
ವೈದ್ಯೆಯ ಹಿಜಾಬ್ ಎಳೆದ ನಿತೀಶ್ ಕುಮಾರ್! ವಿಡಿಯೋ ಫುಲ್ ವೈರಲ್
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯೊಬ್ಬರ ಹಿಜಾಬ್ ಅನ್ನು ಎಳೆದು ವಿವಾದಕ್ಕೀಡಾಗಿದ್ದಾರೆ.
ಕೆಲವು ತಿಂಗಳ ಹಿಂದೆ ವೇದಿಕೆ ಮೇಲೆ ರಾಷ್ಟ್ರಗೀತೆ ಹಾಡುತ್ತಿರುವಾಗ ವಿಚಿತ್ರವಾಗಿ ವರ್ತಿಸಿ ಸುದ್ದಿಯಾಗಿದ್ದ ಬಿಹಾರ ಸಿಎಂ ನಿತೀಶ್ ಕುಮಾರ್, ಇದೀಗ ಮತ್ತೊಂದು ಯಡವಟ್ಟು ಮಾಡಿಕೊಂಡು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ಹಸ್ತಾಂತರಿಸುವಾಗ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಹಿಳೆಯೊಬ್ಬರ ಹಿಜಾಬ್ ಅನ್ನು ಎಳೆದು ವಿವಾದಕ್ಕೀಡಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷಗಳು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಕೃತ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಡೆದಿದ್ದೇನು?
ಮಹಿಳೆಗೆ ನೇಮಕಾತಿ ಪತ್ರವನ್ನು ವಿತರಿಸುತ್ತಿದ್ದ ವೇಳೆ ಆಕೆ ಧರಿಸಿದ್ದ ಹಿಜಾಬ್ ಮೇಲೆ ನಿತೀಶ್ ಗಮನ ಹೋಗಿದೆ. ನಂತರ ಆಕೆಯ ಹೆಡ್ ಸ್ಕಾರ್ಫ್ ಕಡೆಗೆ ಸನ್ನೆ ಮಾಡಿದ್ದಾರೆ ಮೊದಲಿಗೆ ಅದನ್ನು ತೆಗೆಯುವಂತೆ ಆಕೆಗೆ ಸೂಚನೆ ಕೊಟ್ಟರು. ನಂತರ ಸ್ವತಃ ಎಳೆದು ಅದನ್ನು ತೆಗೆದಿದ್ದಾರೆ. ಈ ಘಟನೆ ಮುಖ್ಯಮಂತ್ರಿ ಸಚಿವಾಲಯದ 'ಸಂವಾದ್' ನಲ್ಲಿ ನಡೆದಿದ್ದು, ಅಲ್ಲಿ 1,000 ಕ್ಕೂ ಹೆಚ್ಚು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರಗಳನ್ನು ವಿತರಿಸಲಾಗಿತ್ತು.
ಮುಖದ ಮೇಲೆ ಹಿಜಾಬ್ ಧರಿಸಿ ಬಂದ ನುಸ್ರತ್ ಪರ್ವೀನ್ ಅವರ ಸರದಿ ಬಂದಾಗ, ನಿತೀಶ್ ಕುಮಾರ್ ಮುಖ ಗಂಟಿಕ್ಕಿ "ಇದು ಏನು?” ಜೋರಾಗಿಯೇ ಪ್ರಶ್ನಿಸಿ ಅದನ್ನು ಎಳೆದಿದ್ದಾರೆ. ಆದರೆ ಕುಮಾರ್ ಪಕ್ಕದಲ್ಲಿ ನಿಂತಿದ್ದ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರನ್ನು ಪ್ರಯತ್ನದಲ್ಲಿ ಅವರ ತೋಳನ್ನು ಎಳೆಯುತ್ತಿರುವುದು ಕಂಡುಬಂದಿದೆ.
ವಿಪಕ್ಷಗಳು ಕಿಡಿ
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಪ್ರತಿಪಕ್ಷಗಳು ನಿತೀಶ್ ವಿರುದ್ಧ ಕಿಡಿ ಕಾರಿವೆ. "ನಿತೀಶ್ ಜಿಗೆ ಏನಾಯಿತು? ಅವರ ಮಾನಸಿಕ ಸ್ಥಿತಿ ಈಗ ಸಂಪೂರ್ಣವಾಗಿ ದಯನೀಯ ಸ್ಥಿತಿಗೆ ತಲುಪಿದೆಯೇ ಅಥವಾ ನಿತೀಶ್ ಬಾಬು ಈಗ 100% ಸಂಘಿಯಾಗಿದ್ದಾರೆಯೇ?," ಎಂದು ಆರ್‌ಜೆಡಿ ಎಕ್ಸ್‌ನಲ್ಲಿ ಬರೆದಿದೆ.
ನಿತೀಶ್ ಕುಮಾರ್ ಅವರನ್ನು ಟೀಕಿಸಿದ ಕಾಂಗ್ರೆಸ್, ಎಕ್ಸ್‌ನಲ್ಲಿ ವಿಡಿಯೊವನ್ನು ಹಂಚಿಕೊಂಡು ಅವರ ರಾಜೀನಾಮೆಗೆ ಒತ್ತಾಯಿಸಿತು. "ಇದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. ಅವರ ನಾಚಿಕೆಯಿಲ್ಲ. ಒಬ್ಬ ವೈದ್ಯೆ ತಮ್ಮ ನೇಮಕಾತಿ ಪತ್ರವನ್ನು ಪಡೆಯಲು ಬಂದಾಗ, ನಿತೀಶ್ ಕುಮಾರ್ ಅವರ ಹಿಜಾಬ್ ಅನ್ನು ಎಳೆದರು. ಬಿಹಾರದಲ್ಲಿ ಅತ್ಯುನ್ನತ ಹುದ್ದೆಯನ್ನು ಹೊಂದಿರುವ ವ್ಯಕ್ತಿ ಬಹಿರಂಗವಾಗಿ ಇಂತಹ ಹೇಯ ಕೃತ್ಯಗಳನ್ನು ಮಾಡುತ್ತಿದ್ದಾರೆ. ರಾಜ್ಯದಲ್ಲಿ ಮಹಿಳೆಯರು ಎಷ್ಟು ಸುರಕ್ಷಿತವಾಗಿರುತ್ತಾರೆ ಎಂದು ಊಹಿಸಿ? ಈ ಹೇಯ ಕೃತ್ಯಕ್ಕಾಗಿ ನಿತೀಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಈ ಅಶ್ಲೀಲತೆ ಕ್ಷಮಿಸಲಾಗದು” ಎಂದಿದೆ.

