ವೀರ ಸಾವರ್ಕರ್ ಪ್ರಶಸ್ತಿ ನಿರಾಕರಿಸಿದ ಶಶಿ ತರೂರ್
x

ವೀರ ಸಾವರ್ಕರ್ ಪ್ರಶಸ್ತಿ ನಿರಾಕರಿಸಿದ ಶಶಿ ತರೂರ್

ವೀರ ಸಾವರ್ಕರ್ ಪ್ರಶಸ್ತಿ ನಿರಾಕರಿಸಿದ ಶಶಿ ತರೂರ್

ಪ್ರಶಸ್ತಿಯ ಸ್ವರೂಪ, ಅದನ್ನು ನೀಡುತ್ತಿರುವ ಸಂಸ್ಥೆ ಅಥವಾ ಯಾವುದೇ ಹಿನ್ನೆಲೆ ವಿವರಗಳ ಕುರಿತು ಯಾವುದೇ ಸೂಕ್ತ ಸ್ಪಷ್ಟೀಕರಣ ಇಲ್ಲದ ಕಾರಣ ನಾನು ಪ್ರಶಸ್ತಿಯನ್ನು ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಶಶಿ ತರೂರ್ ತಿಳಿಸಿದ್ದಾರೆ.


Click the Play button to hear this message in audio format

ಸದಾ ಸುದ್ದಿಯಲ್ಲಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಮತ್ತೊಮ್ಮೆ ಬಲಪಂಥೀಯ ಸಿದ್ಧಾಂತವಾದಿ ʼವೀರ ಸಾವರ್ಕರ್ʼ ಹೆಸರಿನ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ತಮ್ಮದೇ ಪಕ್ಷದೊಂದಿಗಿನ ಸಂಬಂಧವನ್ನು ತೀವ್ರವಾಗಿ ಟೀಕಿಸುತ್ತಿರುವ ಶಶಿ ತರೂರ್, ʼಪ್ರಶಸ್ತಿಯ ಸ್ವರೂಪ ಮತ್ತು ಅದನ್ನು ನೀಡಿದ ಸಂಘಟಕರ ಬಗ್ಗೆ ಸ್ಪಷ್ಟೀಕರಣದ ಕೊರತೆಯಿಂದಾಗಿ ಈ ಗೌರವವನ್ನು ಸ್ವೀಕರಿಸದಿರಲು ನಿರ್ಧರಿಸಿದ್ದೇನೆ,ʼ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ತಾವು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಉತ್ತರಿಸಿದ್ದರು. ಬಳಿಕ ತಮ್ಮ ಸಾಮಾಜಿಕ ಜಾಲತಾಣ ʻಎಕ್ಸ್‌ʼ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕೇರಳದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮತ ಚಲಾಯಿಸಲು ತೆರಳಿದ್ದಾಗ, ಮಾಧ್ಯಮ ವರದಿಗಳ ಮೂಲಕ ತಮಗೆ ಈ ಪ್ರಶಸ್ತಿ ನೀಡುವ ವಿಚಾರ ತಿಳಿಯಿತು ಎಂದು ತರೂರ್ ಹೇಳಿದ್ದಾರೆ. ಬುಧವಾರ ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಿಗದಿಯಾಗಿತ್ತು. ತರೂರ್ ಅವರು ತಮ್ಮ 'X' ಖಾತೆಯಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ತಿರುವನಂತಪುರಂನಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸುವಾಗ, ನನಗೆ ಅಂತಹ ಯಾವುದೇ ಪ್ರಶಸ್ತಿಯ ಬಗ್ಗೆ ಮಾಹಿತಿ ಇಲ್ಲ ಮತ್ತು ನಾನು ಅದನ್ನು ಒಪ್ಪಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದೆ. ನನ್ನ ಒಪ್ಪಿಗೆ ಇಲ್ಲದೆ ನನ್ನ ಹೆಸರನ್ನು ಪ್ರಕಟಿಸಿದ್ದು ಆಯೋಜಕರ ಬೇಜವಾಬ್ದಾರಿತನ. ಪ್ರಶಸ್ತಿಯ ಸ್ವರೂಪ, ಅದನ್ನು ನೀಡುತ್ತಿರುವ ಸಂಸ್ಥೆ ಅಥವಾ ಯಾವುದೇ ಹಿನ್ನೆಲೆ ವಿವರಗಳ ಕುರಿತು ಯಾವುದೇ ಸೂಕ್ತ ಸ್ಪಷ್ಟೀಕರಣ ಇಲ್ಲದ ಕಾರಣ, ನಾನು ಕಾರ್ಯಕ್ರಮದಲ್ಲಿ ಭಾಗವಹಿಸುವ ಅಥವಾ ಪ್ರಶಸ್ತಿಯನ್ನು ಸ್ವೀಕರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ.

ವೀರ ಸಾವರ್ಕರ್ ಅಂತರಾಷ್ಟ್ರೀಯ ಇಂಪ್ಯಾಕ್ಟ್ ಅವಾರ್ಡ್ 2025 ಅನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಸಂಬಂಧಿಸಿದ ಸಂಸ್ಥೆ ʼಹೈರೇಂಜ್ ರೂರಲ್ ಡೆವಲಪ್‌ಮೆಂಟ್ ಸೊಸೈಟಿʼ ಎಂಬ ಸರ್ಕಾರೇತರ ಸಂಸ್ಥೆ ಸ್ಥಾಪಿಸಿದೆ ಮತ್ತು ತರೂರ್ ಅವರನ್ನು ಪ್ರಶಸ್ತಿಗೆ ಹೆಸರಿಸಲಾಗಿತ್ತು.

ರಾಷ್ಟ್ರೀಯ ಅಭಿವೃದ್ಧಿ, ಸಾಮಾಜಿಕ ಸುಧಾರಣೆ ಮತ್ತು ಮಾನವೀಯ ಸೇವೆಯಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸಲು ದೆಹಲಿಯ ಎನ್‌ಎಂಡಿಸಿ ಕನ್ವೆನ್ಷನ್ ಹಾಲ್‌ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇದನ್ನು ಉದ್ಘಾಟಿಸಲು ನಿರ್ಧರಿಸಿದ್ದರು.

ಕಳೆದ ವಾರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಗೌರವಾರ್ಥವಾಗಿ ನಡೆದ ರಾಜ್ಯ ಭೋಜನಕೂಟದಲ್ಲಿ ವಿರೋಧ ಪಕ್ಷದ ಉನ್ನತ ನಾಯಕರಿಗೆ ಆಹ್ವಾನ ನೀಡದಿದ್ದರೂ ತರೂರ್ ಅವರ ಉಪಸ್ಥಿತಿ ಸೇರಿದಂತೆ, ಅವರ ಕೆಲವು ಇತ್ತೀಚಿನ ಕಾರ್ಯಗಳ ಬಗ್ಗೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿತ್ತು. ಈಗ ಈ ಹೊಸ ಘಟನೆಯ ಬಗ್ಗೆಯೂ ಪಕ್ಷ ಪ್ರತಿಕ್ರಿಯಿಸಿದೆ.

ಪಕ್ಷಕ್ಕೆ ಅವಮಾನಕರ

ತರೂರ್ ಅವರ ರಾಜ್ಯದವರೇ ಆದ ಹಿರಿಯ ಕಾಂಗ್ರೆಸ್ ನಾಯಕ ಕೆ. ಮುರಳೀಧರನ್, ಇಂತಹ ಪ್ರಶಸ್ತಿಯನ್ನು ಪಡೆಯುವುದು ಕಾಂಗ್ರೆಸ್‌ಗೆ ಅವಮಾನ ಮತ್ತು ಮುಜುಗರವನ್ನುಂಟು ಮಾಡುತ್ತದೆ ಎಂದು ಹೇಳಿದರು. ಬಿಜೆಪಿ ಮತ್ತು ಬಲಪಂಥೀಯ ಕುಟುಂಬವು ಸಾವರ್ಕರ್ ಅವರನ್ನು ಕ್ರಾಂತಿಕಾರಿ ವ್ಯಕ್ತಿ ಎಂದು ಪರಿಗಣಿಸುತ್ತಿದ್ದರೂ, ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆಯನ್ನು ಗ್ರ್ಯಾಂಡ್ ಓಲ್ಡ್ ಪಾರ್ಟಿ ಪ್ರಶ್ನಿಸುತ್ತಾ ಬಂದಿದೆ.

ಕೆಲವು ವರ್ಷಗಳ ಹಿಂದೆ, ತನ್ನ ಉನ್ನತ ನಾಯಕರಲ್ಲಿ ಒಬ್ಬರಾಗಿದ್ದ ಮಾಜಿ ರಾಷ್ಟ್ರಪತಿ, ದಿ. ಪ್ರಣಬ್ ಮುಖರ್ಜಿ ಅವರು ನಾಗ್ಪುರದಲ್ಲಿರುವ ಆರ್‌ಎಸ್‌ಎಸ್ ಪ್ರಧಾನ ಕಚೇರಿಗೆ ಹಾಜರಾಗಿದ್ದಕ್ಕಾಗಿ ಕಾಂಗ್ರೆಸ್ ತನ್ನ ಆಕ್ಷೇಪ ವ್ಯಕ್ತಪಡಿಸಿತ್ತು. ಪ್ರಣಬ್‌ ಅವರ ಆರ್‌ಎಸ್‌ಎಸ್‌ ಕಚೇರಿ ಭೇಟಿಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್‌ ವಿನಂತಿಸಿದ್ದರೂ ಮುಖರ್ಜಿ ಅವರು ಮುಂದುವರಿದು ಭೇಟಿ ನೀಡಿದ್ದನ್ನು ಸ್ಮರಿಸಬಹುದಾಗಿದೆ.

Read More
Next Story