PM Modi Slams IndiGo Chaos: “Rules Must Not Become a Burden on People
x

ಪ್ರಧಾನಿ ನರೇಂದ್ರ ಮೋದಿ

ಇಂಡಿಗೋ ಅವ್ಯವಸ್ಥೆಗೆ ಪ್ರಧಾನಿ ಗರಂ: ನಿಯಮಗಳು ಜನರಿಗೆ ಕಂಟಕವಾಗಬಾರದು ಎಂದ ಮೋದಿ

ಮಂಗಳವಾರ ನಡೆದ ಎನ್‌ಡಿಎ ಸಂಸದರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನಯಾನ ವಲಯದ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದರು.


Click the Play button to hear this message in audio format

ಕಳೆದ ಎಂಟು ದಿನಗಳಿಂದ ದೇಶದಾದ್ಯಂತ ಇಂಡಿಗೋ ವಿಮಾನಯಾನ ಸಂಸ್ಥೆಯ ಸೇವೆಯಲ್ಲಿ ಉಂಟಾಗಿರುವ ತೀವ್ರ ವ್ಯತ್ಯಯ, ಸರಣಿ ರದ್ದತಿ ಮತ್ತು ಪ್ರಯಾಣಿಕರ ಪರದಾಟದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಇಂಡಿಗೋದ ಚಳಿಗಾಲದ ವಿಮಾನ ಹಾರಾಟ ಪಟ್ಟಿಯನ್ನು ಶೇ. 5ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನಿಯಮಗಳು ಜನಸಾಮಾನ್ಯರಿಗೆ ಹೊರೆಯಾಗಬಾರದು ಎಂದು ಅಧಿಕಾರಿಗಳಿಗೆ ಮತ್ತು ಇಲಾಖೆಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮಂಗಳವಾರ ನಡೆದ ಎನ್‌ಡಿಎ ಸಂಸದರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ವಿಮಾನಯಾನ ವಲಯದ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಪ್ರಸ್ತಾಪಿಸಿದರು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಪ್ರಧಾನಿಯವರ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಿಯಮಗಳು ಮತ್ತು ನಿಬಂಧನೆಗಳು ಆಡಳಿತಾತ್ಮಕ ವ್ಯವಸ್ಥೆಯನ್ನು ಸುಧಾರಿಸಬೇಕೇ ಹೊರತು, ಅವುಗಳನ್ನು ಸಾರ್ವಜನಿಕರಿಗೆ ಕಿರುಕುಳ ನೀಡಲು ಬಳಸಬಾರದು ಎಂದು ಪ್ರಧಾನಿ ಹೇಳಿದ್ದಾರೆ.

ಭಾರತೀಯ ಪ್ರಜೆ ಎಂಬ ಒಂದೇ ಕಾರಣಕ್ಕೆ ಸರ್ಕಾರದ ಯಾವುದೇ ವ್ಯವಸ್ಥೆಯಿಂದ ಅಥವಾ ನಿಯಮಗಳಿಂದ ನಾಗರಿಕರು ಕಷ್ಟ ಅನುಭವಿಸುವಂತಾಗಬಾರದು ಎಂದು ಮೋದಿ ಅವರು ಖಡಕ್ ಎಚ್ಚರಿಕೆ ನೀಡಿದ್ದಾರೆ. ಕಳೆದ ಒಂದು ವಾರದಿಂದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಅನುಭವಿಸುತ್ತಿರುವ ಯಾತನೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.

ಡಿಜಿಸಿಎಯಿಂದ ಕಠಿಣ ಕ್ರಮ: ಶೇ.5 ರಷ್ಟು ಹಾರಾಟ ಕಡಿತ

ಡಿಸೆಂಬರ್ 1ರಿಂದ ಉಂಟಾಗಿರುವ ಬೃಹತ್ ಪ್ರಮಾಣದ ವಿಮಾನ ಹಾರಾಟ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ, ಮಂಗಳವಾರ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಇದರ ಅನ್ವಯ ಇಂಡಿಗೋದ ಚಳಿಗಾಲದ ವೇಳಾಪಟ್ಟಿಯಲ್ಲಿ ಶೇ. 5ರಷ್ಟು ವಿಮಾನಗಳ ಹಾರಾಟವನ್ನು ಕಡಿತಗೊಳಿಸಲಾಗಿದೆ. ವಿಶೇಷವಾಗಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುವ ಮತ್ತು ಅತಿ ಹೆಚ್ಚು ವಿಮಾನಗಳು ಸಂಚರಿಸುವ ಮಾರ್ಗಗಳಲ್ಲಿ ಈ ಕಡಿತ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಬುಧವಾರ (ಡಿ.10) ಸಂಜೆ 5 ಗಂಟೆಯೊಳಗೆ ತನ್ನ ಪರಿಷ್ಕೃತ ವೇಳಾಪಟ್ಟಿಯನ್ನು ಸಲ್ಲಿಸುವಂತೆ ಇಂಡಿಗೋ ಸಂಸ್ಥೆಗೆ ಡಿಜಿಸಿಎ ಕಟ್ಟುನಿಟ್ಟಿನ ಸೂಚನೆ ನೀಡಿದೆ. 2025-26ರ ಚಳಿಗಾಲದ ವೇಳಾಪಟ್ಟಿಯ ಪ್ರಕಾರ, ಇಂಡಿಗೋ ಪ್ರತಿದಿನ 2,200 ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುತ್ತಿತ್ತು, ಆದರೆ ಈಗ ನಿರ್ವಹಣಾ ವೈಫಲ್ಯದ ಕಾರಣ ಅದಕ್ಕೆ ಕಡಿವಾಣ ಬಿದ್ದಂತಾಗಿದೆ.

ಮುಂದುವರಿದ ಪ್ರಯಾಣಿಕರ ಪರದಾಟ

ಡಿಜಿಸಿಎ ಕ್ರಮದ ನಡುವೆಯೂ ಮಂಗಳವಾರ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಪ್ರಯಾಣಿಕರ ಗೋಳು ಮುಂದುವರಿದಿತ್ತು. ಮೂಲಗಳ ಪ್ರಕಾರ, ಸಿಲಿಕಾನ್ ಸಿಟಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೊಂದರಲ್ಲೇ ಮಂಗಳವಾರ ಒಂದೇ ದಿನ ಬರೋಬ್ಬರಿ 121 ವಿಮಾನಗಳು ರದ್ದಾಗಿವೆ. ಇದರಲ್ಲಿ 58 ಆಗಮನ ಮತ್ತು 63 ನಿರ್ಗಮನ ವಿಮಾನಗಳು ಸೇರಿವೆ. ಇತ್ತ ಹೈದರಾಬಾದ್ ವಿಮಾನ ನಿಲ್ದಾಣದಲ್ಲೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಅಲ್ಲಿಯೂ 58 ವಿಮಾನಗಳ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, 14 ಆಗಮನ ಹಾಗೂ 44 ನಿರ್ಗಮನ ವಿಮಾನಗಳು ರದ್ದಾಗುವ ಮೂಲಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು.

745 ಕೋಟಿ ರೂ. ಮರುಪಾವತಿ

ಈ ಬಿಕ್ಕಟ್ಟಿನ ಬಗ್ಗೆ ಡಿಡಿ ನ್ಯೂಸ್ ಜೊತೆ ಮಾತನಾಡಿದ ಕೇಂದ್ರ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಪ್ರಯಾಣಿಕರ ನಷ್ಟದ ಬಗ್ಗೆ ಮಾಹಿತಿ ನೀಡಿದರು. ಡಿಸೆಂಬರ್ 1 ರಿಂದ 8ರ ವರೆಗೆ ರದ್ದಾದ ಸುಮಾರು 7,30,655 ಪಿಎನ್‌ಆರ್‌ಗಳಿಗೆ ಸಂಬಂಧಿಸಿದಂತೆ ಒಟ್ಟು 745 ಕೋಟಿ ರೂಪಾಯಿಗಳನ್ನು ಪ್ರಯಾಣಿಕರಿಗೆ ಈಗಾಗಲೇ ಮರುಪಾವತಿ (Refund) ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ವಿಮಾನ ನಿಲ್ದಾಣಗಳಲ್ಲಿ ಬಾಕಿಯಾಗಿದ್ದ ಸುಮಾರು 9,000 ಬ್ಯಾಗೇಜ್‌ಗಳ ಪೈಕಿ 6,000 ಬ್ಯಾಗ್‌ಗಳನ್ನು ಈಗಾಗಲೇ ಸಂಬಂಧಪಟ್ಟ ಪ್ರಯಾಣಿಕರಿಗೆ ತಲುಪಿಸಲಾಗಿದ್ದು, ಉಳಿದ ಬ್ಯಾಗೇಜ್‌ಗಳನ್ನು ತ್ವರಿತವಾಗಿ ತಲುಪಿಸುವ ಕೆಲಸ ನಡೆಯುತ್ತಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಏನಿದು ಗೊಂದಲ? ಇಂಡಿಗೋ ಹೇಳುವುದೇನು?

ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಸಿಂಹಪಾಲು ಹೊಂದಿರುವ ಇಂಡಿಗೋ ಸಂಸ್ಥೆ ಇಂತಹ ಸಂಕಷ್ಟಕ್ಕೆ ಸಿಲುಕಲು ಮುಖ್ಯ ಕಾರಣ ಹೊಸ 'ವಿಮಾನ ಕರ್ತವ್ಯ ಸಮಯದ ಮಿತಿ' ನಿಯಮಗಳು ಎನ್ನಲಾಗಿದೆ. ಪೈಲಟ್ ಮತ್ತು ಸಿಬ್ಬಂದಿಗೆ ಹೆಚ್ಚಿನ ವಿಶ್ರಾಂತಿ ನೀಡುವ ಉದ್ದೇಶದಿಂದ ಜಾರಿಗೆ ಬಂದ ಈ ಹೊಸ ನಿಯಮಗಳಿಗೆ ತಕ್ಕಂತೆ ಸಿಬ್ಬಂದಿ ನಿರ್ವಹಣೆ ಮಾಡಲು ಇಂಡಿಗೋ ವಿಫಲವಾಗಿದೆ. ಪರಿಣಾಮವಾಗಿ ಸಿಬ್ಬಂದಿ ಕೊರತೆ ಎದುರಾಗಿ ಸಾವಿರಾರು ವಿಮಾನಗಳು ನೆಲಕಚ್ಚುವಂತಾಗಿದೆ. ಡಿಜಿಸಿಎ ನೀಡಿದ ನೋಟಿಸ್‌ಗೆ ಉತ್ತರಿಸಿರುವ ಇಂಡಿಗೋ, ತಾಂತ್ರಿಕ ದೋಷಗಳು, ಹವಾಮಾನ ವೈಪರೀತ್ಯ ಮತ್ತು ಹೊಸ ನಿಯಮಗಳ ಅನುಷ್ಠಾನದ ಸವಾಲುಗಳು ಈ ಅವ್ಯವಸ್ಥೆಗೆ ಕಾರಣ ಎಂದು ಹೇಳಿಕೊಂಡಿದೆ. ಅಲ್ಲದೆ, ಈ ಅವ್ಯವಸ್ಥೆಗೆ ವಿಷಾದ ವ್ಯಕ್ತಪಡಿಸಿದ್ದು, ಸಮಸ್ಯೆಯ ಮೂಲ ಕಾರಣವನ್ನು ಪತ್ತೆಹಚ್ಚಲು ಹೆಚ್ಚಿನ ಸಮಯಾವಕಾಶ ಕೋರಿದೆ.

Read More
Next Story