ಅಣ್ಣಾಮಲೈ v/s ರಾಜ್ ಠಾಕ್ರೆ: ಮುಂಬೈನಲ್ಲಿ ಮತ್ತೆ ಮೊಳಗಿದ ಹಟಾವೋ ಲುಂಗಿ ಘೋಷಣೆ
x
ರಾಜ್‌ ಠಾಕ್ರೆ ಮತ್ತು ಅಣ್ಣಾಮಲೈ

ಅಣ್ಣಾಮಲೈ v/s ರಾಜ್ ಠಾಕ್ರೆ: ಮುಂಬೈನಲ್ಲಿ ಮತ್ತೆ ಮೊಳಗಿದ "ಹಟಾವೋ ಲುಂಗಿ" ಘೋಷಣೆ

ಮುಂಬೈ ಮಹಾರಾಷ್ಟ್ರಕ್ಕೆ ಸೇರಿದ್ದಲ್ಲ ಎಂಬ ಅಣ್ಣಾಮಲೈ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ಠಾಕ್ರೆ ಸಹೋದರರು ಇದನ್ನು ಮರಾಠಿ ಜನರಿಗೆ ಮಾಡಿದ ಅವಮಾನ ಎಂದು ಕರೆದಿದ್ದರೆ, ಅಣ್ಣಾಮಲೈ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾರೆ.


ಬಿಎಂಸಿ ಚುನಾವಣೆ ಪ್ರಚಾರದ ವೇಳೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ನೀಡಿದ ಒಂದು ಹೇಳಿಕೆ ಈಗ ಮಹಾರಾಷ್ಟ್ರ ರಾಜಕಾರಣದಲ್ಲಿ ಕಿಚ್ಚು ಹಚ್ಚಿದೆ. ಅಣ್ಣಾಮಲೈ ಅವರ ಹೇಳಿಕೆಯನ್ನು ವಿರೋಧಿಸಿ ಉದ್ಧವ್ ಠಾಕ್ರೆ ಮತ್ತು ರಾಜ್ ಠಾಕ್ರೆ 20 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಒಂದಾಗಿದ್ದಾರೆ.

ವಿವಾದಕ್ಕೆ ಕಾರಣವಾದ ಅಣ್ಣಾಮಲೈ ಹೇಳಿಕೆ ಏನು?

ಜನವರಿ 9 ರಂದು ಮುಂಬೈನಲ್ಲಿ ಮಾತನಾಡಿದ್ದ ಅಣ್ಣಾಮಲೈ, "ಬಾಂಬೆ (ಮುಂಬೈ) ಕೇವಲ ಮಹಾರಾಷ್ಟ್ರದ ನಗರವಲ್ಲ, ಅದೊಂದು ಅಂತರಾಷ್ಟ್ರೀಯ ನಗರ" ಎಂದಿದ್ದರು. ಅಲ್ಲದೆ, ಮುಂಬೈನ ಬಜೆಟ್ ಬೆಂಗಳೂರು ಅಥವಾ ಚೆನ್ನೈಗಿಂತ ದೊಡ್ಡದಾಗಿರುವುದರಿಂದ ಇಲ್ಲಿ ಬಿಜೆಪಿ ಮೇಯರ್ ಅಗತ್ಯವಿದೆ ಎಂದು ಒತ್ತಿ ಹೇಳಿದ್ದರು. ಈ ವೇಳೆ ಅವರು 'ಮುಂಬೈ' ಬದಲಿಗೆ ಹಳೆಯ ಹೆಸರಾದ 'ಬಾಂಬೆ' ಎಂದು ಬಳಸಿದ್ದು ಮರಾಠಿ ಭಾಷಿಕರ ಕೆಂಗಣ್ಣಿಗೆ ಗುರಿಯಾಗಿದೆ.

ರಾಜ್ ಠಾಕ್ರೆ ಕಿಡಿ

ಶಿವಾಜಿ ಪಾರ್ಕ್‌ನಲ್ಲಿ ನಡೆದ ಜಂಟಿ ರ್ಯಾಲಿಯಲ್ಲಿ ಮಾತನಾಡಿದ ರಾಜ್ ಠಾಕ್ರೆ, ಅಣ್ಣಾಮಲೈ ಅವರನ್ನು 'ರಸಮಲೈ' ಎಂದು ಲೇವಡಿ ಮಾಡಿದರು. "ತಮಿಳುನಾಡಿನಿಂದ ಬಂದ ಇವರಿಗೆ ಮುಂಬೈಗೂ ಮಹಾರಾಷ್ಟ್ರಕ್ಕೂ ಸಂಬಂಧವಿಲ್ಲ ಎನ್ನಲು ಎಷ್ಟು ಧೈರ್ಯ? ನಿಮಗೂ ಇಲ್ಲಿಗೂ ಇರುವ ಸಂಬಂಧ ಏನು?" ಎಂದು ಪ್ರಶ್ನಿಸಿದರು. ಅಷ್ಟೇ ಅಲ್ಲದೆ, 1960ರ ದಶಕದ ವಿವಾದಾತ್ಮಕ ಘೋಷಣೆ "ಹಟಾವೋ ಲುಂಗಿ ಬಜಾವೋ ಪುಂಗಿ" (ದಕ್ಷಿಣ ಭಾರತೀಯರ ವಿರುದ್ಧದ ಘೋಷಣೆ) ಅನ್ನು ನೆನಪಿಸುವ ಮೂಲಕ ಪ್ರಾದೇಶಿಕ ಭಾವನೆ ಕೆರಳಿಸಿದರು.

'ಕಾಲು ಕತ್ತರಿಸುವ' ಬೆದರಿಕೆಗೆ ಅಣ್ಣಾಮಲೈ ಓಪನ್ ಚಾಲೆಂಜ್!

ಶಿವಸೇನೆಯ ಮುಖವಾಣಿ 'ಸಾಮ್ನಾ' ಪತ್ರಿಕೆಯಲ್ಲಿ ಅಣ್ಣಾಮಲೈ ಮುಂಬೈಗೆ ಬಂದರೆ ಅವರ ಕಾಲು ಕತ್ತರಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎನ್ನಲಾಗಿದೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಣ್ಣಾಮಲೈ:

"ನನ್ನನ್ನು ಬೆದರಿಸಲು ಇವರು ಯಾರು? ನಾನು ರೈತನ ಮಗ. ತಾಕತ್ತಿದ್ದರೆ ನನ್ನ ಕಾಲು ಕತ್ತರಿಸಿ ನೋಡಿ, ನಾನು ಮುಂಬೈಗೆ ಬಂದೇ ಬರುತ್ತೇನೆ. ಮುಂಬೈ ವಿಶ್ವದರ್ಜೆಯ ನಗರ ಎಂದರೆ ಮರಾಠಿಗರು ಅದನ್ನು ಕಟ್ಟಿಲ್ಲ ಎಂದರ್ಥವಲ್ಲ. ಈ ನಾಯಕರಿಗೆ ಜ್ಞಾನದ ಕೊರತೆಯಿದೆ" ಎಂದು ಸವಾಲು ಹಾಕಿದ್ದಾರೆ.

ಹಿರಿಯ ಪತ್ರಕರ್ತರ ಪ್ರಕಾರ, ಈ ವಿವಾದವು ಎರಡು ಕಡೆಯವರಿಗೆ ರಾಜಕೀಯ ಲಾಭ ತಂದುಕೊಡುತ್ತಿದೆ. ಠಾಕ್ರೆ ಕುಟುಂಬ ಮುಂಬೈ ಮರಾಠಿ ಭಾಷಿಕರ ಕೈತಪ್ಪಿ ಹೋಗುತ್ತಿದೆ ಎಂಬ ಭಯವನ್ನು ಹುಟ್ಟಿಸಿ ಮರಾಠಿ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಮತ್ತೊಂದೆಡೆ ಅಣ್ಣಾಮಲೈ ತಮಿಳುನಾಡಿನಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಅವರು ಇಂತಹ ರಾಷ್ಟ್ರಮಟ್ಟದ ವಿವಾದಗಳ ಮೂಲಕ ತಮ್ಮ ಪ್ರಭಾವವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ.

Read More
Next Story