ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಕುಕಿ ಮಹಿಳೆ ಸಾವು – ಮತ್ತೆ ಭುಗಿಲೆದ್ದ ಪ್ರತಿಭಟನೆ
x
ಮಣಿಪುರದಲ್ಲಿ ಹಿಂಸಾಚಾರ

ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಕುಕಿ ಮಹಿಳೆ ಸಾವು – ಮತ್ತೆ ಭುಗಿಲೆದ್ದ ಪ್ರತಿಭಟನೆ

2023ರ ಮಣಿಪುರ ಹಿಂಸಾಚಾರದ ವೇಳೆ ಗ್ಯಾಂಗ್ ರೇಪ್‌ಗೆ ಒಳಗಾಗಿದ್ದ ಕುಕಿ ಸಮುದಾಯದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.


ಮಣಿಪುರದಲ್ಲಿ 2023ರಲ್ಲಿ ಸಂಭವಿಸಿದ ಜನಾಂಗೀಯ ಹಿಂಸಾಚಾರದ ಆರಂಭಿಕ ಹಂತದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಕುಕಿ ಮಹಿಳೆಯೊಬ್ಬರು ಜನವರಿ 10ರಂದು ಗುವಾಹಟಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಕೆಗೆ ಆಗಿದ್ದ ಆಘಾತ ಮತ್ತು ಗಾಯಗಳಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿರುವ ವಿವಿಧ ಸಂಘಟನೆಗಳು ನ್ಯಾಯಕ್ಕಾಗಿ ಆಗ್ರಹಿಸಿವೆ.

ಘಟನೆಯ ಹಿನ್ನೆಲೆ

ದೆಹಲಿ ಮತ್ತು ಚುರಾಚಂದ್‌ಪುರದ ಕುಕಿ ಸಂಘಟನೆಗಳ ಪ್ರಕಾರ, ಮೇ 2023ರಲ್ಲಿ ಇಂಫಾಲದಲ್ಲಿ ಆಕೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು. ಕಿಡ್ನಾಪರ್ಸ್ ಕೈಯಿಂದ ಆಕೆ ಹೇಗೋ ತಪ್ಪಿಸಿಕೊಂಡು ಬಂದಿದ್ದರೂ, ಅಂದಿನಿಂದ ಆಘಾತ ಮತ್ತು ದೈಹಿಕ ಗಾಯಗಳಿಂದ ಆಕೆ ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ.

ಪ್ರತ್ಯೇಕ ಆಡಳಿತಕ್ಕೆ ಬೇಡಿಕೆ

ಮೃತ ಮಹಿಳೆಯ ಗೌರವಾರ್ಥ ಶನಿವಾರ ಸಂಜೆ ಚುರಾಚಂದ್‌ಪುರದಲ್ಲಿ ಕ್ಯಾಂಡಲ್ ಲೈಟ್ ಮೆರವಣಿಗೆ ಆಯೋಜಿಸಲಾಗಿತ್ತು. ಈ ವೇಳೆ ಇಂಡಿಜಿನಸ್ ಟ್ರೈಬಲ್ ಲೀಡರ್ಸ್ ಫೋರಂ (ITLF) ಹೇಳಿಕೆ ನೀಡಿ, "ಮೈತೇಯಿ ಸಮುದಾಯದೊಂದಿಗೆ ಒಟ್ಟಾಗಿ ಬಾಳಲು ಇನ್ನು ಮುಂದೆ ಸಾಧ್ಯವಿಲ್ಲ. ನಮ್ಮ ಸುರಕ್ಷತೆ ಮತ್ತು ಘನತೆಗಾಗಿ ಕುಕಿ-ಜೋ ಜನರಿಗೆ 'ಪ್ರತ್ಯೇಕ ಆಡಳಿತ' ಬೇಕು" ಎಂದು ಒತ್ತಾಯಿಸಿದೆ.

ಈ ಸಾವಿನ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಕುಕಿ ಸಂಘಟನೆಗಳು ಗಂಭೀರ ಆರೋಪಗಳನ್ನು ಮಾಡಿವೆ. ಐಟಿಎಲ್‌ಎಫ್‌ (ITLF) ಸಂಘಟನೆಯು, ಈ ಸಾವು ಕುಕಿ-ಜೋ ಜನರ ಮೇಲೆ ನಡೆಯುತ್ತಿರುವ ಸರಣಿ ಕ್ರೌರ್ಯಕ್ಕೆ ಮತ್ತೊಂದು ಕಹಿ ಸಾಕ್ಷಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ದೆಹಲಿಯಲ್ಲಿ ಧ್ವನಿ ಎತ್ತಿರುವ ಕುಕಿ ವಿದ್ಯಾರ್ಥಿ ಸಂಘಟನೆಯು (KSO), ಇಷ್ಟು ದೊಡ್ಡ ಅಪರಾಧ ನಡೆದಿದ್ದರೂ ಅಪರಾಧಿಗಳ ವಿರುದ್ಧ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದು, ಈ ಸಾವನ್ನು 2023ರ ಹಿಂಸಾಚಾರದ ನೇರ ಪರಿಣಾಮ ಎಂದೇ ಅಧಿಕೃತವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದೆ.

ಇನ್ನು ಕುಕಿ-ಜೋ ಮಹಿಳಾ ವೇದಿಕೆಯು ಆಕೆಗೆ ಸಂತಾಪ ಸೂಚಿಸುತ್ತಾ, ಸಂಘರ್ಷದ ಆರಂಭದಿಂದಲೂ ಕಳೆದ ಮೂರು ವರ್ಷಗಳ ಕಾಲ ಆಕೆ ಅನುಭವಿಸಿದ ಅತೀವ ನೋವು ಜಗತ್ತಿನ ಯಾವುದೇ ವ್ಯಕ್ತಿಗೆ ಬರುವುದು ಬೇಡ ಎಂದು ಕಳವಳ ವ್ಯಕ್ತಪಡಿಸಿದ್ದು, ಆಕೆಯ ಧೈರ್ಯ ಮತ್ತು ಸಾಹಸವನ್ನು ಸದಾ ನೆನೆಯುವುದಾಗಿ ತಿಳಿಸಿದೆ.

ಮೇ 2023ರಿಂದ ಮಣಿಪುರದ ಇಂಫಾಲ ಕಣಿವೆಯಲ್ಲಿರುವ ಮೈತೇಯಿ ಮತ್ತು ಗುಡ್ಡಗಾಡು ಪ್ರದೇಶದ ಕುಕಿ-ಜೋ ಸಮುದಾಯಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಇದುವರೆಗೆ ಕನಿಷ್ಠ 260 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ. ಕಳೆದ ವರ್ಷದ ಫೆಬ್ರವರಿಯಿಂದ ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಲ್ಲಿದೆ.

Read More
Next Story