ಪುರಿ ಜಗನ್ನಾಥ ದೇವಾಲಯದ ಕ್ಯಾಲೆಂಡರ್‌ನಲ್ಲಿ ಎಡವಟ್ಟು: ದೇವರ ಚಿತ್ರಗಳೇ ಅದಲು-ಬದಲು!
x
ಪುರಿ ಶ್ರೀ ಜಗನ್ನಾಥ ದೇವಾಲಯ

ಪುರಿ ಜಗನ್ನಾಥ ದೇವಾಲಯದ ಕ್ಯಾಲೆಂಡರ್‌ನಲ್ಲಿ ಎಡವಟ್ಟು: ದೇವರ ಚಿತ್ರಗಳೇ ಅದಲು-ಬದಲು!

ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಬಿಡುಗಡೆ ಮಾಡಿದ 2026ರ ಕ್ಯಾಲೆಂಡರ್‌ನಲ್ಲಿ ದೊಡ್ಡ ಪ್ರಮಾದವಾಗಿದೆ. ಜಗನ್ನಾಥ ಮತ್ತು ಬಲಭದ್ರ ದೇವರ ಚಿತ್ರಗಳು ಅದಲು-ಬದಲಾಗಿದ್ದು, ಬಿಜೆಡಿ ಆಕ್ರೋಶ ಹೊರಹಾಕಿದೆ.


2025ನೇ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷ 2026ನ್ನು ಬರಮಾಡಿಕೊಳ್ಳುವ ಸಂಭ್ರಮದ ನಡುವೆಯೇ ಒಡಿಶಾದ ಪುರಿ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ (SJTA) ಬಿಡುಗಡೆ ಮಾಡಿದ ಹೊಸ ವರ್ಷದ ಅಧಿಕೃತ ಕ್ಯಾಲೆಂಡರ್ ಭಾರಿ ವಿವಾದಕ್ಕೆ ನಾಂದಿ ಹಾಡಿದೆ. ಕ್ಯಾಲೆಂಡರ್‌ನಲ್ಲಿ ದೇವರ ಚಿತ್ರಗಳೇ ಅದಲು ಬದಲಾಗಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೇ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಏನಿದು ವಿವಾದ?

ಕ್ಯಾಲೆಂಡರ್‌ನಲ್ಲಿ ದೇವರ ಚಿತ್ರಗಳನ್ನು ಮುದ್ರಿಸುವಾಗ ಗಂಭೀರ ತಪ್ಪು ಮಾಡಲಾಗಿದೆ. ಭಗವಾನ್ ಜಗನ್ನಾಥ ಇರಬೇಕಾದ ಸ್ಥಾನದಲ್ಲಿ ಬಲಭದ್ರ ದೇವರ ಚಿತ್ರವನ್ನು ಮತ್ತು ಬಲಭದ್ರ ದೇವರು ಇರಬೇಕಾದ ಜಾಗದಲ್ಲಿ ಜಗನ್ನಾಥನ ಚಿತ್ರವನ್ನು ಮುದ್ರಿಸಲಾಗಿದೆ. ಈ ಚಿತ್ರಗಳ ಅದಲು-ಬದಲು ಭಕ್ತರ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಲಾಗಿದೆ.

ರಾಜಕೀಯ ಸಂಘರ್ಷ

ಈ ಪ್ರಮಾದವನ್ನು ವಿರೋಧ ಪಕ್ಷವಾದ ಬಿಜು ಜನತಾ ದಳ (BJD) ತೀವ್ರವಾಗಿ ಖಂಡಿಸಿದೆ. “ಇದು ಕೇವಲ ಮುದ್ರಣ ದೋಷವಲ್ಲ, ಇದು ಭಕ್ತರ ಶ್ರದ್ಧೆ ಮತ್ತು ದೇವಾಲಯದ ಸಂಪ್ರದಾಯಕ್ಕೆ ಮಾಡಿದ ಅಪಮಾನ" ಎಂದು ಬಿಜೆಡಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ.

ಬಿಜೆಡಿ (BJD) ನಾಯಕರು ಕೇವಲ ಕ್ಷಮೆಯಾಚನೆಯಿಂದ ತೃಪ್ತರಾಗಿಲ್ಲ. ಈ ತಪ್ಪಿಗೆ ಕಾರಣರಾದವರನ್ನು ಅಮಾನತು ಮಾಡಬೇಕು ಮತ್ತು ಭಕ್ತರ ಭಾವನೆಗಳೊಂದಿಗೆ ಧಕ್ಕೆ ತಂದಿರುವ ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳು ಹೊಣೆ ಹೊರಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಭಕ್ತರ ಅಸಮಾಧಾನ

ಜಗನ್ನಾಥ ಸಂಸ್ಕೃತಿಯಲ್ಲಿ ಪ್ರತಿಯೊಬ್ಬ ದೇವರಿಗೂ ತನ್ನದೇ ಆದ ವಿಶಿಷ್ಟ ಸ್ಥಾನ ಮತ್ತು ಸಂಪ್ರದಾಯಗಳಿವೆ. ಕ್ಯಾಲೆಂಡರ್‌ನಂತಹ ಪವಿತ್ರ ವಸ್ತುಗಳಲ್ಲಿ ಇಂತಹ ತಪ್ಪುಗಳನ್ನು ಮಾಡಿರುವುದು ಪುರಿಯ ನಾಗರಿಕರು ಮತ್ತು ಜಗನ್ನಾಥ ಭಕ್ತರ ಕೆಂಗಣ್ಣಿಗೆ ಗುರಿಯಾಗಿದೆ.

ಕ್ಷಮೆಯಾಚಿಸಿ ಆಡಳಿತ ಮಂಡಳಿ

ಮುದ್ರಣ ದೋಷದ ಬಗ್ಗೆ ಭಕ್ತರು ಮತ್ತು ರಾಜಕೀಯ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾದ ತಕ್ಷಣ, ದೇವಾಲಯದ ಆಡಳಿತ ಮಂಡಳಿಯು ವಿವಾದಿತ ಕ್ಯಾಲೆಂಡರ್‌ಗಳ ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಿದೆ. ಈಗಾಗಲೇ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಪ್ರತಿಗಳನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲಾಗಿದೆ. ಈ ಪ್ರಮಾದಕ್ಕಾಗಿ ಆಡಳಿತ ಮಂಡಳಿಯು ಭಕ್ತರ ಕ್ಷಮೆಯಾಚಿಸಿದೆ. ಮುದ್ರಣದ ಹಂತದಲ್ಲಿ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ ಈ ಅಚಾತುರ್ಯ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

ಈ ಎಡವಟ್ಟು ಹೇಗೆ ಸಂಭವಿಸಿತು ಮತ್ತು ಅಂತಿಮ ಮುದ್ರಣಕ್ಕೆ ಮುನ್ನ ಅದನ್ನು ಪರಿಶೀಲಿಸದ ಅಧಿಕಾರಿಗಳು ಯಾರು ಎಂಬುದನ್ನು ಪತ್ತೆಹಚ್ಚಲು ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಮಂಡಳಿ ನೀಡಿದೆ.

ಪರಿಷ್ಕೃತ ಕ್ಯಾಲೆಂಡರ್

ತಪ್ಪುಗಳನ್ನು ಸರಿಪಡಿಸಿ, ದೇವರ ಚಿತ್ರಗಳನ್ನು ಸರಿಯಾದ ಸ್ಥಾನದಲ್ಲಿ ಮುದ್ರಿಸಿ ಹೊಸದಾಗಿ ಕ್ಯಾಲೆಂಡರ್ ಬಿಡುಗಡೆ ಮಾಡಲು ಮಂಡಳಿಯು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದೆ.

Read More
Next Story