ರೈಲು ದುರಂತ: ಎರಡು ಹೈಸ್ಪೀಡ್ ರೈಲುಗಳ ನಡುವೆ ಭೀಕರ ಡಿಕ್ಕಿ, 21 ಸಾವು!
x
ಸ್ಪೇನ್‌ನಲ್ಲಿ ಭೀಕರ ರೈಲು ದುರಂತ

ರೈಲು ದುರಂತ: ಎರಡು ಹೈಸ್ಪೀಡ್ ರೈಲುಗಳ ನಡುವೆ ಭೀಕರ ಡಿಕ್ಕಿ, 21 ಸಾವು!

ಸ್ಪೇನ್‌ನ ಕೋರ್ಡೋಬಾ ಬಳಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 21 ಜನರು ಸಾವನ್ನಪ್ಪಿದ್ದಾರೆ.


ದಕ್ಷಿಣ ಸ್ಪೇನ್‌ನಲ್ಲಿ ಭಾನುವಾರ ಸಂಜೆ ಎರಡು ಹೈಸ್ಪೀಡ್ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ ಮತ್ತು 73ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಪೇನ್ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ತಿಳಿಸಿದ್ದಾರೆ.

ಅಪಘಾತ ನಡೆದದ್ದು ಹೇಗೆ?

ಸ್ಥಳೀಯ ಕಾಲಮಾನ ಸಂಜೆ 7:45ರ ಸುಮಾರಿಗೆ ಮಲಗಾದಿಂದ ಮಾಡ್ರಿಡ್‌ಗೆ ಸುಮಾರು 300 ಪ್ರಯಾಣಿಕರೊಂದಿಗೆ ಸಂಚರಿಸುತ್ತಿದ್ದ ರೈಲು ಕೋರ್ಡೋಬಾ ಎಂಬಲ್ಲಿ ಹಳಿ ತಪ್ಪಿದೆ. ಈ ವೇಳೆ ರೈಲಿನ ಹಿಂಭಾಗದ ಬೋಗಿಗಳು ಪಕ್ಕದ ಹಳಿಗೆ ಜಿಗಿದು, ಎದುರಿನಿಂದ ಬರುತ್ತಿದ್ದ ಮಾಡ್ರಿಡ್-ಹ್ಯುಯೆಲ್ವಾ ರೈಲಿಗೆ (ಸುಮಾರು 200 ಪ್ರಯಾಣಿಕರಿದ್ದ ರೈಲು) ಜೋರಾಗಿ ಡಿಕ್ಕಿ ಹೊಡೆದಿದೆ.

ಸಾವಿನ ಸಂಖ್ಯೆ

ಇದುವರೆಗೆ 21 ಸಾವುಗಳು ದೃಢಪಟ್ಟಿವೆ. ಅವಶೇಷಗಳ ಅಡಿ ಇನ್ನೂ ಹೆಚ್ಚಿನ ಮಂದಿ ಸಿಲುಕಿರುವ ಸಾಧ್ಯತೆ ಇರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ. 73 ಗಾಯಾಳುಗಳನ್ನು ಸಮೀಪದ ಆರು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರಣ ನಿಗೂಢ

ಅಪಘಾತ ಸಂಭವಿಸಿದ ಹಳಿಯನ್ನು ಕಳೆದ ಮೇ ತಿಂಗಳಷ್ಟೇ ನವೀಕರಿಸಲಾಗಿತ್ತು. ಹಳಿ ಮತ್ತು ರೈಲು ಎರಡೂ ಸುಸ್ಥಿತಿಯಲ್ಲಿದ್ದರೂ ಅಪಘಾತ ಸಂಭವಿಸಿರುವುದು "ವಿಚಿತ್ರ" ಎಂದು ಸಾರಿಗೆ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ತನಿಖೆ ಪೂರ್ಣಗೊಳ್ಳಲು ಸುಮಾರು ಒಂದು ತಿಂಗಳು ಬೇಕಾಗಬಹುದು ಎನ್ನಲಾಗಿದೆ. ಹಳಿ ತಪ್ಪಿದ ರೈಲು ಖಾಸಗಿ ಕಂಪನಿಯಾದ 'ಇರಿಯೊ' (Iryo) ಗೆ ಸೇರಿದ್ದಾಗಿದ್ದರೆ, ಡಿಕ್ಕಿಗೊಳಗಾದ ಮತ್ತೊಂದು ರೈಲು ಸ್ಪೇನ್‌ನ ಸಾರ್ವಜನಿಕ ರೈಲ್ವೆ ಕಂಪನಿಯಾದ 'ರೆನ್ಫೆ' (Renfe) ಗೆ ಸೇರಿದ್ದಾಗಿದೆ.

ರಕ್ಷಣಾ ಕಾರ್ಯಾಚರಣೆ

ಅಪಘಾತ ಸಂಭವಿಸಿದ ಪ್ರದೇಶವು ತಲುಪಲು ಕಷ್ಟಕರವಾದ ಜಾಗವಾಗಿದ್ದು, ದಟ್ಟವಾದ ಕತ್ತಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಸ್ಪೇನ್‌ನ ಮಿಲಿಟರಿ ತುರ್ತು ಪರಿಹಾರ ಘಟಕಗಳು ಮತ್ತು ರೆಡ್‌ಕ್ರಾಸ್ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿವೆ.

ರೈಲಿನಲ್ಲಿದ್ದ ಪತ್ರಕರ್ತ ಸಾಲ್ವಡಾರ್ ಜಿಮೆನೆಜ್ ಮಾತನಾಡಿ, "ಒಂದು ಕ್ಷಣ ಭೂಕಂಪ ಆದಂತಾಯಿತು, ಆಗಲೇ ರೈಲು ಹಳಿ ತಪ್ಪಿರುವುದು ನಮಗೆ ತಿಳಿಯಿತು" ಎಂದು ಘಟನೆಯ ಭೀಕರತೆಯನ್ನು ವಿವರಿಸಿದ್ದಾರೆ. ಪ್ರಯಾಣಿಕರು ಎಮರ್ಜೆನ್ಸಿ ಹ್ಯಾಮರ್‌ಗಳ ಮೂಲಕ ಕಿಟಕಿಗಳನ್ನು ಒಡೆದು ಹೊರಬಂದಿದ್ದಾರೆ. ಸ್ಥಳೀಯರು ಸಹ ಸಂತ್ರಸ್ತರಿಗೆ ಹೊದಿಕೆ ಮತ್ತು ನೀರು ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ದುರ್ಘಟನೆಗೆ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಸೇರಿದಂತೆ ಜಾಗತಿಕ ನಾಯಕರು ಸಂತಾಪ ಸೂಚಿಸಿದ್ದಾರೆ. ಸೋಮವಾರದಂದು ಮಾಡ್ರಿಡ್ ಮತ್ತು ಅಂಡಲೂಸಿಯಾ ನಡುವಿನ ಎಲ್ಲಾ ಹೈಸ್ಪೀಡ್ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ.

Read More
Next Story