
ಭಾರತೀಯ ನೌಕಾಪಡೆ
ಪರೀಕ್ಷೆಯಿಲ್ಲದೆ ಭಾರತೀಯ ನೌಕಾಪಡೆಯಲ್ಲಿ ಅಧಿಕಾರಿಯಾಗುವ ಅವಕಾಶ: ಜ.24ರಿಂದ ಅರ್ಜಿ ಸಲ್ಲಿಕೆ ಆರಂಭ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ.60 ಅಂಕಗಳೊಂದಿಗೆ ಬಿಎಸ್ಸಿ ಅಥವಾ ಬಿಟೆಕ್ ಪೂರ್ಣಗೊಳಿಸಿರಬೇಕು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಆಂಗ್ಲ ಭಾಷೆಯಲ್ಲಿ ಶೇ.60 ಅಂಕ ಪಡೆದಿರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಭಾರತೀಯ ನೌಕಾಪಡೆಗೆ ಸೇರಲು ಇಚ್ಛಿಸುವ ಪದವೀಧರರಿಗೆ ಇದೀಗ ಸುವರ್ಣ ಅವಕಾಶ ಒದಗಿಬಂದಿದ್ದು, ನೌಕಾಸೇನೆಯಲ್ಲಿ ಎಸ್‌ಎಸ್‌ಸಿ ಕಾರ್ಯನಿರ್ವಾಹಕ ಹಾಗೂ ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು ಜನವರಿ 24ರಿಂದ ಅರ್ಜಿ ಸಲ್ಲಿಸಬಹುದಾಗಿದೆ.
ಕೇರಳದ ಎಳಿಮಲದಲ್ಲಿರುವ ಭಾರತೀಯ ನೌಕಾ ಅಕಾಡೆಮಿ (INA) ನಲ್ಲಿ ಜನವರಿ 2027 (ST 27) ರಿಂದ ಪ್ರಾರಂಭವಾಗುವ ಕೋರ್ಸ್‌ಗಾಗಿ ಭಾರತೀಯ ನೌಕಾಪಡೆಯು ಎಸ್‌ಎಸ್‌ಸಿ ಅಧಿಕಾರಿ ನೇಮಕಾತಿ 2026 ಕ್ಕೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅವಿವಾಹಿತ ಪುರುಷರು ಮತ್ತು ಮಹಿಳೆಯರು ಶಾರ್ಟ್ ಸರ್ವಿಸ್ ಕಮಿಷನ್ (SSC) ಅಧಿಕಾರಿಗಳಾಗಿ ದೇಶಕ್ಕೆ ಸೇವೆ ಸಲ್ಲಿಸಲು ಇದೊಂದು ಉತ್ತಮ ಅವಕಾಶವಾಗಿದೆ.
ಯಾವ -ಯಾವ ವಿಭಾಗದಲ್ಲಿ ಖಾಲಿ ಹುದ್ದೆಗಳಿವೆ ?
ಕಾರ್ಯನಿರ್ವಾಹಕ ಶಾಖೆಯಲ್ಲಿ ಸಾಮಾನ್ಯ ಸೇವೆಗಳಿಗೆ 76, ಹೈಡ್ರೋ ಕೇಡರ್ 8, ಪೈಲಟ್ ವಿಭಾಗದಲ್ಲಿ 20, ನೌಕಾ ವಾಯು ಕಾರ್ಯಾಚರಣೆ ಅಧಿಕಾರಿ 18, ವಾಯು ಸಂಚಾರ ನಿಯಂತ್ರಕ (ATC) 10, ಲಾಜಿಸ್ಟಿಕ್ಸ್ 25, ಶಿಕ್ಷಣ ಶಾಖೆ 7 ಹುದ್ದೆಗಳಿವೆ.
ತಾಂತ್ರಿಕ ಶಾಖೆಯಲ್ಲಿ ಎಂಜಿನಿಯರಿಂಗ್ 42, ಎಲೆಕ್ಟ್ರಿಕಲ್ ಶಾಖೆ 38, ಸಬ್‌ಮೆರಿನ್ ಟೆಕ್ (ಎಂಜಿನಿಯರಿಂಗ್) 8, (ಪುರುಷರು ಮಾತ್ರ) ಹಾಗೂ ಸಬ್‌ಮೆರಿನ್ ಟೆಕ್ (ಎಲೆಕ್ಟ್ರಿಕಲ್) 8, (ಪುರುಷರು ಮಾತ್ರ) ಸೇರಿದಂತೆ ಒಟ್ಟು 260 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ.60 ಅಂಕಗಳೊಂದಿಗೆ ಬಿಎಸ್ಸಿ ಅಥವಾ ಬಿಟೆಕ್ ಪೂರ್ಣಗೊಳಿಸಿರಬೇಕು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯ ಆಂಗ್ಲ ಭಾಷೆಯಲ್ಲಿ ಶೇ.60 ಅಂಕ ಪಡೆದಿರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಲಾಜಿಸ್ಟಿಕ್ಸ್ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು, ಬಿಇ ಅಥವಾ ಬಿ.ಟೆಕ್ (ಪ್ರಥಮ ದರ್ಜೆ) ಅಥವಾ ಎಂಬಿಎ (ಪ್ರಥಮ ದರ್ಜೆ) ಅಥವಾ ಬಿಎಸ್‌ಸಿ, ಬಿಕಾಂ ಪದವಿಯನ್ನು ಪ್ರಥಮ ದರ್ಜೆಯೊಂದಿಗೆ ತೇರ್ಗಡೆಯಾಗಿರಬೇಕು.
ಗಣಿತ, ಭೌತಶಾಸ್ತ್ರ, ಕಾರ್ಯಾಚರಣಾ ಸಂಶೋಧನೆ, ಹವಾಮಾನಶಾಸ್ತ್ರ, ಸಾಗರಶಾಸ್ತ್ರ ಇತ್ಯಾದಿಗಳಲ್ಲಿ ಎಂಎಸ್ಸಿ ಅಥವಾ ಎಂಎ ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. ಮೆಕ್ಯಾನಿಕಲ್, ಸಿಎಸ್‌ಇ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಇತ್ಯಾದಿಗಳಲ್ಲಿ ಬಿಇ, ಬಿ.ಟೆಕ್, ಎಂ.ಟೆಕ್‌ನಲ್ಲಿ ಶೇ.60 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು.
ತಾಂತ್ರಿಕ ಶಾಖೆಯಲ್ಲಿ ಎಂಜಿನಿಯರಿಂಗ್, ಎಲೆಕ್ಟ್ರಿಕಲ್, ಸಬ್‌ಮೆರಿನ್ ಸಂಬಂಧಿತ ವಿಭಾಗಗಳಲ್ಲಿ ಮೆಕ್ಯಾನಿಕಲ್, ಮೆರೈನ್, ಆಟೋ, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ದೂರಸಂಪರ್ಕ, ಇನ್ಸ್ಟ್ರುಮೆಂಟೇಶನ್, ಇತ್ಯಾದಿ ವಿಷಯದಲ್ಲಿ ಕನಿಷ್ಠ ಶೇ.60 ಅಂಕಗಳೊಂದಿಗೆ ಬಿಇ ಅಥವಾ ಬಿಟೆಕ್ ಪೂರೈಸಿರಬೇಕು.
ವಯೋಮಿತಿ
ತಾಂತ್ರಿಕ ವಿಭಾಗದಲ್ಲಿನ ಜಲಾಂತರ್ಗಾಮಿಯಲ್ಲಿ ಕೆಲಸ ಮಾಡಲು ಇಚ್ಛಿಸುವವರು, 2002 ಜನವರಿ 2ರಿಂದ 2007 ಜುಲೈ 1ರೊಳಗೆ ಜನಿಸಿರಬೇಕು. ಪೈಲಟ್ ಹುದ್ದೆಗೆ ಜನವರಿ 2003 ರಿಂದ ಜನವರಿ 2008, ಶಿಕ್ಷಣ ವಿಭಾಗಕ್ಕೆ ಅರ್ಜಿ ಸಲ್ಲಿಸುವವರು ಜನವರಿ 2002 ರಿಂದ ಜನವರಿ 2006, ಲಾಜಿಸ್ಟಿಕ್ಸ್‌ಗೆ ಜನವರಿ 2002 ರಿಂದ ಜೂನ್ 2007 ಒಳಗೆ ಜನ್ಮ ಪಡೆದವರು ಅರ್ಜಿ ಸಲ್ಲಿಸಬಹುದು.
ಎಐ ಆಧಾರಿತ ಚಿತ್ರ
ವೇತನ ಮತ್ತು ಭತ್ಯೆ
ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 1.25ಲಕ್ಷ ರೂ. ವೇತನ ನಿಗದಿಪಡಿಸಲಾಗಿದ್ದು, ಡಿಎ, ಎಚ್‌ಆರ್‌ಎ, ಸಾರಿಗೆ ಭತ್ಯೆ, ಮತ್ತು ತಾಂತ್ರಿಕ, ಹಾರಾಟ, ಜಲಾಂತರ್ಗಾಮಿ ಭತ್ಯೆಗಳು. ಆಯ್ಕೆಯಾಗುವ ಅಭ್ಯರ್ಥಿಗಳು ಹಾಗೂ ಅವರಕುಟುಂಬಕ್ಕೆ ಉಚಿತ ವಿಶ್ವ ದರ್ಜೆಯ ವೈದ್ಯಕೀಯ ಆರೈಕೆ, ಸಿಎಸ್‌ಡಿ ಕ್ಯಾಂಟೀನ್ ಸೌಲಭ್ಯಗಳು, ಮೆಸ್ ಸದಸ್ಯತ್ವ, ಕ್ರೀಡಾ ಸೌಲಭ್ಯಗಳು, ಕೇಂದ್ರ ಸರ್ಕಾರ ನೀಡುವ ವಿವಿಧ ಭತ್ಯೆಗಳನ್ನು ಪಡೆಯಬಹುದಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಲು ಜನವರಿ 24ರಿಂದ ಫೆಬ್ರವರಿ 24 ರವರೆಗೆ ಅವಕಾಶ ಕಲ್ಪಿಸಲಾಗಿದೆ. ನೇಮಕಾತಿಯಲ್ಲಿನ ವಿವಿಧ ಕೇಡರ್‌ಗಳಲ್ಲಿ 260 ಖಾಲಿ ಹುದ್ದೆಗಳು ಖಾಲಿ ಇದ್ದು, ವಿಶೇಷವಾಗಿ ಜಲಾಂತರ್ಗಾಮಿಗಳಲ್ಲಿ ಕೇವಲ ಪುರುಷರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ ಹೇಗೆ ?
ಈ ಪ್ರವೇಶಕ್ಕೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಆಯ್ಕೆಯು ನಿಮ್ಮ ಪದವಿ ಅಂಕಗಳು ಮತ್ತು ವ್ಯಕ್ತಿತ್ವವನ್ನು ಆಧರಿಸಿದೆ. ಅರ್ಹತಾ ಪದವಿಯಲ್ಲಿ ಪಡೆದ ಸಾಮಾನ್ಯ ಅಂಕಗಳ ಆಧಾರದ ಮೇಲೆ ಅರ್ಜಿಗಳನ್ನು ಶಾರ್ಟ್‌ಲಿಸ್ಟ್ ಮಾಡುವ ಹಕ್ಕನ್ನು ನೌಕಾಪಡೆ ಕಾಯ್ದಿರಿಸಿದೆ. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಐದು ದಿನಗಳ ಎಸ್‌ಎಸ್‌ಬಿ ಸಂದರ್ಶನವನ್ನು (ಬುದ್ಧಿಮತ್ತೆ, ಮನೋವಿಜ್ಞಾನ, ಜಿಟಿಒ ಮತ್ತು ವೈಯಕ್ತಿಕ ಸಂದರ್ಶನ) ಎದುರಿಸಬೇಕಾಗುತ್ತದೆ. ಶಿಫಾರಸು ಮಾಡಿದ ಅಭ್ಯರ್ಥಿಗಳು ಕಟ್ಟುನಿಟ್ಟಾದ ವೈದ್ಯಕೀಯ ತಪಾಸಣೆಗೆ ಒಳಪಡಬೇಕು ಎಂದು ನೌಕಾಪಡೆ ತನ್ನ ಅಧಿಸೂಚನೆಯಲ್ಲಿ ತಿಳಿಸಿದೆ.

