ಇಂಡಿಗೋ ಎಫೆಕ್ಟ್: ಪೈಲಟ್‌ಗಳ ವಿಶ್ರಾಂತಿ ನಿಯಮ ಹಿಂಪಡೆದ ಡಿಜಿಸಿಎ
x

ಇಂಡಿಗೋ ಎಫೆಕ್ಟ್: ಪೈಲಟ್‌ಗಳ ವಿಶ್ರಾಂತಿ ನಿಯಮ ಹಿಂಪಡೆದ ಡಿಜಿಸಿಎ

ಗುರುಗ್ರಾಮ ಮೂಲದ ಇಂಡಿಗೋ ಸಂಸ್ಥೆಯು ಈ ಅವ್ಯವಸ್ಥೆಗೆ 'ಅನಿರೀಕ್ಷಿತ ಕಾರ್ಯಾಚರಣೆಯ ಸವಾಲುಗಳು' ಕಾರಣ ಎಂದು ಸಮಜಾಯಿಷಿ ನೀಡಿದೆ


Click the Play button to hear this message in audio format
ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕಳೆದ ಕೆಲವು ದಿನಗಳಿಂದ ಉಂಟಾಗಿರುವ ಗೊಂದಲ ಮತ್ತು ಸಾವಿರಾರು ವಿಮಾನಗಳ ರದ್ದತಿಯ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಪೈಲಟ್‌ಗಳ ಆಯಾಸ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಗೆ ತರಲಾಗಿದ್ದ ವೀಕ್ಲಿ ರೋಸ್ಟರ್​ ನಾರ್ಮ್ಸ್​​ ಡಿಜಿಸಿಎ ಶುಕ್ರವಾರ (ಡಿಸೆಂಬರ್ 5) ಹಿಂಪಡೆದಿದೆ.

ಕಳೆದ ನಾಲ್ಕು ದಿನಗಳಲ್ಲಿ ಇಂಡಿಗೋ ಸಂಸ್ಥೆಯು ದೇಶಾದ್ಯಂತ ಸುಮಾರು 1,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಿದೆ. ಈ ಹಠಾತ್ ರದ್ದತಿಯಿಂದಾಗಿ ದೆಹಲಿ, ಬೆಂಗಳೂರು ಮತ್ತು ಹೈದರಾಬಾದ್‌ನಂತಹ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತೀವ್ರ ಅವ್ಯವಸ್ಥೆ ಉಂಟಾಗಿತ್ತು. ನೂರಾರು ವಿಮಾನಗಳ ನಿರ್ಗಮನ ಮತ್ತು ಆಗಮನ ರದ್ದಾದ ಪರಿಣಾಮ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಿಯಂತ್ರಕ ಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.

ಇಂಡಿಗೋ ನೀಡಿದ ಕಾರಣವೇನು?

ಗುರುಗ್ರಾಮ ಮೂಲದ ಇಂಡಿಗೋ ಸಂಸ್ಥೆಯು ಈ ಅವ್ಯವಸ್ಥೆಗೆ 'ಅನಿರೀಕ್ಷಿತ ಕಾರ್ಯಾಚರಣೆಯ ಸವಾಲುಗಳು' ಕಾರಣ ಎಂದು ಸಮಜಾಯಿಷಿ ನೀಡಿದೆ. ಮುಖ್ಯವಾಗಿ ಚಳಿಗಾಲದ ವೇಳಾಪಟ್ಟಿ ಬದಲಾವಣೆ, ವಿಮಾನ ನಿಲ್ದಾಣಗಳಲ್ಲಿನ ವಿಪರೀತ ದಟ್ಟಣೆ, ಪ್ರತಿಕೂಲ ಹವಾಮಾನ ಮತ್ತು ಸಣ್ಣಪುಟ್ಟ ತಾಂತ್ರಿಕ ದೋಷಗಳನ್ನು ಸಂಸ್ಥೆ ಉಲ್ಲೇಖಿಸಿದೆ.

ವಲಯದ ತಜ್ಞರು ಮತ್ತು ನಿಯಂತ್ರಕರ ಪ್ರಕಾರ, ಪೈಲಟ್‌ಗಳ ಆಯಾಸವನ್ನು ಕಡಿಮೆ ಮಾಡಲು ಜಾರಿಗೆ ತಂದಿದ್ದ ಹೊಸ 'ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ಸ್' ನಿಯಮಗಳೇ ಈ ಬಿಕ್ಕಟ್ಟಿಗೆ ನಿಜವಾದ ಕಾರಣ. ಹೊಸ ನಿಯಮದಂತೆ ಪೈಲಟ್‌ಗಳಿಗೆ ಹೆಚ್ಚಿನ ವಿಶ್ರಾಂತಿ ನೀಡಬೇಕಿದ್ದು, ಅದಕ್ಕೆ ತಕ್ಕಂತೆ ಸಿಬ್ಬಂದಿ ಲಭ್ಯವಿಲ್ಲದೆ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿದೆ ಎಂದು ವಿಶ್ಲೇಷಿಸಲಾಗಿದೆ.

ತಪ್ಪು ಒಪ್ಪಿಕೊಂಡ ಸಂಸ್ಥೆ: ಕುಸಿದ ಸಮಯಪಾಲನೆ

ಗುರುವಾರ ನಿಯಂತ್ರಕರ ಮುಂದೆ ಹಾಜರಾದ ಇಂಡಿಗೋ ಅಧಿಕಾರಿಗಳು, ಹೊಸ ನಿಯಮಗಳಿಗೆ ಹೊಂದಿಕೊಳ್ಳುವಲ್ಲಿ ತಮ್ಮ ಕಡೆಯಿಂದ ಆದ 'ತಪ್ಪು ಲೆಕ್ಕಾಚಾರ' ಮತ್ತು 'ಯೋಜನೆಯ ಕೊರತೆ'ಯನ್ನು ಒಪ್ಪಿಕೊಂಡಿದ್ದಾರೆ. ತಯಾರಿ ನಡೆಸಲು ಎರಡು ವರ್ಷಗಳ ಕಾಲಾವಕಾಶವಿದ್ದರೂ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಂಸ್ಥೆ ಎಡವಿದೆ.

ಈ ಗೊಂದಲಗಳಿಂದಾಗಿ, ಭಾರತದ ದೇಶೀಯ ವಿಮಾನಯಾನ ಮಾರುಕಟ್ಟೆಯಲ್ಲಿ ಶೇ.60ರಷ್ಟು ಪಾಲು ಹೊಂದಿರುವ ಇಂಡಿಗೋದ ಸಮಯಪಾಲನೆ (On-Time Performance - OTP) ಕೇವಲ ಶೇ.8.5ಕ್ಕೆ ಕುಸಿದಿದೆ. ಇದು ಸಂಸ್ಥೆಯ ಇತಿಹಾಸದಲ್ಲೇ ಅತ್ಯಂತ ಕನಿಷ್ಠ ಮಟ್ಟವಾಗಿದ್ದು, ಭಾರೀ ಮುಜುಗರಕ್ಕೀಡುಮಾಡಿದೆ.

ಬೃಹತ್ ಜಾಲದಲ್ಲಿ ಸಣ್ಣ ತಪ್ಪು

ಏರ್ ಇಂಡಿಯಾಕ್ಕಿಂತ ಸುಮಾರು ಎರಡು ಪಟ್ಟು ಹೆಚ್ಚು, ಅಂದರೆ ದಿನಕ್ಕೆ ಬರೋಬ್ಬರಿ 2,200ಕ್ಕೂ ಹೆಚ್ಚು ವಿಮಾನಗಳನ್ನು ಇಂಡಿಗೋ ಕಾರ್ಯಾಚರಣೆ ನಡೆಸುತ್ತದೆ. ಇಷ್ಟು ದೊಡ್ಡ ಜಾಲದಲ್ಲಿ ಸಣ್ಣ ಯೋಜನಾ ವೈಫಲ್ಯ ಸಂಭವಿಸಿದರೂ ಅದು ಹಿಮಪಾತದಂತೆ (Snowball effect) ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಕೇವಲ 48 ಗಂಟೆಗಳಲ್ಲಿ 600ಕ್ಕೂ ಹೆಚ್ಚು ವಿಮಾನಗಳು ರದ್ದಾಗಿದ್ದು, 20 ವರ್ಷಗಳ ಇತಿಹಾಸವಿರುವ ಈ ವಿಮಾನಯಾನ ಸಂಸ್ಥೆಗೆ ಇದೊಂದು ದೊಡ್ಡ ಆಘಾತವಾಗಿದೆ.

Read More
Next Story