
ಮೃತ ಡಕ್ ಹೀ ಯುಹ್ ಹಾಗೂ ಆರೋಪಿ ಲುಂಜಿಯಾನಾ ಪಾಮೈ
ದಕ್ಷಿಣ ಕೊರಿಯಾದ ಲಿವ್-ಇನ್ ಪಾರ್ಟ್ನರ್ ಕೊಂದ ಮಣಿಪುರದ ಯುವತಿ
ಮೃತನನ್ನು ದಕ್ಷಿಣ ಕೊರಿಯಾ ಮೂಲದ ಡಕ್ ಹೀ ಯುಹ್ (Duck Hee Yuh) ಎಂದು ಗುರುತಿಸಲಾಗಿದೆ. ಈತ ಖ್ಯಾತ ಮೊಬೈಲ್ ಕಂಪನಿಯೊಂದರಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಇಲ್ಲಿನ ಹೈರೈಸ್ ಅಪಾರ್ಟ್‌ಮೆಂಟ್ ಒಂದರಲ್ಲಿ ಭಾನುವಾರ ತಡರಾತ್ರಿ ನಡೆದ ಕುಡಿತದ ಗಲಾಟೆ ಭೀಕರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ಮಣಿಪುರ ಮೂಲದ ಯುವತಿಯೊಬ್ಬಳು ತನ್ನೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದ ದಕ್ಷಿಣ ಕೊರಿಯಾದ ಪ್ರಜೆಯನ್ನು ಚಾಕುವಿನಿಂದ ಇರಿದು ಕೊಂದಿರುವ ಘಟನೆ ನಡೆದಿದೆ.
ಮೃತನನ್ನು ದಕ್ಷಿಣ ಕೊರಿಯಾ ಮೂಲದ ಡಕ್ ಹೀ ಯುಹ್ (Duck Hee Yuh) ಎಂದು ಗುರುತಿಸಲಾಗಿದೆ. ಈತ ಖ್ಯಾತ ಮೊಬೈಲ್ ಕಂಪನಿಯೊಂದರಲ್ಲಿ ಬ್ರಾಂಚ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಆರೋಪಿ ಮಹಿಳೆಯನ್ನು ಮಣಿಪುರದ ತಂಗಲ್ ನಿವಾಸಿ ಲುಂಜಿಯಾನಾ ಪಾಮೈ ಎಂದು ಪೊಲೀಸರು ಗುರುತಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ಈ ಜೋಡಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮದ್ಯಪಾನ ಮಾಡುತ್ತಿದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸಿಟ್ಟಿನ ಭರದಲ್ಲಿ ಲುಂಜಿಯಾನಾ ಪಾಮೈ ಚಾಕುವಿನಿಂದ ಡಕ್ ಹೀ ಅವರ ಎದೆಗೆ ಬಲವಾಗಿ ಇರಿದಿದ್ದಾಳೆ. ಗಾಯದ ಆಳ ಹೆಚ್ಚಾಗಿದ್ದರಿಂದ ರಕ್ತಸ್ರಾವ ವಿಪರೀತವಾಗಿದೆ. ಗಾಯಾಳುವನ್ನು ಕೂಡಲೇ ಜಿಮ್ಸ್ (GIMS) ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ದೈಹಿಕ ದೌರ್ಜನ್ಯದ ಆರೋಪ
ಪೊಲೀಸರ ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿ ಲುಂಜಿಯಾನಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಆದರೆ, "ತಾನು ಉದ್ದೇಶಪೂರ್ವಕವಾಗಿ ಆತನನ್ನು ಕೊಲ್ಲಲು ಯತ್ನಿಸಿರಲಿಲ್ಲ. ಮದ್ಯಪಾನ ಮಾಡಿದ ನಂತರ ಆತ ನನ್ನ ಮೇಲೆ ಪದೇ ಪದೇ ಹಲ್ಲೆ ನಡೆಸುತ್ತಿದ್ದ. ಘಟನೆ ನಡೆದ ದಿನವೂ ಸಹ ಆತ ಅಮಾನವೀಯವಾಗಿ ನಡೆದುಕೊಂಡಿದ್ದರಿಂದ, ಸ್ವರಕ್ಷಣೆಯ ಭರದಲ್ಲಿ ಈ ಕೃತ್ಯ ನಡೆದಿದೆ" ಎಂದು ಆಕೆ ಹೇಳಿಕೆ ನೀಡಿದ್ದಾಳೆ. ಮೃತ ವ್ಯಕ್ತಿಯು ಅತಿಯಾದ ಕುಡಿತದ ವ್ಯಸನ ಹೊಂದಿದ್ದ ಮತ್ತು ಇಬ್ಬರ ನಡುವೆ ಆಗಾಗ್ಗೆ ಗಲಾಟೆಗಳು ನಡೆಯುತ್ತಿದ್ದವು ಎಂದು ತನಿಖೆಯಿಂದ ತಿಳಿದುಬಂದಿದೆ.
ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು, "ನಾಲೆಡ್ಜ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಮಹಿಳೆಯನ್ನು ಬಂಧಿಸಲಾಗಿದ್ದು, ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಮತ್ತು ಗಾಯಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ" ಎಂದು ತಿಳಿಸಿದ್ದಾರೆ.

