ನಿತೀಶ್ ಕುಮಾರ್‌ಗೆ ಭಾರತ ರತ್ನ ಬೇಡ ಎಂದ ಜೆಡಿಯು; ಪ್ರಶಸ್ತಿ ಹಿಂದೆ ಇದ್ಯಾ ರಾಜಕೀಯ ನಿವೃತ್ತಿಯ ಸಂಚು?
x
ಬಿಹಾರ ಸಿಎಂ ನಿತೀಶ್‌ ಕುಮಾರ್‌

ನಿತೀಶ್ ಕುಮಾರ್‌ಗೆ 'ಭಾರತ ರತ್ನ' ಬೇಡ ಎಂದ ಜೆಡಿಯು; ಪ್ರಶಸ್ತಿ ಹಿಂದೆ ಇದ್ಯಾ ರಾಜಕೀಯ ನಿವೃತ್ತಿಯ ಸಂಚು?

ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಭಾರತ ರತ್ನ ನೀಡುವಂತೆ ಕೇಳಿದ ಕೆ.ಸಿ. ತ್ಯಾಗಿ ಬೇಡಿಕೆಯಿಂದ ಜೆಡಿಯು ದೂರ ಸರಿದಿದೆ.


ಸಾಮಾನ್ಯವಾಗಿ ಭಾರತ ರತ್ನ ಪ್ರಶಸ್ತಿಯನ್ನು ಸಾಧಕರಿಗೆ ಮರಣೋತ್ತರವಾಗಿ ಅಥವಾ ಅವರು ಸಕ್ರಿಯ ಕ್ಷೇತ್ರದಿಂದ ನಿವೃತ್ತರಾದ ಮೇಲೆ ನೀಡಲಾಗುತ್ತದೆ. ಬಿಹಾರ ಸಿಎಂ ನಿತೀಶ್ ಕುಮಾರ್ ಅವರಿಗೆ ಈ ಗೌರವ ನೀಡಬೇಕು ಎಂಬ ಕೂಗು ಕೇಳಿಬರುತ್ತಿದ್ದಂತೆ, ಜೆಡಿಯು ಪಾಳಯದಲ್ಲಿ ಆತಂಕ ಶುರುವಾಗಿದೆ. ಇದು ನಿತೀಶ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿ, ರಾಜಕೀಯವಾಗಿ ಮೂಲೆಗುಂಪು ಮಾಡಲು ಹೆಣೆದಿರುವ 'ಬಿಜೆಪಿಯ ರಣತಂತ್ರ' ಎಂದು ಜೆಡಿಯು ನಾಯಕರು ಆತಂಕ ವ್ಯಕ್ತಪಡಿಸಿದ್ದಾರೆ.

ಕೆ.ಸಿ. ತ್ಯಾಗಿ ಬೇಡಿಕೆ ಮತ್ತು ಪಕ್ಷದ ಅಂತರ

ಕಳೆದ ವಾರ ಜೆಡಿಯು ಹಿರಿಯ ನಾಯಕ ಕೆ.ಸಿ. ತ್ಯಾಗಿ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ನಿತೀಶ್ ಕುಮಾರ್ ಅವರನ್ನು ಸಮಾಜವಾದಿ ಚಳವಳಿಯ 'ಅನ್ಮೋಲ್ ರತ್ನ' (ಅಮೂಲ್ಯ ರತ್ನ) ಎಂದು ಬಣ್ಣಿಸಿ ಭಾರತ ರತ್ನ ನೀಡುವಂತೆ ಕೋರಿದ್ದರು. ಆದರೆ, ಜೆಡಿಯು ತಕ್ಷಣವೇ ಈ ಹೇಳಿಕೆಯಿಂದ ದೂರ ಸರಿದು, ಇದು ಅವರ "ವೈಯಕ್ತಿಕ ಅಭಿಪ್ರಾಯ" ಎಂದು ಸ್ಪಷ್ಟಪಡಿಸಿತು. ತ್ಯಾಗಿ ಅವರನ್ನು ಪಕ್ಷದಲ್ಲಿ ಈಗ ಒಂಟಿಯಾಗಿಸಲಾಗಿದೆ.

'ಭಾರತ ರತ್ನ' ಎಂದರೆ ನಿವೃತ್ತಿ ಎಂದರ್ಥವೇ?

ಜೆಡಿಯು ನಾಯಕರ ಪ್ರಕಾರ, ನಿತೀಶ್ ಕುಮಾರ್ ಇಂದಿಗೂ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಪ್ರಶಸ್ತಿ ನೀಡುವುದು ಎಂದರೆ ಅವರನ್ನು ಗೌರವಯುತವಾಗಿ 'ಮಾರ್ಗದರ್ಶಕ ಮಂಡಳಿ'ಗೆ ಕಳುಹಿಸಿ, ಬಿಹಾರದ ಅಧಿಕಾರವನ್ನು ಸಂಪೂರ್ಣವಾಗಿ ಬಿಜೆಪಿ ವಹಿಸಿಕೊಳ್ಳುವುದು ಎಂದರ್ಥ.

"ನಿತೀಶ್ ಜಿ ಇನ್ನೂ ನಿವೃತ್ತರಾಗಿಲ್ಲ, ಅವರು ಸಕ್ರಿಯರಾಗಿದ್ದಾರೆ. ಪ್ರಶಸ್ತಿ ನೀಡುವ ಮೂಲಕ ಅವರನ್ನು ರಾಜಕೀಯವಾಗಿ ಸೈಡ್‌ಲೈನ್ ಮಾಡುವ ಪಿತೂರಿ ನಡೆಯುತ್ತಿದೆ," ಎಂದು ಜೆಡಿಯು ಮುಖಂಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಬಿಹಾರದಲ್ಲಿ ಬಿಜೆಪಿ ಮತ್ತು ಜೆಡಿಯು ನಡುವಿನ ಮೈತ್ರಿ ಅಸ್ಥಿರವಾಗಿದೆ. 20 ವರ್ಷಗಳ ನಿತೀಶ್ ಆಡಳಿತದಲ್ಲಿ ಮೊದಲ ಬಾರಿಗೆ ಬಿಜೆಪಿ 'ಗೃಹ ಇಲಾಖೆ' ಮತ್ತು 'ಸ್ಪೀಕರ್' ಸ್ಥಾನ ಎರಡನ್ನೂ ತನ್ನ ವಶಕ್ಕೆ ಪಡೆದಿದೆ. ಇದು ನಿತೀಶ್ ಕುಮಾರ್ ಅವರ ಹಿಡಿತ ಸಡಿಲವಾಗುತ್ತಿರುವುದರ ಸಂಕೇತವಾಗಿದೆ. ಜೆಡಿಯು ನಾಯಕರ ಭಯವೇನೆಂದರೆ, ಭಾರತ ರತ್ನ ಘೋಷಣೆಯಾದ ಕೂಡಲೇ "ದೊಡ್ಡ ನಾಯಕರು ಇನ್ನು ವಿಶ್ರಾಂತಿ ಪಡೆಯಲಿ" ಎಂಬ ನೆಪವೊಡ್ಡಿ ಬಿಜೆಪಿ ತನ್ನದೇ ಆದ ಮುಖ್ಯಮಂತ್ರಿಯನ್ನು ಕೂರಿಸಲು ಸಂಚು ರೂಪಿಸಿದೆ.

ಆರೋಗ್ಯದ ಬಗ್ಗೆ ಹಬ್ಬಿರುವ ವದಂತಿಗಳು

74 ವರ್ಷದ ನಿತೀಶ್ ಕುಮಾರ್ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆಯೂ ಬಿಹಾರದಲ್ಲಿ ಚರ್ಚೆಗಳು ನಡೆಯುತ್ತಿವೆ. ಕಳೆದ ಡಿಸೆಂಬರ್‌ನಲ್ಲಿ ಅಧಿಕೃತ ಕಾರ್ಯಕ್ರಮವೊಂದರಲ್ಲಿ ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ಎಳೆದ ಘಟನೆಯು ನಿತೀಶ್ ಅವರ ವರ್ತನೆಯ ಬಗ್ಗೆ ಟೀಕೆಗಳಿಗೆ ಗುರಿಯಾಗಿತ್ತು. ಅವರು ಆಡಳಿತ ನಡೆಸಲು ಅಶಕ್ತರಾಗಿದ್ದಾರೆ ಎಂಬ ಸುಳ್ಳು ಕಥೆಯನ್ನು ಹಬ್ಬಿಸಿ, ಭಾರತ ರತ್ನ ನೀಡಿ ಅವರನ್ನು ನಿವೃತ್ತರನ್ನಾಗಿ ಮಾಡುವುದು ಬಿಜೆಪಿಯ ಅಜೆಂಡಾ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

Read More
Next Story