ಕರ್ನಾಟಕ ಪಾಕಿಸ್ತಾನವಿದ್ದಂತೆ: ಅಣ್ಣಾಮಲೈ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ
x

ಕರ್ನಾಟಕ ಪಾಕಿಸ್ತಾನವಿದ್ದಂತೆ: ಅಣ್ಣಾಮಲೈ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ


ʻʻಅಣ್ಣಾಮಲೈ ಅವರು ಕರ್ನಾಟಕದ ಅನ್ನ ತಿಂದು ಬದುಕಿದ್ದನ್ನು ಮರೆತು ಈಗ ಕರ್ನಾಟಕವನ್ನೇ ಪಾಕಿಸ್ತಾನ ಎನ್ನುವಷ್ಟರ ಮಟ್ಟಿಗೆ ದುರಹಂಕಾರ ಬೆಳೆಸಿಕೊಂಡಿದ್ದಾರೆ. ಅಣ್ಣಾಮಲೈ ಆಡಿದ ಈ ಮಾತುಗಳನ್ನು ಪ್ರಾಯೋಜಿಸಿದವರು ನಾಗಪುರದವರೋ ಅಥವಾ ಬಿಜೆಪಿ ಹೈಕಮಾಂಡೋ?ʼʼ ಎಂದು ರಾಜ್ಯ ಕಾಂಗ್ರೆಸ್‌ ಘಟಕ ಪ್ರಶ್ನೆ ಮಾಡಿದೆ.

ಸಂದರ್ಶನವೊಂದರಲ್ಲಿ ಅಣ್ಣಾಮಲೈ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಕೆ ಮಾಡಿ ಮಾತನಾಡಿರುವ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡು ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, ʻʻಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿದ ಬಿಜೆಪಿಯ ಅಣ್ಣಾಮಲೈ ಅವರು ಕನ್ನಡಿಗರ ಮೇಲೆ ಬಿಜೆಪಿಗಿರುವ ಅಸಹನೆ, ದ್ವೇಷ, ತಾತ್ಸಾರವನ್ನು ಅನಾವರಣಗೊಳಿಸಿದ್ದಾರೆʼʼ ಎಂದಿದೆ.

ʻʻಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕನ್ನಡಿಗರನ್ನು ಅವಮಾನಿಸಲು ಟೊಂಕ ಕಟ್ಟಿ ನಿಂತಿರುವಂತಿದೆ, ಅಣ್ಣಾಮಲೈ ಅವರು ಕರ್ನಾಟಕದ ಅನ್ನ ತಿಂದು ಬದುಕಿದ್ದನ್ನು ಮರೆತು ಈಗ ಕರ್ನಾಟಕವನ್ನೇ ಪಾಕಿಸ್ತಾನ ಎನ್ನುವಷ್ಟರ ಮಟ್ಟಿಗೆ ದುರಹಕಾರ ಬೆಳೆಸಿಕೊಂಡಿದ್ದಾರೆ, ಅಣ್ಣಾಮಲೈ ಆಡಿದ ಈ ಮಾತುಗಳನ್ನು ಪ್ರಾಯೋಜಿಸಿದವರು ನಾಗಪುರದವರೋ ಅಥವಾ ಬಿಜೆಪಿ ಹೈಕಮಾಂಡೋ?ʼʼ ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.

ʻʻಕೇಂದ್ರ ಸರ್ಕಾರದ ಮುಂದೆ ಕನ್ನಡಿಗರು ಭಿಕ್ಷೆ ಕೇಳುತ್ತಿಲ್ಲ, ತಮ್ಮ ಬೆವರಿನ ದುಡಿಮೆಯ ಹಕ್ಕನ್ನು ಮರಳಿ ಕೇಳುತ್ತಿದ್ದಾರೆ, ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ಎನ್ನುವ ಸಾಮಾನ್ಯ ಜ್ಞಾನ ಬಿಜೆಪಿಗಿರಲಿʼʼ ಎಂದು ಕಿಡಿಕಾರಿದೆ.

ʻʻಕನ್ನಡಿಗರನ್ನು ಅವಮಾನಿಸುವ ಬಿಜೆಪಿಯ ಧೋರಣೆಗೆ ತಕ್ಕ ಪಾಠ ಕಲಿಸಲು ಕನ್ನಡಿಗರು ಸಜ್ಜಾಗಿದ್ದಾರೆʼʼ ಎಂದು ಕಾಂಗ್ರೆಸ್‌ ಅಣ್ಣಾಮಲೈ ಅವರಿಗೆ ತಿರುಗೇಟು ನೀಡಿದೆ.‌

ಕರ್ನಾಟಕ ಅವಮಾನಿಸುವುದು ಬಿಜೆಪಿಗೆ ಚಟವಾಗಿದೆ: ಪ್ರಿಯಾಂಕ್‌ ಖರ್ಗೆ

ಇದೇ ವಿಚಾರವಾಗಿ ಸಚಿವ ಪ್ರಿಯಾಂಕ್‌ ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಕರ್ನಾಟಕ ಪಾಕಿಸ್ತಾನದ ರೀತಿಯಂತೆ. ಬಿಜೆಪಿ ಹಾಗೂ ಅದರ ಮಿತ್ರರು ಕನ್ನಡಿಗರಿಗೆ ಇನ್ನೆಷ್ಟು ಅವಮಾನ ಮಾಡಲು ಯೋಜಿಸಿದ್ದಾರೆ?" ಎಂದು ತಮಿಳುನಾಡು ಬಿಜೆಪಿ ಮುಖಂಡ ಅಣ್ಣಾ ಮಲೈ ವಿರುದ್ಧ ಹರಿಹಾಯ್ದಿದ್ದಾರೆ.

ʻʻಕರ್ನಾಟಕದ ಮಹಿಳೆಯರನ್ನು ದಾರಿ ತಪ್ಪಿದವರು ಎಂದಾಯ್ತು, ಕನ್ನಡಿಗರನ್ನು ಕುಡುಕರು ಎಂದಾಯ್ತು, ಈಗ ಕನ್ನಡಿಗರು ಪಾಕಿಸ್ತಾನಿಗಳಂತೆ. ಕನ್ನಡಿಗರು ಹಾಗೂ ಕರ್ನಾಟಕವನ್ನು ಅವಮಾನಿಸುವುದು ಬಿಜೆಪಿಗೆ ಸುಲಭದ ಚಟವಾಗಿದೆʼʼ ಕಿಡಿಕಾರಿದ್ದಾರೆ.

ʻʻಬಿಜೆಪಿಯ ಅಣ್ಣಾಮಲೈ ಅವರು ಕರ್ನಾಟಕವನ್ನು ಪಾಕಿಸ್ತಾನಕ್ಕೆ ಹೋಲಿಸಿ ಘೋರ ಅವಮಾನ ಮಾಡಿದ್ದಾರೆ, ಅಣ್ಣಾಮಲೈ ತಮ್ಮ ವೃತ್ತಿ ಬದುಕನ್ನು ರೂಪಿಸಿಕೊಂಡಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ? ಅನ್ನ ತಿಂದು, ನೀರು ಕುಡಿದು, ಸಂಬಳ ಪಡೆದು ಬದುಕಿದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾ? ಈ ಅಣ್ಣಾಮಲೈ ತನ್ನ ಬದುಕಿನಲ್ಲಿ ಐಡೆಂಟಿಟಿ ಪಡೆದದ್ದು ಕರ್ನಾಟಕದಲ್ಲಾ, ಪಾಕಿಸ್ತಾನದಲ್ಲಾಎಂದು ರಾಜ್ಯ ಬಿಜೆಪಿ ನಾಯಕರು ಉತ್ತರಿಸಬೇಕುʼʼ ಎಂದು ಆಗ್ರಹಿಸಿದ್ದಾರೆ.

ʻʻಕನ್ನಡಿಗರು ಬೆವರು ಸುರಿಸಿ ಕಟ್ಟಿದ ತೆರಿಗೆಯ ಹಕ್ಕನ್ನು ಕೇಂದ್ರದಿಂದ ಕೇಳುತ್ತಿದ್ದಾರೆಯೇ ಹೊರತು ಭಿಕ್ಷೆಯನ್ನಲ್ಲ, ಕರ್ನಾಟಕ ತೆರಿಗೆ ಸಂಗ್ರಹದಲ್ಲಿ 2ನೇ ಅತಿ ದೊಡ್ಡ ರಾಜ್ಯ. ಕನ್ನಡಿಗರ ಬೆವರಿನ ಹಣದಲ್ಲಿ ಕೇಂದ್ರ ಸರ್ಕಾರ ನಡೆಯುತ್ತಿದೆಯೇ ಹೊರತು; ಒಕ್ಕೂಟ ಸರ್ಕಾರದ ಭಿಕ್ಷೆಯಲ್ಲಿ ಕನ್ನಡಿಗರು ಬದುಕುತ್ತಿಲ್ಲ. ತಮ್ಮ ಹಕ್ಕನ್ನು ಕೇಳುವ ಕನ್ನಡಿಗರನ್ನು ಪಾಕಿಸ್ತಾನಕ್ಕೆ ಹೋಲಿಸುವ ಬಿಜೆಪಿಯನ್ನು ಕನ್ನಡಿಗರು ತಿರಸ್ಕರಿಸುವುದು ನಿಶ್ಚಿತ, ಇಲ್ಲಿ ತಿರಸ್ಕಾರಗೊಂಡವರು ತಮ್ಮ ಪ್ರೀತಿಯ ಪಾಕಿಸ್ತಾನಕ್ಕೆ ಹೋಗಿ ರಾಜಕಾರಣ ಮಾಡಲಿʼʼ ಎಂದಿದ್ದಾರೆ.

Read More
Next Story