ಲೋಕಸಭೆಯಲ್ಲಿ ಇಂದಿನಿಂದ ‘ವಂದೇ ಮಾತರಂ’ 150ನೇ ವರ್ಷಾಚರಣೆ ಚರ್ಚೆ: ಪ್ರಧಾನಿ ಮೋದಿ ಚಾಲನೆ
x

ಲೋಕಸಭೆಯಲ್ಲಿ ಇಂದಿನಿಂದ ‘ವಂದೇ ಮಾತರಂ’ 150ನೇ ವರ್ಷಾಚರಣೆ ಚರ್ಚೆ: ಪ್ರಧಾನಿ ಮೋದಿ ಚಾಲನೆ

ಐತಿಹಾಸಿಕ ಕವಿತೆಯ ವರ್ಷಪೂರ್ತಿ ಆಚರಣೆಯ ಭಾಗವಾಗಿ, ಲೋಕಸಭೆಯಲ್ಲಿ ‘ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಮೇಲಿನ ಚರ್ಚೆ’ ಎಂಬ ಶೀರ್ಷಿಕೆಯಡಿ ಕಲಾಪ ನಡೆಯಲಿದೆ.


Click the Play button to hear this message in audio format

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದ ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸಂಸತ್ತಿನ ಲೋಕಸಭೆಯಲ್ಲಿ ಇಂದಿನಿಂದ (ಸೋಮವಾರ) ಐತಿಹಾಸಿಕ ಚರ್ಚೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಚರ್ಚೆಗೆ ಚಾಲನೆ ನೀಡಲಿದ್ದು, ಆಡಳಿತ ಮತ್ತು ವಿರೋಧ ಪಕ್ಷಗಳ ಪ್ರಮುಖ ನಾಯಕರು ಪಾಲ್ಗೊಳ್ಳಲಿದ್ದಾರೆ.

ಬಂಕಿಮ್ ಚಂದ್ರ ಚಟರ್ಜಿ ಅವರು ರಚಿಸಿದ ಮತ್ತು ಜದುನಾಥ್ ಭಟ್ಟಾಚಾರ್ಯ ಅವರು ರಾಗ ಸಂಯೋಜಿಸಿದ ಈ ಐತಿಹಾಸಿಕ ಕವಿತೆಯ ವರ್ಷಪೂರ್ತಿ ಆಚರಣೆಯ ಭಾಗವಾಗಿ, ಲೋಕಸಭೆಯಲ್ಲಿ ‘ವಂದೇ ಮಾತರಂ ರಾಷ್ಟ್ರೀಯ ಗೀತೆಯ 150ನೇ ವಾರ್ಷಿಕೋತ್ಸವದ ಮೇಲಿನ ಚರ್ಚೆ’ ಎಂಬ ಶೀರ್ಷಿಕೆಯಡಿ ಕಲಾಪ ನಡೆಯಲಿದೆ. ಇದಕ್ಕಾಗಿ ಬರೋಬ್ಬರಿ 10 ಗಂಟೆಗಳ ಕಾಲಾವಕಾಶ ಮೀಸಲಿಡಲಾಗಿದೆ. ಈ ಚರ್ಚೆಯು ರಾಷ್ಟ್ರೀಯ ಗೀತೆಯ ಕುರಿತಾದ "ಹಲವು ಪ್ರಮುಖ ಮತ್ತು ಅಜ್ಞಾತ ಸಂಗತಿಗಳನ್ನು" ಅನಾವರಣಗೊಳಿಸುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾರ್ಯಾರು ಮಾತನಾಡಲಿದ್ದಾರೆ?

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಚರ್ಚೆಯನ್ನು ಆರಂಭಿಸಿದರೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಎರಡನೇ ಭಾಷಣಕಾರರಾಗಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಪಕ್ಷದ ಪರವಾಗಿ ಲೋಕಸಭೆಯ ಉಪನಾಯಕ ಗೌರವ್ ಗೊಗೊಯ್ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಪ್ರಮುಖವಾಗಿ ಮಾತನಾಡಲಿದ್ದಾರೆ. ಇವರಲ್ಲದೆ ದೀಪೇಂದರ್ ಹೂಡಾ, ಬಿಮೋಲ್ ಅಕೋಯಿಜಾಮ್, ಪ್ರಣಿತಿ ಶಿಂಧೆ ಸೇರಿದಂತೆ ಹಲವು ಯುವ ನಾಯಕರು ಕಾಂಗ್ರೆಸ್ ಪರವಾಗಿ ಧ್ವನಿಗೂಡಿಸಲಿದ್ದಾರೆ.

ರಾಜ್ಯಸಭೆಯಲ್ಲಿ ಅಮಿತ್ ಶಾ ನೇತೃತ್ವ

ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಮಂಗಳವಾರದಿಂದ (ಡಿ.9) ಚರ್ಚೆ ಆರಂಭವಾಗಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ. ನಂತರ ಸದನದ ನಾಯಕ ಜೆ.ಪಿ.ನಡ್ಡಾ ಮಾತನಾಡಲಿದ್ದು, ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಕ್ಷಗಳ ಪರವಾಗಿ ಮಾತನಾಡಲಿದ್ದಾರೆ.

ಚುನಾವಣಾ ಸುಧಾರಣೆಗಳ ಬಗ್ಗೆಯೂ ಚರ್ಚೆ

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಸೇರಿದಂತೆ ಚುನಾವಣಾ ಸುಧಾರಣೆಗಳ ಕುರಿತು ಮಂಗಳವಾರ ಮತ್ತು ಬುಧವಾರ ಲೋಕಸಭೆಯಲ್ಲಿ ಪ್ರತ್ಯೇಕ ಚರ್ಚೆ ನಡೆಯಲಿದೆ. ಈ ವಿಷಯದ ಕುರಿತು ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಪಕ್ಷದ ನಿಲುವನ್ನು ಮಂಡಿಸಲಿದ್ದಾರೆ. ಡಿಸೆಂಬರ್ 1ರಂದು ಆರಂಭವಾದ ಚಳಿಗಾಲದ ಅಧಿವೇಶನವು ಮೊದಲ ಎರಡು ದಿನಗಳ ಕಾಲ ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ತೀವ್ರ ಗೊಂದಲಕ್ಕೆ ಸಾಕ್ಷಿಯಾಗಿತ್ತು. ಈಗ ಮಹತ್ವದ ಚರ್ಚೆಗಳು ನಡೆಯುತ್ತಿರುವುದು ಕಲಾಪ ಸುಗಮವಾಗಿ ಸಾಗುವ ಮುನ್ಸೂಚನೆ ನೀಡಿದೆ.

Read More
Next Story