
ಮಮ್ದಾನಿ – ಟ್ರಂಪ್ ಭೇಟಿ; ಭಾರತದಲ್ಲೂ ಈ ಸೌಹಾರ್ದತೆ ಬೇಕೆಂದ ತರೂರ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನ್ಯೂಯಾರ್ಕ್‌ನ ನೂತನ ಮೇಯರ್ ಜೋಹ್ರಾನ್ ಮಮ್ದಾನಿ (Zohran Mamdani) ಅವರು ಶನಿವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಭೇಟಿಯಾದರು.
ರಾಜಕೀಯ ಎಂದರೆ ಕೇವಲ ಆರೋಪ-ಪ್ರತ್ಯಾರೋಪಗಳಲ್ಲ, ಚುನಾವಣೆ ಮುಗಿದ ನಂತರ ಎಲ್ಲವನ್ನೂ ಮರೆತು ದೇಶದ ಅಭಿವೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡುವುದು ಪ್ರಜಾಪ್ರಭುತ್ವದ ನಿಜವಾದ ಸೌಂದರ್ಯ. ಅಮೆರಿಕದಲ್ಲಿ ಇಂತಹದೊಂದು ಅಪರೂಪದ ಸೌಹಾರ್ದತೆಗೆ ಸಾಕ್ಷಿಯಾದ ಘಟನೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಭಾರತದಲ್ಲೂ ಇಂತಹ ರಾಜಕೀಯ ಸಂಸ್ಕೃತಿ ಬೆಳೆಯಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನ್ಯೂಯಾರ್ಕ್‌ನ ನೂತನ ಮೇಯರ್ ಜೋಹ್ರಾನ್ ಮಮ್ದಾನಿ (Zohran Mamdani) ಅವರು ಶನಿವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಭೇಟಿಯಾದರು. ಚುನಾವಣೆ ಸಂದರ್ಭದಲ್ಲಿ ಪರಸ್ಪರ ವಿರುದ್ಧ ಸಿದ್ಧಾಂತ ಹೊಂದಿದ್ದರೂ, ಚುನಾವಣೆ ನಂತರ ಜನರ ಸೇವೆಗಾಗಿ ಇಬ್ಬರೂ ನಾಯಕರು ಒಟ್ಟಾಗಿ ಕುಳಿತು ಮಾತುಕತೆ ನಡೆಸಿದ್ದು ಪ್ರಜಾಪ್ರಭುತ್ವದ ಬಲಕ್ಕೆ ಸಾಕ್ಷಿಯಾಯಿತು.
ತರೂರ್ ಪ್ರತಿಕ್ರಿಯೆ: ರಾಹುಲ್‌ಗೆ ಸಂದೇಶವೇ?
ಈ ಭೇಟಿಯ ವಿಡಿಯೋವನ್ನು 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಶಶಿ ತರೂರ್, "ಪ್ರಜಾಪ್ರಭುತ್ವ ಕೆಲಸ ಮಾಡಬೇಕಾದ ರೀತಿ ಇದು. ಚುನಾವಣೆಯಲ್ಲಿ ನಿಮ್ಮ ಸಿದ್ಧಾಂತಕ್ಕಾಗಿ ಹೋರಾಡಿ, ಆದರೆ ಫಲಿತಾಂಶ ಬಂದ ಮೇಲೆ ದೇಶದ ಹಿತಕ್ಕಾಗಿ ಒಂದಾಗಿ. ಭಾರತದಲ್ಲೂ ಇಂತಹದನ್ನು ನೋಡಲು ನಾನು ಎದುರು ನೋಡುತ್ತಿದ್ದೇನೆ," ಎಂದು ಬರೆದುಕೊಂಡಿದ್ದಾರೆ.
ಬಿಜೆಪಿಯಿಂದ ಟಾಂಗ್!
ತರೂರ್ ಅವರ ಈ ಹೇಳಿಕೆಯನ್ನು ಅಸ್ತ್ರವಾಗಿಸಿಕೊಂಡಿರುವ ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ, ಪರೋಕ್ಷವಾಗಿ ರಾಹುಲ್ ಗಾಂಧಿಗೆ ಟಾಂಗ್ ನೀಡಿದ್ದಾರೆ. "ತರೂರ್ ಅವರ ಈ ಮಾತು ರಾಹುಲ್ ಗಾಂಧಿಗೆ ಅರ್ಥವಾಗುತ್ತದೆ ಎಂದು ಭಾವಿಸುತ್ತೇವೆ. ಸೋತವರಂತೆ ವರ್ತಿಸದೆ, ಪ್ರಜಾತಾಂತ್ರಿಕವಾಗಿ ನಡೆದುಕೊಳ್ಳಬೇಕು. ತರೂರ್ ಅವರು ಮತ್ತೊಮ್ಮೆ 'ಪರಿವಾರಕ್ಕಿಂತ ದೇಶ ಮೊದಲು' ಎಂಬ ಸಂದೇಶ ರವಾನಿಸಿದ್ದಾರೆ," ಎಂದು ವ್ಯಂಗ್ಯವಾಡಿದ್ದಾರೆ.

