
ಶಬರಿಮಲೆ ಚಿನ್ನ ಕಳವು ಪ್ರಕರಣ: ಬೆಂಗಳೂರು ಸೇರಿ 21 ಸ್ಥಳಗಳಲ್ಲಿ ಇಡಿ ಭಾರಿ ದಾಳಿ
ಶಬರಿಮಲೆ ದೇವಸ್ಥಾನದ ಚಿನ್ನದ ಹೊದಿಕೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಬಳ್ಳಾರಿ ಸೇರಿದಂತೆ ಕೇರಳ ಮತ್ತು ತಮಿಳುನಾಡಿನ 21 ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ.
ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಚಿನ್ನ ಕಳವು ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಇಂದು ಮುಂಜಾನೆಯೇ ಕೇರಳ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಒಟ್ಟು 21 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. ಕರ್ನಾಟಕದ ಬೆಂಗಳೂರು ಮತ್ತು ಬಳ್ಳಾರಿಯಲ್ಲೂ ಅಧಿಕಾರಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬೆಂಗಳೂರಿನಲ್ಲಿ ತೀವ್ರ ಶೋಧ
ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರಿನ ಶ್ರೀರಾಂಪುರದ ಟ್ರಸ್ಟಿಯೊಬ್ಬರ ಮನೆಗೆ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡ ಲಗ್ಗೆ ಇಟ್ಟಿದೆ. ಶಬರಿಮಲೆ ಚಿನ್ನದ ದುರುಪಯೋಗಕ್ಕೆ ಸಂಬಂಧಿಸಿದಂತೆ ಪ್ರಮುಖ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದ್ದು, ಹಣಕಾಸಿನ ವಹಿವಾಟಿನ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.
ಅಕ್ರಮ ಹಣ ವರ್ಗಾವಣೆ ಶಂಕೆ (PMLA)
ಕೇರಳ ಪೊಲೀಸರು ಈ ಹಿಂದೆ ದಾಖಲಿಸಿದ್ದ ಎಫ್‌ಐಆರ್ ಆಧರಿಸಿ, ಕೊಚ್ಚಿ ಇಡಿ ಕಚೇರಿಯಲ್ಲಿ ಇಸಿಐಆರ್ (ECIR) ದಾಖಲಿಸಿಕೊಳ್ಳಲಾಗಿತ್ತು. ಚಿನ್ನ ಕಳ್ಳತನದ ಹಿಂದೆ ಬೃಹತ್ ಮಟ್ಟದ ಅಕ್ರಮ ಹಣ ವರ್ಗಾವಣೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಅಕ್ರಮ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಆರೋಪಿಗಳು ಮತ್ತು ಅವರ ನಿಕಟವರ್ತಿಗಳ ನಡುವೆ ನಡೆದಿರುವ ಹಣದ ವರ್ಗಾವಣೆ ಬಗ್ಗೆಯೂ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ.
ಏನಿದು ಪ್ರಕರಣ?
ಶಬರಿಮಲೆ ದೇಗುಲದ 'ದ್ವಾರಪಾಲಕ' ವಿಗ್ರಹಗಳ ಮೇಲಿದ್ದ ಚಿನ್ನದ ಹೊದಿಕೆ ಮತ್ತು 'ಶ್ರೀಕೋವಿಲ್' (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಿಂದ ಚಿನ್ನ ಕಳ್ಳತನವಾಗಿತ್ತು. ಅಯ್ಯಪ್ಪ ಸ್ವಾಮಿ ದೇಗುಲದ ವಿವಿಧ ಕಲಾಕೃತಿಗಳಿಂದ ಚಿನ್ನ ದುರುಪಯೋಗಪಡಿಸಿಕೊಳ್ಳಲು ದೊಡ್ಡ ಪಿತೂರಿ ನಡೆದಿದೆ ಎಂಬ ಆರೋಪವಿದೆ. ಈ ಪ್ರಕರಣದಲ್ಲಿ ಕೆಲವು ಅಧಿಕಾರಿಗಳ ಪಾತ್ರ ಮತ್ತು ಆಡಳಿತಾತ್ಮಕ ತಪ್ಪುಗಳ ಕುರಿತು ಗಂಭೀರ ತನಿಖೆ ನಡೆಯುತ್ತಿದೆ.
ಈ ಹಿಂದೆ ಕೇರಳ ಹೈಕೋರ್ಟ್ ಕೂಡ ಈ ಪ್ರಕರಣದ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಕೆಲವು ಅಪರಾಧಿಗಳನ್ನು ರಕ್ಷಿಸಲು ಉದ್ದೇಶಪೂರ್ವಕ ಪ್ರಯತ್ನಗಳು ನಡೆಯುತ್ತಿವೆಯೇ ಎಂಬ ಸಂಶಯವನ್ನು ವ್ಯಕ್ತಪಡಿಸಿತ್ತು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಈಗ ಇಡಿ ರಂಗಪ್ರವೇಶ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

