
ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನ ಹಾಗೂ ಸುಪ್ರೀಂ ಕೋರ್ಟ್
ಏರ್ ಇಂಡಿಯಾ 171 ದುರಂತ: ಸ್ವತಂತ್ರ ತನಿಖೆಗೆ ಕೋರಿಕೆ; ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು
ವಿಮಾನ ಅಪಘಾತ ತನಿಖಾ ದಳ ನಡೆಸುತ್ತಿರುವ ತನಿಖೆಯು ನಾಗರಿಕರ ಜೀವಿಸುವ ಹಕ್ಕು ಮತ್ತು ಸತ್ಯ ತಿಳಿಯುವ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಸರ್ಕಾರೇತರ ಸಂಸ್ಥೆಯಾದ (NGO) 'ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್' ಈ ಅರ್ಜಿ ಸಲ್ಲಿಸಿದೆ.
ಕಳೆದ ವರ್ಷ ಅಹಮದಾಬಾದ್‌ನಲ್ಲಿ ನಡೆದ ಭೀಕರ ಏರ್ ಇಂಡಿಯಾ ಬೋಯಿಂಗ್ 787-8 (AI 171) ವಿಮಾನ ದುರಂತದ ಕುರಿತಾದ ಅಧಿಕೃತ ತನಿಖೆಯು ಪಾರದರ್ಶಕವಾಗಿಲ್ಲ ಎಂದು ಆರೋಪಿಸಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಬುಧವಾರ (ಜ.28) ಸಮ್ಮತಿಸಿದೆ.
ವಿಮಾನ ಅಪಘಾತ ತನಿಖಾ ದಳ ನಡೆಸುತ್ತಿರುವ ತನಿಖೆಯು ನಾಗರಿಕರ ಜೀವಿಸುವ ಹಕ್ಕು ಮತ್ತು ಸತ್ಯ ತಿಳಿಯುವ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿ ಸರ್ಕಾರೇತರ ಸಂಸ್ಥೆಯಾದ (NGO) 'ಸೇಫ್ಟಿ ಮ್ಯಾಟರ್ಸ್ ಫೌಂಡೇಶನ್' ಈ ಅರ್ಜಿ ಸಲ್ಲಿಸಿದೆ.
ನ್ಯಾಯಾಲಯದಲ್ಲಿ ಏನಾಯಿತು?
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿದರು. "ಕೇಂದ್ರ ಸರ್ಕಾರವಾಗಲೀ ಅಥವಾ ಎಎಐಬಿ ಆಗಲೀ ಈವರೆಗೂ ಪಿಐಎಲ್‌ಗೆ ತಮ್ಮ ಉತ್ತರವನ್ನು ಸಲ್ಲಿಸಿಲ್ಲ," ಎಂದು ಅವರು ನ್ಯಾಯಾಲಯದ ಗಮನಕ್ಕೆ ತಂದರು.
"ಬೋಯಿಂಗ್ 787 ವಿಮಾನಗಳಲ್ಲಿ ಗಂಭೀರ ಸಮಸ್ಯೆಗಳಿದ್ದು, ಅವುಗಳ ಹಾರಾಟ ನಿಲ್ಲಿಸಬೇಕು ಎಂದು ಪೈಲಟ್‌ಗಳ ಸಂಘವೇ ಹೇಳುತ್ತಿದೆ. ಹೀಗಿರುವಾಗ ಕೇವಲ ಎಎಐಬಿ ತನಿಖೆ ಸಾಲದು, ಗಂಭೀರ ಸ್ವರೂಪದ ಈ ಅಪಘಾತದ ಬಗ್ಗೆ ಕೋರ್ಟ್ ಆಫ್ ಎನ್ಕ್ವೈರಿ (Court of Inquiry) ಮಾದರಿಯ ಸ್ವತಂತ್ರ ತನಿಖೆ ನಡೆಯಬೇಕು," ಎಂದು ಭೂಷಣ್ ಪ್ರತಿಪಾದಿಸಿದರು. ಚುನಾವಣಾ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ಮುಗಿದ ಬಳಿಕ, ಈ ಪ್ರಕರಣಕ್ಕೆ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸುವುದಾಗಿ ಸಿಜೆಐ ತಿಳಿಸಿದ್ದಾರೆ.
ಏನಿದು ದುರಂತ?
2025ರ ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ಬಿದ್ದಿತ್ತು. ಈ ದುರಂತದಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 260 ಜನರು ಮೃತಪಟ್ಟಿದ್ದರು. ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಸಹ-ಪೈಲಟ್ ಕ್ಲೈವ್ ಕುಂದರ್ ಕೂಡ ಮೃತಪಟ್ಟಿದ್ದರು. ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಬ್ರಿಟಿಷ್ ಪ್ರಜೆ ವಿಶ್ವಾಶ್ ಕುಮಾರ್ ರಮೇಶ್.
ಕಳೆದ ನವೆಂಬರ್‌ನಲ್ಲಿ ಎಎಐಬಿಯ ಪ್ರಾಥಮಿಕ ವರದಿಯು ಪೈಲಟ್‌ಗಳ ತಪ್ಪು ಎಂದು ಬಿಂಬಿಸಲು ಯತ್ನಿಸಿತ್ತು. ಆದರೆ, ಮೃತ ಪೈಲಟ್ ಸುಮೀತ್ ಅವರ ತಂದೆ ಮತ್ತು 'ಫೆಡರೇಶನ್ ಆಫ್ ಇಂಡಿಯನ್ ಪೈಲಟ್ಸ್' ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತನಿಖಾ ವರದಿಯ ಆಯ್ದ ಭಾಗಗಳನ್ನು ಸೋರಿಕೆ ಮಾಡಿ ಮಾಧ್ಯಮಗಳಲ್ಲಿ ಪೈಲಟ್‌ಗಳ ವಿರುದ್ಧ ನಿರೂಪಣೆ ಸೃಷ್ಟಿಸಿದ್ದನ್ನು ಸುಪ್ರೀಂ ಕೋರ್ಟ್ ಈ ಹಿಂದೆ "ದುರದೃಷ್ಟಕರ ಮತ್ತು ಬೇಜವಾಬ್ದಾರಿಯುತ" ಎಂದು ತರಾಟೆಗೆ ತೆಗೆದುಕೊಂಡಿತ್ತು.
ಮೃತ ಪೈಲಟ್ ಸುಮೀತ್ ಅವರ ತಂದೆ, ಕಾನೂನು ವಿದ್ಯಾರ್ಥಿಯೊಬ್ಬರು ಮತ್ತು ಎನ್‌ಜಿಒ ಸಲ್ಲಿಸಿರುವ ಮೂರು ಪ್ರತ್ಯೇಕ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಒಟ್ಟಿಗೆ ವಿಚಾರಣೆ ನಡೆಸುತ್ತಿದೆ.

