
ಅಜಿತ್ ಪವಾರ್ ನಿಧನ: 'ಜನಸಾಮಾನ್ಯರ ನಾಯಕ'ನನ್ನು ಕಳೆದುಕೊಂಡೆವು ಎಂದ ಪ್ರಧಾನಿ ಮೋದಿ
ಪುಣೆ ಜಿಲ್ಲೆಯ ಬಾರಾಮತಿ ಬಳಿ ಬುಧವಾರ (ಜನವರಿ 28) ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 66 ವರ್ಷದ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಬುಧವಾರ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟ ಪವಾರ್ ಅವರನ್ನು 'ಜನನಾಯಕ' ಎಂದು ಬಣ್ಣಿಸಿರುವ ಪ್ರಧಾನಿ, ಅವರ ಆಡಳಿತಾತ್ಮಕ ದಕ್ಷತೆ ಮತ್ತು ಜನಪರ ಕಾಳಜಿಯನ್ನು ಸ್ಮರಿಸಿದ್ದಾರೆ.
ಪುಣೆ ಜಿಲ್ಲೆಯ ಬಾರಾಮತಿ ಬಳಿ ಬುಧವಾರ (ಜನವರಿ 28) ಬೆಳಿಗ್ಗೆ ಸಂಭವಿಸಿದ ಭೀಕರ ವಿಮಾನ ದುರಂತದಲ್ಲಿ 66 ವರ್ಷದ ಅಜಿತ್ ಪವಾರ್ ಹಾಗೂ ಇತರ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ರಾಷ್ಟ್ರಮಟ್ಟದ ಗಣ್ಯರು ಕಂಬನಿ ಮಿಡಿದಿದ್ದು, ಪ್ರಧಾನಿ ಮೋದಿ ಅವರು ಸಾಮಾಜಿಕ ಜಾಲತಾಣ 'ಎಕ್ಸ್' (ಟ್ವಿಟರ್) ಮೂಲಕ ತಮ್ಮ ಸಂತಾಪವನ್ನು ಸೂಚಿಸಿದ್ದಾರೆ.
ತಳಮಟ್ಟದ ನಾಯಕನನ್ನು ಸ್ಮರಿಸಿದ ಪ್ರಧಾನಿ
ಅಜಿತ್ ಪವಾರ್ ಅವರ ರಾಜಕೀಯ ಜೀವನದ ಮಹತ್ವವನ್ನು ವಿವರಿಸಿರುವ ಪ್ರಧಾನಿ ಮೋದಿ, "ಶ್ರೀ ಅಜಿತ್ ಪವಾರ್ ಜಿ ಅವರು ನಿಜವಾದ ಅರ್ಥದಲ್ಲಿ ಜನನಾಯಕರಾಗಿದ್ದರು. ತಳಮಟ್ಟದ ಜನರೊಂದಿಗೆ ಅವರು ಬಲವಾದ ಸಂಪರ್ಕವನ್ನು ಹೊಂದಿದ್ದರು," ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಜನರ ಸೇವೆಯಲ್ಲಿ ಅವರು ಸದಾ ಮುಂಚೂಣಿಯಲ್ಲಿದ್ದರು. ಓರ್ವ ಕಠಿಣ ಪರಿಶ್ರಮದ ವ್ಯಕ್ತಿತ್ವವಾಗಿ ಅವರು ರಾಜಕೀಯ ವಲಯದಲ್ಲಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದರು ಎಂದು ಪ್ರಧಾನಿ ಸ್ಮರಿಸಿದ್ದಾರೆ.
ಆಡಳಿತಾತ್ಮಕ ದಕ್ಷತೆಗೆ ಶ್ಲಾಘನೆ
ಅಜಿತ್ ಪವಾರ್ ಅವರು ಹಣಕಾಸು ಮತ್ತು ಆಡಳಿತ ನಿರ್ವಹಣೆಯಲ್ಲಿ ಹೊಂದಿದ್ದ ಹಿಡಿತವನ್ನು ಪ್ರಸ್ತಾಪಿಸಿರುವ ಪ್ರಧಾನಿ, "ಆಡಳಿತಾತ್ಮಕ ವಿಷಯಗಳ ಬಗ್ಗೆ ಅವರಿಗಿದ್ದ ಆಳವಾದ ತಿಳುವಳಿಕೆ ಮತ್ತು ಬಡವರು ಹಾಗೂ ದೀನದಲಿತರ ಸಬಲೀಕರಣಕ್ಕಾಗಿ ಅವರಿಗಿದ್ದ ತುಲನಾತೀತ ಕಾಳಜಿ ಗಮನಾರ್ಹವಾದುದು," ಎಂದು ಶ್ಲಾಘಿಸಿದ್ದಾರೆ.
"ಅವರ ಅಕಾಲಿಕ ಮರಣವು ಅತ್ಯಂತ ಆಘಾತಕಾರಿ ಮತ್ತು ದುಃಖಕರವಾಗಿದೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ಮತ್ತು ಅಸಂಖ್ಯಾತ ಅಭಿಮಾನಿಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ," ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ತಮ್ಮ ತವರು ಕ್ಷೇತ್ರವಾದ ಬಾರಾಮತಿಗೆ ತೆರಳುತ್ತಿದ್ದಾಗ ವಿಮಾನ ಪತನಗೊಂಡು ಈ ದುರಂತ ಸಂಭವಿಸಿದ್ದು, ಪ್ರಧಾನಿ ಸೇರಿದಂತೆ ದೇಶದ ಹಲವು ನಾಯಕರು ಅಜಿತ್ ಪವಾರ್ ಅವರ ಅಗಲಿಕೆಗೆ ಶೋಕ ವ್ಯಕ್ತಪಡಿಸಿದ್ದಾರೆ.

