರಿಸದೇ ಇರುವುದು, ಪಹಣಿಯಲ್ಲಿ ಬೆಳೆ ವಿವರ ಇಲ್ಲದೇ ಇರುವುದು,.. ಹೀಗೆ ಹತ್ತಾರು ತಾಂತ್ರಿಕ ತೊಂದರೆಗಳಿಂದಾಗಿ ಸಾವಿರಾರು ರೈತರಿಗೆ ನಿಗದಿತ ಕೊನೆಯ ದಿನಾಂಕದ(31 ಜುಲೈ 2024) ಒಳಗೇ ವಿಮಾ ಪ್ರೀಮಿಯಂ ಕಟ್ಟಲು ಸಾಧ್ಯವಾಗಿಲ್ಲ. ಕೆಲವರು ಪ್ರೀಮಿಯಂ ಹಣ ಕಟ್ಟಿದ್ದರೂ ಮೇಲಿನ ತಾಂತಿಕ ತೊಡಕುಗಳ ಕಾರಣಕ್ಕೆ ಅಪ್ರೂವ್ ಆಗಿಲ್ಲ.

ಹಾಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೊಡ್ಡ ಪ್ರಚಾರ ಪಡೆಯುವ ಪ್ರಧಾನಮಂತ್ರಿ ಫಲಸ್ ಬಿಮಾ ಯೋಜನೆ ಎಂಬುದು ಸಂಕಷ್ಟದ ಹೊತ್ತಲ್ಲಿ ರೈತರ ಪಾಲಿಗೆ ನಾಯಿ ಮೊಲೆಯ ಹಾಲಿನಂತಾಗಿದೆ! ಇಲಾಖೆಯ ತಾಂತ್ರಿಕ ಆ್ಯಪ್, ಪೋರ್ಟಲ್‌ಗಳ ಲೋಪಕ್ಕಾಗಿ ರೈತರು ನಷ್ಟಕ್ಕೆ ಈಡಾಗುವಂತಾಗಿದೆ. ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಎಂಬಂತೆ ಕಂದಾಯ ಇಲಾಖೆ, ತನ್ನದೇ ಲೋಪಗಳನ್ನು ಮುಚ್ಚಿಹಾಕಿ, ವಿಮೆ ತುಂಬುವ ಕಟ್‌ಆಪ್‌ ದಿನಾಂಕ ಮುಗಿಸಿ ಕೈತೊಳೆದುಕೊಂಡಿದೆ.

ಇಲಾಖೆಯ ಲೋಪಕ್ಕೆ ರೈತರಿಗೆ ವಂಚನೆ

ಬೆಳೆ ವಿಮೆಯ ಈ ಅವ್ಯವಸ್ಥೆಯ ಸ್ವತಃ ಸಂತ್ರಸ್ತರಾದ ಶಿವಮೊಗ್ಗ ಜಿಲ್ಲೆಯ ತುಮರಿಯ ರೈತ ಮುಖಂಡ ಜಿ ಟಿ ಸತ್ಯನಾರಾಯಣ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ತಮ್ಮ ಆತಂಕ ತೋಡಿಕೊಂಡಿದ್ದಾರೆ. ಅವರ ಪ್ರಕಾರ, “ಬೆಳೆ ವಿಮೆ ಎಂಬುದೇ ರೈತರಿಗೆ ಮಾಡುವ ವಂಚನೆ. ಸರ್ಕಾರ ಫ್ರೂಟ್ಸ್ ಐಡಿ, ಪಹಣಿಯಲ್ಲಿ ಬೆಳೆ ವಿವರ, ಪೌತಿ ಖಾತೆ ಮತ್ತು ಹೊಸ ಪಕ್ಕಾ ಪೋಡಿ ಮುಂತಾದ ತಾಂತ್ರಿಕ ಅಪ್ಡೇಟ್ಗಳನ್ನು ಸರಿಪಡಿಸಿಕೊಳ್ಳದೇ ರೈತರಿಗೆ ಕೇವಲ ಒಂದು ತಿಂಗಳ ಕಾಲಾವಕಾಶ ನೀಡಿ ಬೆಳೆ ವಿಮೆ ಪ್ರೀಮಿಯಂ ತುಂಬಿ ಎಂದು ಹೇಳುವುದೇ ಒಂದು ಮೋಸದಂತೆ ಕಾಣಿಸುತ್ತಿದೆ. ಯಾಕೆಂದರೆ, ನನ್ನದೇ ಉದಾಹರಣೆ ಕೊಡುವುದಾದರೆ ಪಕ್ಕಾ ಪೋಡಿ ಮಾಡಿಸಿ ಮೂರು ತಿಂಗಳಾದರೂ ಅದರ ಮಾಹಿತಿ ವೆಬ್‌ನಲ್ಲಿ ಅಪ್ಡೇಟ್ ಆಗಿಲ್ಲ ಎಂದು ನಮ್ಮ ಬೆಳೆ ವಿಮೆ ಪ್ರೀಮಿಯಂ ಕಟ್ಟಿದ್ದರೂ ಅಪ್ರೂವ್ ಆಗಿಲ್ಲ. ಇದಕ್ಕೆ ಇಲಾಖೆ ಹೊಣೆ ಹೊರತು ನಾವಲ್ಲ. ಆದರೆ, ನಷ್ಟ ಅನುಭವಿಸಬೇಕಾದುದು ಮಾತ್ರ ನಾವು. ಇದು ಯಾವ ನ್ಯಾಯ?” ಎಂದು ಪ್ರಶ್ನಿಸಿದರು.

“ಇದು ನನ್ನ ಒಬ್ಬನ ಸಮಸ್ಯೆಯಲ್ಲ; ತುಮರಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಸುಮಾರು ನೂರಕ್ಕೂ ಹೆಚ್ಚು ರೈತರ ಸಮಸ್ಯೆ ಇದೇ ಆಗಿದೆ. ಪೌತಿ ಖಾತೆಯಾಗಿರುವುದು, ಪಕ್ಕಾ ಪೋಡಿಯಾಗಿರುವುದು, ಪಹಣಿಯಲ್ಲಿ ಬೆಳೆ ವಿವರ ಇಲ್ಲದಿರುವುದು, ಸಂರಕ್ಷಣೆ ಪೋರ್ಟಲ್‌ನಲ್ಲಿ ವಿವರ ಅಪ್ಲೋಡ್ ಆಗಿಲ್ಲದೇ ಇರುವುದು,.. ಹೀಗೆ ನಾನಾ ಕಾರಣ ನೀಡಿ ಹಲವು ರೈತರ ವಿಮಾ ಪ್ರೀಮಿಯಂ ಕಟ್ಟಿಸಿಕೊಂಡಿಲ್ಲ. ಕೆಲವು ಸೊಸೈಟಿ, ಬ್ಯಾಂಕುಗಳಲ್ಲಿ ಪ್ರೀಮಿಯಂ ಕಟ್ಟಿಸಿಕೊಂಡಿದ್ದರೂ, ಪೋರ್ಟಲ್‌ನಲ್ಲಿ ಮಾಹಿತಿ ಅಪ್ಡೇಟ್ ಆಗಿಲ್ಲದ ಕಾರಣಕ್ಕೆ ಅಪ್ರೂವ್ ಸಿಕ್ಕಿಲ್ಲ. ಹಾಗಾಗಿ ಈ ಭಾರಿಯ ಭೀಕರ ಮಳೆಯಿಂದ ಅಡಿಕೆ ಪೂರಾ ಉದುರಿಹೋಗಿ ಆತಂಕ ಎದುರಾಗಿರುವ ಹೊತ್ತಿನಲ್ಲಿ ಬೆಳೆ ವಿಮೆ ಕೂಡ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ” ಎಂದು ಸತ್ಯನಾರಾಯಣ ರೈತರ ಆತಂಕವನ್ನು ವಿವರಿಸಿದರು.

ತಾಂತ್ರಿಕ ಸಮಸ್ಯೆಗಳ ಕುರಿತು ʼದ ಫೆಡರಲ್ ಕರ್ನಾಟಕʼ ಪ್ರಾಥಮಿಕ ಸಹಕಾರ ಸಂಘ(ಸೊಸೈಟಿ)ದ ಕಾರ್ಯನಿರ್ವಹಣಾಧಿಕಾರಿಯೊಬ್ಬರನ್ನು(ಕೋರಿಕೆ ಮೇರೆಗೆ ಹೆಸರು ಹಾಕಿಲ್ಲ) ಸಂಪರ್ಕಿಸಿದಾಗ, “ಪೌತಿ ಖಾತೆ, ಹೊಸ ಪಕ್ಕಾ ಪೋಡಿ ಮತ್ತು ಫ್ರೂಟ್ಸ್ ಐಡಿ ಹಾಗೂ ಪಹಣಿಯಲ್ಲಿನ ಬೆಳೆ ವಿವರಗಳು ಮ್ಯಾಚ್ ಆಗದೇ ಇರುವ ಪ್ರಕರಣಗಳಲ್ಲಿ ಬೆಳೆ ವಿಮೆ ಅರ್ಜಿ ಅಪ್ರೂವ್ ಆಗದೇ ಇರುವುದು ನಿಜ. ನಮ್ಮ ಸೊಸೈಟಿ ವ್ಯಾಪ್ತಿಯಲ್ಲಿ ನೂರಾರು ಮಂದಿ ಈ ಕಾರಣದಿಂದ ಬೆಳೆ ವಿಮೆ ಮಾಡಿಸಲಾಗಿಲ್ಲ” ಎಂದು ಸಮಸ್ಯೆ ಇರುವುದನ್ನು ಖಚಿತಪಡಿಸಿದರು.

ಸಾವಿರಾರು ರೈತರಿಗೆ ಅನ್ಯಾಯ!

ತಹಶೀಲ್ದಾರರೊಬ್ಬರನ್ನು(ಹೆಸರು ಬಳಸದಂತೆ ಮನವಿ ಮಾಡಿದ್ದಾರೆ) ಸಂಪರ್ಕಿಸಿದಾಗ, ಅವರು “ಈ ಸಮಸ್ಯೆ ಇರುವುದು ನಿಜ. ಬೆಳೆ ಸಮೀಕ್ಷೆ ವಿವರಗಳನ್ನು ಗ್ರಾಮ ಲೆಕ್ಕಾಧಿಕಾರಿಗಳು ಅಪ್ರೂವ್ ಮಾಡುವುದರಿಂದ ಹಿಡಿದು ಸಂರಕ್ಷಣೆ ಪೋರ್ಟಲ್‌ನಲ್ಲಿ ಅಪ್ಡೇಟ್ ವರೆಗೆ ಇದು ಸಾಕಷ್ಟು ತಾಂತ್ರಿಕ ಹಂತಗಳನ್ನು ಒಳಗೊಂಡ ಪ್ರಕ್ರಿಯೆ. ಹಾಗಾಗಿ ಸರ್ಕಾರದ ಮಟ್ಟದಲ್ಲೇ ಇದಕ್ಕೆ ಪರಿಹಾರ ಸಿಗಬೇಕಿದೆ. ಬೆಳೆ ವಿಮೆ ಸಮೀಕ್ಷೆ ನಡೆಸುವ ಗುತ್ತಿಗೆ ನೌಕರರು, ಗ್ರಾಮ ಲೆಕ್ಕಾಧಿಕಾರಿ, ಪ್ರೀಮಿಯಂ ತುಂಬಿಸಿಕೊಳ್ಳುವ ಸೊಸೈಟಿ, ಬ್ಯಾಂಕ್, ಗ್ರಾಮ ಒನ್ ಸಿಬ್ಬಂದಿ, ಫ್ರೂಟ್ ಐಡಿ ಮತ್ತು ಪಹಣಿ ವಿವರ ಮ್ಯಾಚಿಂಗ್ ಅಪ್ಡೇಟ್, ಪೌತಿ ಖಾತೆ, ಹೊಸ ಪೋಡಿ ಪ್ರಕರಣಗಳ ಅಪ್ಡೇಟ್ ಮಾಡುವ ನಮ್ಮ ಕಂದಾಯ ಇಲಾಖೆ ಸಿಬ್ಬಂದಿ,.. ಹೀಗೆ ಹಲವು ಮಂದಿಯನ್ನೊಳಗೊಂಡ ಈ ಸರಣಿ ಪ್ರಕ್ರಿಯೆಯಲ್ಲಿ ಎಲ್ಲಿ ಯಾರೇ ಚೂರು ನಿರ್ಲಕ್ಷ್ಯ ವಹಿಸಿದರೂ, ಅಥವಾ ಕೆಲಸದ ಒತ್ತಡದಲ್ಲಿ ವಿಳಂಬ ಮಾಡಿದರೂ ಅದರ ಪರಿಣಾಮವನ್ನು ರೈತರು ಅನುಭವಿಸಬೇಕಾಗುತ್ತದೆ. ಇದರಿಂದಾಗಿ ನಮ್ಮ ತಾಲೂಕಿನಲ್ಲಿಯೇ ಪ್ರತಿ ಪಂಚಾಯ್ತಿವಾರು ನೂರಾರು ರೈತರಿಗೆ ಬೆಳೆ ವಿಮೆ ಮಾಡಿಸಲಾಗಿಲ್ಲ. ಆ ಲೆಕ್ಕದಲ್ಲಿ ತಾಲೂಕಿನಲ್ಲಿ ಸಾವಿರಕ್ಕೂ ಅಧಿಕ ರೈತರು ಬೆಳೆವಿಮೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆದರೆ, ವ್ಯವಸ್ಥೆಯಲ್ಲಿರುವ ಗೊಂದಲಗಳಿಗೆ ನಮಗೂ ಯಾವ ಪರಿಹಾರ ಹೊಳೆಯುತ್ತಿಲ್ಲ” ಎಂದು ಕೈಚೆಲ್ಲಿದರು.

ಗಡುವು ವಿಸ್ತರಣೆಗೆ ರೈತರ ಆಗ್ರಹ

ಸರ್ಕಾರದ ವಿವಿಧ ಪೋರ್ಟಲ್ ಮತ್ತು ಆ್ಯಪ್‌ಗಳ ಹಂತದಲ್ಲಿನ ಲೋಪಗಳಿಂದಾಗಿ ಈ ಪ್ರವಾಹ, ಅತಿವೃಷ್ಟಿಯ ಸಂದರ್ಭದಲ್ಲೂ ರೈತರು ಬೆಳೆ ವಿಮೆ ರಕ್ಷಣೆಯಿಂದ ವಂಚಿತರಾಗುವಂತಾಗಿದೆ. ಆ ಹಿನ್ನೆಲೆಯಲ್ಲಿ ಸರ್ಕಾರ ಕೂಡಲೇ ಈ ತಾಂತ್ರಿಕ ಲೋಪಗಳನ್ನು ಸರಿಪಡಿಸಲು ಸಮರೋಪಾದಿ ಕ್ರಮ ಜರುಗಿಸಬೇಕು ಮತ್ತು ಈಗಾಗಲೇ ಮುಗಿದುಹೋಗಿರುವ ಬೆಳೆ ವಿಮೆ ತುಂಬುವ ಗುಡುವನ್ನು ಆ ತಾಂತ್ರಿಕ ಲೋಪಗಳು ಸರಿಯಾಗುವವರೆಗೆ ಮರು ನಿಗದಿ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್ ಆರ್ ಬಸವರಾಜಪ್ಪ ಅವರು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿ, “ನಮ್ಮಲ್ಲಿ ಮುಂಗಾರು ಹಂಗಾಮು ಸೆಪ್ಟೆಂಬರಿಗೆ ಅಂತ್ಯಗೊಳ್ಳಲಿದೆ. ಆದರೆ, ಇಲಾಖೆ ಪ್ರತಿ ಬಾರಿ ಜುಲೈಗೆ ಬೆಳೆ ವಿಮೆ ಪ್ರೀಮಿಯಂ ತುಂಬಲು ಅಂತಿಮ ಗಡುವು ನೀಡುತ್ತಿದೆ. ಇದು ಸರಿಯಲ್ಲ. ಅದರಲ್ಲೂ ಈ ಬಾರಿ ನೂರೆಂಟು ಪೋರ್ಟಲ್, ಆ್ಯಪ್ ಎಂದು ಇನ್ನಿಲ್ಲದ ಗೊಂದಲ ಸೃಷ್ಟಿಸಲಾಗಿದೆ. ಇಲಾಖೆಯ ಕಡೆಯಿಂದ ಆಗಿರುವ ಈ ಲೋಪಗಳಿಗೆ, ಯಡವಟ್ಟುಗಳಿಗೆ ರೈತರ ಹಿತ ಬಲಿ ಕೊಡುವುದು ಸರಿಯಲ್ಲ. ಆದ್ದರಿಂದ ಆಗಸ್ಟ್ 30ರವರೆಗೆ ಅಡಿಕೆ, ಭತ್ತ ಸೇರಿದಂತೆ ಎಲ್ಲಾ ಬೆಳೆಗಳ ಬೆಳೆ ವಿಮೆ ಪ್ರೀಮಿಯಂ ತುಂಬುವ ಗಡುವು ವಿಸ್ತರಿಸಬೇಕು ಮತ್ತು ತಾಂತ್ರಿಕ ಗೊಂದಲಗಳನ್ನು, ಅಪ್ಡೇಟ್ ಸಮಸ್ಯೆಗಳನ್ನು ಇಲಾಖೆ ಕೂಡಲೇ ಬಗೆಹರಿಸಿಕೊಂಡು ರೈತರಿಗೆ ತೊಂದರೆಯಾಗದಂತೆ ಖಾತರಿಪಡಿಸಬೇಕು” ಎಂದು ಒತ್ತಾಯಿಸಿದರು.

ವಿವಿಧ ಆ್ಯಪ್ ಮತ್ತು ಪೋರ್ಟಲ್‌ಗಳ ತಾಂತ್ರಿಕ ತೊಡಕುಗಳು ಮತ್ತು ಇಲಾಖೆಯ ಕೆಳ ಹಂತದ ಸಿಬ್ಬಂದಿಯ ಕಾರಣಕ್ಕಾಗಿ ರೈತರಿಗೆ ಆಗಿರುವ ಅನಾನುಕೂಲತೆಗಳ ಕುರಿತು ಗಮನ ಸೆಳೆಯಲು ದ ಫೆಡರಲ್ ಕರ್ನಾಟಕ, ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಸಂಪರ್ಕಿಸಲು ಮೊಬೈಲ್ ಮತ್ತು ಇ-ಮೇಲ್ ಮೂಲಕ ಪ್ರಯತ್ನಿಸಿತು. ಆದರೆ, ಸಚಿವರು ಪ್ರತಿಕ್ರಿಯೆಗೆ ಸಿಕ್ಕಿಲ್ಲ.

Read More
Next Story