ಪುರಿ ಜಗನ್ನಾಥ ದೇವಾಲಯದ ಬಗ್ಗೆ ತಪ್ಪು ಮಾಹಿತಿ; ಯೂಟ್ಯೂಬರ್ ಶುಭಂಕರ್ ಮಿಶ್ರಾ ವಿರುದ್ಧ ತನಿಖೆಗೆ ಆದೇಶ
x

ಪುರಿ ಜಗನ್ನಾಥ ದೇವಾಲಯದ ಬಗ್ಗೆ ತಪ್ಪು ಮಾಹಿತಿ; ಯೂಟ್ಯೂಬರ್ ಶುಭಂಕರ್ ಮಿಶ್ರಾ ವಿರುದ್ಧ ತನಿಖೆಗೆ ಆದೇಶ

ಶುಭಂಕರ್ ಮಿಶ್ರಾ ಅವರು ತಮ್ಮ ವಿಡಿಯೋದಲ್ಲಿ, "ರಾಧಾ ರಾಣಿ ಒಮ್ಮೆ ಜಗನ್ನಾಥನ ದರ್ಶನಕ್ಕೆ ಬಂದಾಗ ಸೇವಕರು ಆಕೆಯನ್ನು ತಡೆದರು. ಇದರಿಂದ ಕೋಪಗೊಂಡ ರಾಧಾ ರಾಣಿ, 'ಯಾವುದೇ ಅವಿವಾಹಿತ ಜೋಡಿ ಇಲ್ಲಿಗೆ ಬಂದರೆ ಅವರ ಮದುವೆ ನಡೆಯುವುದಿಲ್ಲ' ಎಂದು ಶಾಪ ನೀಡಿದ್ದಾರೆ," ಎಂಬ ಕಥೆಯನ್ನು ಹೇಳಿದ್ದರು.


Click the Play button to hear this message in audio format

ಸಾಮಾಜಿಕ ಜಾಲತಾಣದ ಪ್ರಭಾವಿ ವ್ಯಕ್ತಿ ಹಾಗೂ ಪತ್ರಕರ್ತ ಶುಭಂಕರ್ ಮಿಶ್ರಾ ಅವರು ಇತ್ತೀಚೆಗೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ ಪುರಿ ಜಗನ್ನಾಥ ದೇವಾಲಯದ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. "ವಿವಾಹಕ್ಕೂ ಮುನ್ನ ಪ್ರೇಮಿಗಳು (ಅವಿವಾಹಿತ ಜೋಡಿಗಳು) ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಿದರೆ, ರಾಧಾ ರಾಣಿಯ ಶಾಪದಿಂದಾಗಿ ಅವರ ಸಂಬಂಧ ಮುರಿದು ಬೀಳುತ್ತದೆ ಎಂದು ಅವರು ಹೇಳಿಕೊಂಡಿದ್ದರು.

ಶುಭಂಕರ್ ಮಿಶ್ರಾ ಅವರು ತಮ್ಮ ವಿಡಿಯೋದಲ್ಲಿ, "ರಾಧಾ ರಾಣಿ ಒಮ್ಮೆ ಜಗನ್ನಾಥನ ದರ್ಶನಕ್ಕೆ ಬಂದಾಗ ಸೇವಕರು ಆಕೆಯನ್ನು ತಡೆದರು. ಇದರಿಂದ ಕೋಪಗೊಂಡ ರಾಧಾ ರಾಣಿ, 'ಯಾವುದೇ ಅವಿವಾಹಿತ ಜೋಡಿ ಇಲ್ಲಿಗೆ ಬಂದರೆ ಅವರ ಮದುವೆ ನಡೆಯುವುದಿಲ್ಲ' ಎಂದು ಶಾಪ ನೀಡಿದ್ದಾರೆ," ಎಂಬ ಕಥೆಯನ್ನು ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಒಡಿಶಾದಾದ್ಯಂತ ಭಕ್ತರು ಮತ್ತು ದೇವಾಲಯದ ಸೇವಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ತನಿಖಾ ಸಮಿತಿ ರಚನೆ

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಶ್ರೀ ಜಗನ್ನಾಥ ದೇವಾಲಯ ಆಡಳಿತ ಮಂಡಳಿ (SJTA), ಸತ್ಯಾಸತ್ಯತೆ ಪರಿಶೀಲಿಸಲು ಸಮಿತಿಯೊಂದನ್ನು ರಚಿಸಿದೆ. ಉಪ ಮುಖ್ಯ ಆಡಳಿತಾಧಿಕಾರಿ ಹಾಗೂ ಪುರಿ ಜಿಲ್ಲಾಧಿಕಾರಿ ದಿವ್ಯ ಜ್ಯೋತಿ ಪರಿದಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, "ದೇವಾಲಯದ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ತಪ್ಪು ಮಾಹಿತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು," ಎಂದು ಎಚ್ಚರಿಸಿದ್ದಾರೆ.

ಪುರಿ ಜಗನ್ನಾಥ ಸಂಸ್ಕೃತಿಯ ಹಿರಿಯ ಸಂಶೋಧಕ ಡಾ. ಭಾಸ್ಕರ್ ಮಿಶ್ರಾ ಅವರು ಶುಭಂಕರ್ ಮಿಶ್ರಾ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. "ಪುರಾಣಗಳಲ್ಲಾಗಲಿ ಅಥವಾ ಜಗನ್ನಾಥ ಸಂಸ್ಕೃತಿಯ ಇತಿಹಾಸದಲ್ಲಾಗಲಿ ಇಂತಹ ಯಾವುದೇ ಶಾಪದ ಉಲ್ಲೇಖವಿಲ್ಲ. ಇದು ಸಂಪೂರ್ಣ ಕಾಲ್ಪನಿಕ ಕಥೆ," ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಿರಿಯ ಸೇವಕ ಹಜೂರಿ ಕೃಷ್ಣಚಂದ್ರ ಖುಂಟಿಯಾ ಕೂಡ, "ಟಿಆರ್‌ಪಿಗಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದು ಸರಿಯಲ್ಲ," ಎಂದು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿಗಳಾಗಿರುವವರು ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುತ್ತಾರೆ. ಹೀಗಿರುವಾಗ, ಯಾವುದೇ ಧಾರ್ಮಿಕ ಸ್ಥಳದ ಬಗ್ಗೆ ಮಾತನಾಡುವ ಮುನ್ನ ಐತಿಹಾಸಿಕ ಸತ್ಯಾಸತ್ಯತೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂದು ದೇವಾಲಯದ ಆಡಳಿತ ಮಂಡಳಿ ಮನವಿ ಮಾಡಿದೆ. ತಪ್ಪು ಮಾಹಿತಿ ಹರಡಿ ಭಕ್ತರಲ್ಲಿ ಗೊಂದಲ ಮೂಡಿಸಬಾರದು ಎಂದು ಎಚ್ಚರಿಸಿದೆ.

Read More
Next Story