
ಮೆಕ್ಸಿಕೋದಲ್ಲಿ ಭೀಕರ ರೈಲು ದುರಂತ: 13 ಪ್ರಯಾಣಿಕರ ಸಾವು, 98 ಮಂದಿಗೆ ಗಾಯ
ಮೆಕ್ಸಿಕೋದ ಇಂಟರ್ ಓಷಿಯಾನಿಕ್ ರೈಲು ಅಪಘಾತಕ್ಕೀಡಾಗಿದ್ದು, 13 ಪ್ರಯಾಣಿಕರು ಮೃತಪಟ್ಟಿದ್ದಾರೆ. ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ಗಾಯಾಳುಗಳ ನೆರವಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪೆಸಿಫಿಕ್ ಮಹಾಸಾಗರ ಮತ್ತು ಮೆಕ್ಸಿಕೋ ಕೊಲ್ಲಿಯನ್ನು ಸಂಪರ್ಕಿಸುವ ರೈಲ್ವೆ ಮಾರ್ಗದಲ್ಲಿ ರೈಲು ಹಳಿ ತಪ್ಪಿದ ಪರಿಣಾಮ 13 ಜನರು ಸಾವನ್ನಪ್ಪಿದ್ದು, 98 ಮಂದಿ ಗಾಯಗೊಂಡಿದ್ದಾರೆ. ಒಕ್ಸಾಕಾ ಮತ್ತು ವೆರಾಕ್ರಜ್ ರಾಜ್ಯಗಳನ್ನು ಸಂಪರ್ಕಿಸುವ ಇಂಟರ್ ಓಷಿಯಾನಿಕ್ ರೈಲು ಭಾನುವಾರ ನಿಜಾಂಡಾ ಪಟ್ಟಣದ ಸಮೀಪವಿರುವ ತಿರುವಿನಲ್ಲಿ ಚಲಿಸುತ್ತಿದ್ದಾಗ ಹಳಿ ತಪ್ಪಿದೆ. ಈ ಅಪಘಾತದಿಂದಾಗಿ ಈ ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.
ಈ ಬಗ್ಗೆ ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಮಾಹಿತಿ ನೀಡಿದ್ದಾರೆ. ಈ ಕುರಿತು 'X' (ಟ್ವಿಟರ್) ನಲ್ಲಿ ಪೋಸ್ಟ್, "ದುರದೃಷ್ಟವಶಾತ್ 13 ಜನರು ಮೃತಪಟ್ಟಿದ್ದಾರೆ ಎಂದು ನೌಕಾಪಡೆಯು ಮಾಹಿತಿ ನೀಡಿದೆ. ಗಾಯಗೊಂಡಿರುವ 98 ಜನರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ" ಎಂದು ತಿಳಿಸಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ನೌಕಾಪಡೆಯ ಕಾರ್ಯದರ್ಶಿ ಮತ್ತು ಮಾನವ ಹಕ್ಕುಗಳ ಸಚಿವಾಲಯದ ಅಧಿಕಾರಿಗಳಿಗೆ ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಅವರು ಸೂಚಿಸಿದ್ದಾರೆ.
ಪ್ರಯಾಣಿಕರ ಮಾಹಿತಿ
ಅಪಘಾತ ಸಂಭವಿಸಿದ ಸಮಯದಲ್ಲಿ ರೈಲಿನಲ್ಲಿ ಒಟ್ಟು 241 ಪ್ರಯಾಣಿಕರು ಮತ್ತು 9 ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಒಕ್ಸಾಕಾ ರಾಜ್ಯದ ಗವರ್ನರ್ ಸಲೋಮನ್ ಜಾರಾ ಅವರು ಸ್ಥಳಕ್ಕೆ ಧಾವಿಸಿರುವ ವಿವಿಧ ಸರ್ಕಾರಿ ಏಜೆನ್ಸಿಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ತಿಳಿಸಿದ್ದಾರೆ.
ಯೋಜನೆಯ ಹಿನ್ನೆಲೆ
ಈ ಇಂಟರ್ ಓಷಿಯಾನಿಕ್ ರೈಲು ಯೋಜನೆಯನ್ನು 2023ರಲ್ಲಿ ಅಂದಿನ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ ಲೋಪೆಜ್ ಒಬ್ರಡಾರ್ ಉದ್ಘಾಟಿಸಿದ್ದರು. ದಕ್ಷಿಣ ಮೆಕ್ಸಿಕೋದಲ್ಲಿ ರೈಲು ಪ್ರಯಾಣವನ್ನು ಉತ್ತೇಜಿಸಲು ಮತ್ತು ಅಟ್ಲಾಂಟಿಕ್ ಹಾಗೂ ಪೆಸಿಫಿಕ್ ಮಹಾಸಾಗರಗಳನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ವ್ಯಾಪಾರ ಕಾರಿಡಾರ್ ಅಭಿವೃದ್ಧಿಪಡಿಸುವ ಸರ್ಕಾರದ ಮಹತ್ವಾಕಾಂಕ್ಷೆಯ ಭಾಗವಾಗಿ ಈ ರೈಲು ಸೇವೆ ಆರಂಭಿಸಲಾಗಿತ್ತು. ಈ ರೈಲು ಸದ್ಯ ಸಾಲಿನಾ ಕ್ರೂಜ್ ಬಂದರಿನಿಂದ ಕೋಟ್ಜಾಕೋಲ್ಕೋಸ್‌ವರೆಗೆ ಸುಮಾರು 290 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ.

