
ಜಾರ್ಖಂಡ್‌ನಲ್ಲಿ ಮದುವೆ ಬಸ್ ಪಲ್ಟಿ: 9 ಸಾವು, 80ಕ್ಕೂ ಹೆಚ್ಚು ಮಂದಿಗೆ ಗಾಯ
ಡಿದಾದ ತಿರುವುಗಳಿಂದ ಕೂಡಿದ ಒರ್ಸಾ ಬಂಗ್ಲಾಧರಾ ಕಣಿವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಸ್ಥಳದಲ್ಲೇ ಐವರು ಮೃತಪಟ್ಟಿದ್ದು ಅವರಲ್ಲಿ ನಾಲ್ವರು ಮಹಿಳೆಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್‌ನ ಲಾತೇಹರ್ ಜಿಲ್ಲೆಯಲ್ಲಿ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ, ಐವರು ಮಹಿಳೆಯರು ಸೇರಿದಂತೆ ಕನಿಷ್ಠ ಒಂಬತ್ತು ಜನರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 80ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಭಾನುವಾರ (ಜ.18) ಲಾತೇಹರ್ ಜಿಲ್ಲೆಯ ಮಹುದಂಡ್ ಪೊಲೀಸ್ ಠಾಣಾ ವ್ಯಾಪ್ತಿಯ ಒರ್ಸಾ ಬಂಗ್ಲಾಧರಾ ಕಣಿವೆಯಲ್ಲಿ ಈ ಘೋರ ದುರಂತ ಸಂಭವಿಸಿದೆ.
ಛತ್ತೀಸ್‌ಗಢದ ಬಲರಾಮ್‌ಪುರ ಜಿಲ್ಲೆಯಿಂದ ಜಾರ್ಖಂಡ್‌ನ ಲಾತೇಹರ್‌ಗೆ ಮದುವೆ ದಿಬ್ಬಣದ ಬಸ್ ತೆರಳುತ್ತಿತ್ತು. ಕಡಿದಾದ ತಿರುವುಗಳಿಂದ ಕೂಡಿದ ಒರ್ಸಾ ಬಂಗ್ಲಾಧರಾ ಕಣಿವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದು, ಅವರಲ್ಲಿ ನಾಲ್ವರು ಮಹಿಳೆಯರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ರೇಷಂತಿ ದೇವಿ (35), ಪ್ರೇಮಾ ದೇವಿ (37), ಸೀತಾ ದೇವಿ (45), ಸೋನಮತಿ ದೇವಿ (55), ಸುಖ್ನಾ ಭುಯಾನ್ (40) ಮತ್ತು ವಿಜಯ್ ಭುಯಾನ್ ಎಂದು ಗುರುತಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟ ಓರ್ವ ಮಹಿಳೆಯ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ.
ರಕ್ಷಣಾ ಕಾರ್ಯಾಚರಣೆ
ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದ್ದು, ಲಾತೇಹರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಇಬ್ಬರು ಮತ್ತು ಗುಮ್ಲಾ ಸದರ್ ಆಸ್ಪತ್ರೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 32 ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ಗೆ (RIMS) ರವಾನಿಸಲಾಗಿದೆ ಎಂದು ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ವಿಪಿನ್ ಕುಮಾರ್ ದುಬೆ ತಿಳಿಸಿದ್ದಾರೆ.
ಬ್ರೇಕ್ ವೈಫಲ್ಯ ಕಾರಣ?
ಸುಮಾರು 90 ಪ್ರಯಾಣಿಕರಿದ್ದ ಬಸ್‌ನ ಬ್ರೇಕ್ ಫೇಲ್ ಆಗಿದ್ದೇ ದುರಂತಕ್ಕೆ ಕಾರಣ ಎಂದು ಚಾಲಕ ವಿಕಾಸ್ ಪಾಠಕ್ ಹೇಳಿಕೆ ನೀಡಿದ್ದಾರೆ. "ಬಸ್‌ನ ಬ್ರೇಕ್‌ಗಳು ಕೆಲಸ ಮಾಡಲಿಲ್ಲ. ಹ್ಯಾಂಡ್‌ಬ್ರೇಕ್ ಬಳಸಿ ಮತ್ತು ಎಂಜಿನ್ ಆಫ್ ಮಾಡಿ ವಾಹನ ನಿಲ್ಲಿಸಲು ಪ್ರಯತ್ನಿಸಿದರೂ ನಿಯಂತ್ರಣ ಸಿಗದೆ ಬಸ್ ಪಲ್ಟಿಯಾಯಿತು" ಎಂದು ಅವರು ತಿಳಿಸಿದ್ದಾರೆ.
ನೆರವಿಗೆ ಮುಖ್ಯಮಂತ್ರಿ ಸೂಚನೆ
ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡುವ ಮೂಲಕ ಘಟನೆಯ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಲಾತೇಹರ್ ಉಪ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

