ಕಂದಕಕ್ಕೆ ಬಿದ್ಧ ಸೇನಾ ವಾಹನ: 10 ಸೈನಿಕರು ಹುತಾತ್ಮ
x
ಕಂದಕಕ್ಕೆ ಬಿದ್ದ ಭಾರತೀಯ ಸೇನಾ ವಾಹನ

ಕಂದಕಕ್ಕೆ ಬಿದ್ಧ ಸೇನಾ ವಾಹನ: 10 ಸೈನಿಕರು ಹುತಾತ್ಮ

ಜಮ್ಮು-ಕಾಶ್ಮೀರದ ಡೋಡಾದಲ್ಲಿ 17 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ಸೇನೆಯ 'ಕ್ಯಾಸ್ಪರ್' ಬುಲೆಟ್‌ಪ್ರೂಫ್ ವಾಹನವೊಂದು ನಿಯಂತ್ರಣ ತಪ್ಪಿ ಸುಮಾರು 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ.


ಜಮ್ಮು-ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ದುರಂತ ಸಂಭವಿಸಿದೆ. 17 ಸೈನಿಕರನ್ನು ಹೊತ್ತೊಯ್ಯುತ್ತಿದ್ದ ಭಾರತೀಯ ಸೇನೆಯ 'ಕ್ಯಾಸ್ಪರ್' ಬುಲೆಟ್‌ಪ್ರೂಫ್ ವಾಹನವೊಂದು ನಿಯಂತ್ರಣ ತಪ್ಪಿ ಸುಮಾರು 200 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ. ಈ ಹೃದಯ ವಿದ್ರಾವಕ ದುರಂತದಲ್ಲಿ 10 ಸೈನಿಕರು ವೀರಮರಣ ಹೊಂದಿದ್ದು, ಉಳಿದ 7 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆಯ ವಿವರ

ಡೋಡಾದ ಭದ್ರವಾಹ್-ಚಂಬಾ ಅಂತರರಾಜ್ಯ ರಸ್ತೆಯ ಎಸ್‌ಕೆ ಪಯೆನ್ ಪ್ರದೇಶದ ಖನ್ನಿ ಟಾಪ್ ಬಳಿ ಮಧ್ಯಾಹ್ನ 2:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಹದಗೆಟ್ಟ ರಸ್ತೆಗಳು ಮತ್ತು ದಟ್ಟ ಮಂಜಿನಿಂದ ಕೂಡಿದ ಪ್ರತಿಕೂಲ ಹವಾಮಾನವು ಈ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಳೆಯಿಂದಾಗಿ ರಸ್ತೆ ಜಾರಿಕೆಯಾಗಿದ್ದರಿಂದ ವಾಹನವು ಸ್ಕಿಡ್ ಆಗಿ ಆಳವಾದ ಕಂದಕಕ್ಕೆ ಬಿದ್ದಿದೆ.

ವಿಡಿಯೊ ಇಲ್ಲಿದೆ

ರಕ್ಷಣಾ ಕಾರ್ಯಾಚರಣೆ

ಘಟನೆ ನಡೆದ ತಕ್ಷಣ ಸ್ಥಳೀಯ ಕಾಶ್ಮೀರಿ ನಾಗರಿಕರು ಸೇನೆಯ ನೆರವಿಗೆ ಧಾವಿಸಿದ್ದಾರೆ. ಸ್ಥಳೀಯರ ಮತ್ತು ಸೇನಾ ಪಡೆಗಳ ಜಂಟಿ ಕಾರ್ಯಾಚರಣೆಯ ಮೂಲಕ ಗಾಯಾಳುಗಳನ್ನು ಕಂದಕದಿಂದ ಹೊರತೆಗೆಯಲಾಯಿತು. ಗಾಯಗೊಂಡ ಸೈನಿಕರನ್ನು ಮೊದಲು ಭದ್ರವಾಹ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗಂಭೀರ ಸ್ಥಿತಿಯಲ್ಲಿರುವವರನ್ನು ಹೆಲಿಕಾಪ್ಟರ್ ಮೂಲಕ ಉಧಂಪುರದ ಸೇನಾ ಆಸ್ಪತ್ರೆಗೆ ರವಾನಿಸಲಾಗಿದೆ.

ಸೇನೆಯಿಂದ ಸಂತಾಪ

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಸೇನೆಯ ಚಿನಾರ್ ಕಾರ್ಪ್ಸ್, ದೇಶಕ್ಕಾಗಿ ಪ್ರಾಣತೆತ್ತ ವೀರ ಜವಾನರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ. "ಪ್ರತಿಕೂಲ ಹವಾಮಾನದ ನಡುವೆಯೂ ತಕ್ಷಣ ರಕ್ಷಣೆಗೆ ಧಾವಿಸಿ ಮಾನವೀಯತೆ ಮೆರೆದ ಸ್ಥಳೀಯ ನಾಗರಿಕರಿಗೆ ನಾವು ಕೃತಜ್ಞರಾಗಿದ್ದೇವೆ" ಎಂದು ಸೇನೆ ತಿಳಿಸಿದೆ. ಈ ಅಪಘಾತದಲ್ಲಿ ಮೊದಲು ಮೂವರು ಸೈನಿಕರು ಮೃತಪಟ್ಟಿದ್ದರು, ನಂತರ ಚಿಕಿತ್ಸೆ ಫಲಿಸದೆ ಸಾವಿನ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಮೃತ ಸೈನಿಕರ ಕುಟುಂಬಗಳಿಗೆ ದೇಶವು ಸಾಂತ್ವನ ಹೇಳುತ್ತಿದ್ದು, ಇಡೀ ಕಣಿವೆ ರಾಜ್ಯದಲ್ಲಿ ಸೂತಕದ ಛಾಯೆ ಆವರಿಸಿದೆ.

Read More
Next Story