ಮಹಾರಾಷ್ಟ್ರ ಸ್ಥಳೀಯ ಚುನಾವಣೆ: ಮತದಾನಕ್ಕೂ ಮುನ್ನವೇ ಬಿಜೆಪಿ ಮೈತ್ರಿಕೂಟಕ್ಕೆ 68 ಸ್ಥಾನಗಳಲ್ಲಿ ಜಯ!
x
ಮಹಾರಾಷ್ಟ್ರದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು

ಮಹಾರಾಷ್ಟ್ರ ಸ್ಥಳೀಯ ಚುನಾವಣೆ: ಮತದಾನಕ್ಕೂ ಮುನ್ನವೇ ಬಿಜೆಪಿ ಮೈತ್ರಿಕೂಟಕ್ಕೆ 68 ಸ್ಥಾನಗಳಲ್ಲಿ ಜಯ!

ಜನವರಿ 15 ರಂದು ಮಹಾರಾಷ್ಟ್ರ ಪೌರ ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಮಹಾಯುತಿ 68 ಸ್ಥಾನಗಳನ್ನು ಅವಿರೋಧವಾಗಿ ಗೆದ್ದಿದೆ. ಅಧಿಕಾರ ದುರುಪಯೋಗಪಡಿಸಿಕೊಂಡು ಅಭ್ಯರ್ಥಿಗಳನ್ನು ಬೆದರಿಸಲಾಗಿದೆ ಎಂದು ಸಂಜಯ್ ರಾವತ್ ಆರೋಪಿಸಿದ್ದಾರೆ.


ಮಹಾರಾಷ್ಟ್ರದಲ್ಲಿ ಜನವರಿ 15 ರಂದು ನಡೆಯಲಿರುವ ಪೌರ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ, ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವು ಈಗಾಗಲೇ 68 ಸ್ಥಾನಗಳನ್ನು ಅವಿರೋಧವಾಗಿ ಗೆದ್ದುಕೊಂಡಿದೆ. ಆದರೆ, ಆಡಳಿತ ಪಕ್ಷವು ಹಣ ಮತ್ತು ಬೆದರಿಕೆಯ ಮೂಲಕ ವಿರೋಧ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮಾಡಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿದೆ.

ಬಿಜೆಪಿ ಭರ್ಜರಿ ಜಯ

ಬಿಜೆಪಿ ಮುಖಂಡ ಕೇಶವ ಉಪಾಧ್ಯೆ ನೀಡಿರುವ ಮಾಹಿತಿಯಂತೆ, ಅವಿರೋಧವಾಗಿ ಆಯ್ಕೆಯಾದ 68 ಅಭ್ಯರ್ಥಿಗಳಲ್ಲಿ 44 ಮಂದಿ ಬಿಜೆಪಿಯವರಾಗಿದ್ದಾರೆ. ಥಾಣೆ ಜಿಲ್ಲೆಯ ಕಲ್ಯಾಣ್-ಡೊಂಬಿವಲಿ ಮಹಾನಗರ ಪಾಲಿಕೆಯಲ್ಲಿ ಅತಿ ಹೆಚ್ಚು ಸ್ಥಾನಗಳು ಲಭಿಸಿವೆ. ಪುಣೆ, ಪಿಂಪ್ರಿ ಚಿಂಚವಾಡ, ಪನ್ವೇಲ್, ಭಿವಂಡಿ, ಧುಳೆ, ಜಲಗಾಂವ್ ಮತ್ತು ಅಹಲ್ಯಾನಗರದಲ್ಲೂ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುಣೆಯ ವಾರ್ಡ್ ಸಂಖ್ಯೆ 35ರಲ್ಲಿ ಬಿಜೆಪಿಯ ಮಂಜುಷಾ ನಾಗ್ಪುರೆ ಮತ್ತು ಶ್ರೀಕಾಂತ್ ಜಗತಾಪ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ಸಚಿವ ಮುರಳೀಧರ್ ಮೊಹೋಲ್ ಮಾತನಾಡಿ, "ನಮ್ಮ ಗುರಿ 125 ಸ್ಥಾನಗಳಾಗಿದ್ದು, ಈಗಾಗಲೇ 2 ಸ್ಥಾನ ಗೆದ್ದಿದ್ದೇವೆ. ಇದು ನಮ್ಮ ಸರ್ಕಾರದ ಉತ್ತಮ ಆಡಳಿತಕ್ಕೆ ಸಂದ ಜಯ" ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಮಹಾಯುತಿ ಮೈತ್ರಿಕೂಟದ ಇತರ ಸಾಧನೆ

ಏಕನಾಥ್ ಶಿಂದೆ ನೇತೃತ್ವದ ಶಿವಸೇನೆಯ 22 ಅಭ್ಯರ್ಥಿಗಳು ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಯ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಜನಪ್ರಿಯತೆ ಮತ್ತು ರಾಜ್ಯಾಧ್ಯಕ್ಷ ರವೀಂದ್ರ ಚವಾಣ್ ಅವರ ಚುನಾವಣಾ ತಂತ್ರಗಾರಿಕೆಯೇ ಈ ಗೆಲುವಿಗೆ ಕಾರಣ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಹಣ ಮತ್ತು ಬೆದರಿಕೆಯ ಆರೋಪ: ವಿರೋಧ ಪಕ್ಷಗಳ ಆಕ್ರೋಶ

ಶಿವಸೇನೆ (ಯುಬಿಟಿ) ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಆಡಳಿತ ಪಕ್ಷದ ವಿರುದ್ಧ ಕೆಂಡಾಮಂಡಲವಾಗಿವೆ. "ಚುನಾವಣಾಧಿಕಾರಿಗಳ ಮೇಲೆ ಒತ್ತಡ ಹೇರಿ ತಡರಾತ್ರಿಯವರೆಗೂ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ನಡೆಸಲಾಗಿದೆ. ಇದು ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರುವ ಗೂಂಡಾರಾಜ್ಯ. ಮುಂದೊಂದು ದಿನ ಬಾಂಗ್ಲಾದೇಶ ಮತ್ತು ನೇಪಾಳದಂತೆ ಇಲ್ಲಿಯೂ ಜನಜಾಗೃತಿ ಉಂಟಾಗಲಿದೆ" ಎಂದು ಸಂಜಯ್ ರಾವತ್ ಎಚ್ಚರಿಸಿದ್ದಾರೆ.

“ಮತದಾನಕ್ಕೂ ಮುನ್ನವೇ ನೀವು ಗೆಲ್ಲಬೇಕೆಂದಿದ್ದರೆ ಚುನಾವಣೆ ಯಾಕೆ ನಡೆಸುತ್ತೀರಿ? ಭಾರತದಲ್ಲಿ ಪ್ರಜಾಪ್ರಭುತ್ವ ಅಂತ್ಯವಾಗಿದೆ" ಎಂದು ಅವಿನಾಶ್ ಜಾಧವ್ ಕಿಡಿಕಾರಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿಗಳ ಮೇಲೆ ಒತ್ತಡ ಹೇರಿ ಈ ರೀತಿಯ 'ಅವಿರೋಧ' ಜಯ ಸಾಧಿಸಲಾಗಿದೆ ಎಂದು ಅರವಿಂದ್ ಸಾವಂತ್ ಆರೋಪಿಸಿದ್ದಾರೆ.

Read More
Next Story