
9 ವರ್ಷಗಳ ನಂತರ ಬಿಎಂಸಿ ಚುನಾವಣೆ; ಠಾಕ್ರೆ ಸಹೋದರರು Vs ಮಹಾಯುತಿ!
ಮಹಾರಾಷ್ಟ್ರದ 29 ಮಹಾನಗರ ಪಾಲಿಕೆಗಳಿಗೆ ಇಂದು ಮತದಾನ ನಡೆಯುತ್ತಿದ್ದು, ಮುಂಬೈನ ಬಿಎಂಸಿ (BMC) ಚುನಾವಣೆ ದೇಶದ ಗಮನ ಸೆಳೆದಿದೆ.
ದೇಶದ ಆರ್ಥಿಕ ರಾಜಧಾನಿ ಮುಂಬೈ ಇಂದು 'ಮಹಾಸಂಗ್ರಾಮ'ಕ್ಕೆ ಸಾಕ್ಷಿಯಾಗಿದೆ! ಸುಮಾರು ಒಂಬತ್ತು ವರ್ಷಗಳ ದೀರ್ಘ ಕಾಯುವಿಕೆಯ ನಂತರ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(BMC) ಗದ್ದುಗೆಗಾಗಿ ಮತದಾನ ಆರಂಭವಾಗಿದೆ. ಒಂದೆಡೆ ಅಧಿಕಾರ ಉಳಿಸಿಕೊಳ್ಳಲು ಹವಣಿಸುತ್ತಿರುವ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ, ಇನ್ನೊಂದೆಡೆ ಎರಡು ದಶಕಗಳ ಬಳಿಕ ಒಂದಾಗಿರುವ ಠಾಕ್ರೆ ಸಹೋದರರ (ಉದ್ಧವ್-ರಾಜ್) ಮರಾಠಿ ಶಕ್ತಿ ಪ್ರದರ್ಶನ.
ಮಹಾರಾಷ್ಟ್ರದ 29 ಪಾಲಿಕೆಗಳಿಗೆ ಇಂದು ಬೆಳಗ್ಗಿನಿಂದಲೇ ಬಿರುಸಿನ ಮತದಾನ ನಡೆಯುತ್ತಿದ್ದು, ಗಣ್ಯರು, ಸೆಲೆಬ್ರಿಟಿಗಳು ಬೆಳಗ್ಗಿನಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
• ಒಟ್ಟು ಪಾಲಿಕೆಗಳು: 29 ಮಹಾನಗರ ಪಾಲಿಕೆಗಳು.
• ಒಟ್ಟು ಸ್ಥಾನಗಳು: 893 ವಾರ್ಡ್‌ಗಳ 2,869 ಸ್ಥಾನಗಳಿಗೆ ಮತದಾನ.
• ಮತದಾರರು: 3.48 ಕೋಟಿ ಮತದಾರರು 15,931 ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.
• ಬೃಹತ್ ಭದ್ರತೆ: ಮುಂಬೈ ನಗರವೊಂದರಲ್ಲೇ 25,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಬಿಎಂಸಿ ವಿಶೇಷತೆ
ಸುಮಾರು ನಾಲ್ಕು ವರ್ಷಗಳ ವಿಳಂಬದ ನಂತರ ಹಾಗೂ ಕಳೆದ ಒಂಬತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಬಿಎಂಪಿಗೆ ಚುನಾವಣೆ ನಡೆಯುತ್ತಿದೆ. 74,400 ಕೋಟಿ ರೂ.ಗಳಿಗೂ ಅಧಿಕ ವಾರ್ಷಿಕ ಬಜೆಟ್ ಹೊಂದಿರುವ ಈ ಸಂಸ್ಥೆಯ 227 ಸ್ಥಾನಗಳಿಗೆ 1,700 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 2022ರಲ್ಲಿ ಶಿವಸೇನೆಯ ಸೀಳಿಕೆಯ ನಂತರ ನಡೆಯುತ್ತಿರುವ ಮೊದಲ ಬಿಎಂಸಿ ಚುನಾವಣೆ ಇದಾಗಿದ್ದು, ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂದೆ ಬಣಗಳಿಗೆ ಇದು ಅಸ್ತಿತ್ವದ ಹೋರಾಟವಾಗಿದೆ.
ರಾಜಕೀಯ ಮೈತ್ರಿ ಮತ್ತು ರಣತಂತ್ರ
• ಠಾಕ್ರೆ ಸಹೋದರರ ಸಮ್ಮಿಲನ: ಮರಾಠಿ ಮತಗಳನ್ನು ಒಗ್ಗೂಡಿಸಲು ಎರಡು ದಶಕಗಳ ನಂತರ ಉದ್ಧವ್ ಠಾಕ್ರೆ (Shiv Sena UBT) ಮತ್ತು ರಾಜ್ ಠಾಕ್ರೆ (MNS) ಒಂದಾಗಿದ್ದಾರೆ.
• ಮಹಾಯುತಿ ಭರವಸೆ: ಬಿಜೆಪಿ ನೇತೃತ್ವದ ಮೈತ್ರಿಕೂಟವು ಮಹಿಳೆಯರಿಗೆ ಬೆಸ್ಟ್ (BEST) ಬಸ್ ಪ್ರಯಾಣದಲ್ಲಿ ಶೇ. 50 ರಿಯಾಯಿತಿ ಘೋಷಿಸಿದೆ.
• ಕಾಂಗ್ರೆಸ್ ನಡೆ: ಮಹಾ ವಿಕಾಸ್ ಅಘಾಡಿ (MVA) ನೆರಳಿನಿಂದ ಹೊರಬಂದಿರುವ ಕಾಂಗ್ರೆಸ್, ಪ್ರಕಾಶ್ ಅಂಬೇಡ್ಕರ್ ಅವರ ವಂಚಿತ್ ಬಹುಜನ ಅಘಾಡಿ (VBA) ಜೊತೆ ಮೈತ್ರಿ ಮಾಡಿಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿದೆ.
ಗಣ್ಯರಿಂದ ಮತದಾನ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನಾಗ್ಪುರದಲ್ಲಿ ಮೊದಲ ವ್ಯಕ್ತಿಯಾಗಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಂಬೈನಲ್ಲಿ ಮತದಾನ ಮಾಡಿ, "ಮುಂಬೈ ನಾಗರಿಕರ ಕೈಯಲ್ಲಿ ರಿಮೋಟ್ ಕಂಟ್ರೋಲ್ ಇದೆ, ಸಂಭಾಷಣೆ ಹೊಡೆಯುವ ಬದಲು ಮತದಾನ ಮಾಡಿ ನಿಜವಾದ ಹೀರೋ ಆಗಿ" ಎಂದು ಕರೆ ನೀಡಿದರು.

