12,000 ಅಡಿ ಎತ್ತರದಲ್ಲಿ ಹೈಟೆಕ್‌ ಬಂಕರ್‌: ಮ್ಯಾಗಿ, ಬಾಸುಮತಿ ಅಕ್ಕಿ ತಿಂದು ಚಳಿ ಕಾಯಿಸುತ್ತಿದ್ದ ಉಗ್ರರು
x
ಕಿಶ್ತ್ವಾರ್ ಜಿಲ್ಲೆಯಲ್ಲಿ 'ಕಾರ್ಗಿಲ್ ಮಾದರಿ'ಯ ಬಂಕರ್‌

12,000 ಅಡಿ ಎತ್ತರದಲ್ಲಿ ಹೈಟೆಕ್‌ ಬಂಕರ್‌: ಮ್ಯಾಗಿ, ಬಾಸುಮತಿ ಅಕ್ಕಿ ತಿಂದು ಚಳಿ ಕಾಯಿಸುತ್ತಿದ್ದ ಉಗ್ರರು

ಜಮ್ಮು-ಕಾಶ್ಮೀರದ ಕಿಶ್ತ್ವಾರ್‌ನಲ್ಲಿ 12,000 ಅಡಿ ಎತ್ತರದಲ್ಲಿ ಉಗ್ರರ 'ಕಾರ್ಗಿಲ್ ಮಾದರಿ'ಯ ಬಂಕರ್ ಪತ್ತೆಯಾಗಿದೆ.


Click the Play button to hear this message in audio format

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಅತಿ ಎತ್ತರದ ಗುಡ್ಡಗಾಡು ಪ್ರದೇಶದಲ್ಲಿ ಅಡಗಿದ್ದ ಜೈಶ್-ಎ-ಮೊಹಮ್ಮದ್ (JeM) ಉಗ್ರರ ಭದ್ರಕೋಟೆಯನ್ನು ಭದ್ರತಾ ಪಡೆಗಳು ಧ್ವಂಸಗೊಳಿಸಿವೆ. ಸುಮಾರು 12,000 ಅಡಿ ಎತ್ತರದ ಹಿಮಚ್ಛಾದಿತ ಪರ್ವತದ ಮೇಲೆ ನಿರ್ಮಿಸಲಾಗಿದ್ದ ಈ 'ಕಾರ್ಗಿಲ್ ಮಾದರಿ'ಯ ಬಂಕರ್‌ನಲ್ಲಿ ಉಗ್ರರು ಚಳಿಗಾಲದ ದೀರ್ಘಾವಧಿ ವಾಸ್ತವ್ಯಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು.

ಈ ಸುಸಜ್ಜಿತ ಬಂಕರ್‌ನಿಂದ ವಶಪಡಿಸಿಕೊಳ್ಳಲಾದ ಸಾಮಗ್ರಿಗಳು ಉಗ್ರರ ಭೀಕರ ಸಂಚನ್ನು ಬಯಲು ಮಾಡಿದ್ದು, ಅಲ್ಲಿ ರೇಷನ್ ಅಡಿಯಲ್ಲಿ 50 ಮ್ಯಾಗಿ ಪ್ಯಾಕೆಟ್‌ಗಳು, 20 ಕೆಜಿ ಉತ್ತಮ ಗುಣಮಟ್ಟದ ಬಾಸುಮತಿ ಅಕ್ಕಿ ಹಾಗೂ ವಿವಿಧ ಧಾನ್ಯಗಳು ಪತ್ತೆಯಾಗಿವೆ. ಇದರೊಂದಿಗೆ ಆಲೂಗಡ್ಡೆ ಮತ್ತು ಟೊಮೆಟೊ ಸೇರಿದಂತೆ ತಾಜಾ ತರಕಾರಿಗಳು ಹಾಗೂ 15 ರೀತಿಯ ಮಸಾಲೆ ಪದಾರ್ಥಗಳನ್ನು ಶೇಖರಿಸಿಡಲಾಗಿತ್ತು. ಅಡುಗೆ ಅನಿಲ (LPG) ಮತ್ತು ದಟ್ಟವಾದ ಮರದ ದಿಮ್ಮಿಗಳಂತಹ ಇಂಧನ ಸೌಲಭ್ಯವನ್ನೂ ಸಹ ಮಾಡಿಕೊಳ್ಳಲಾಗಿದ್ದು, ಈ ಎಲ್ಲಾ ಸಾಮಗ್ರಿಗಳು ಕನಿಷ್ಠ ಮೂರರಿಂದ ನಾಲ್ಕು ತಿಂಗಳುಗಳ ಕಾಲ ಉಗ್ರರು ಅಲ್ಲಿ ಸುಲಭವಾಗಿ ಬದುಕಲು ಬೇಕಾದಷ್ಟಿದ್ದವು.

ಉಗ್ರರ ಅಡಗುತಾಣ

ಸೇನಾ ಕಾರ್ಯಾಚರಣೆ

ಈ ಅಡಗುದಾಣವನ್ನು ಪಾಕಿಸ್ತಾನ ಮೂಲದ ಜೈಶ್ ಕಮಾಂಡರ್ ಸೈಫುಲ್ಲಾ ಮತ್ತು ಆತನ ಸಹಚರ ಆದಿಲ್ ಬಳಸುತ್ತಿದ್ದರು ಎಂದು ನಂಬಲಾಗಿದೆ. ಕಳೆದ ಭಾನುವಾರ ಭದ್ರತಾ ಪಡೆಗಳು ಈ ಸ್ಥಳವನ್ನು ಸಮೀಪಿಸಿದಾಗ, ಉಗ್ರರು ಏಕಾಏಕಿ ಗ್ರೆನೇಡ್ ದಾಳಿ ನಡೆಸಿದರು. ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿಶೇಷ ಪಡೆಗಳ ಹವಾಲ್ದಾರ್ ಗಜೇಂದ್ರ ಸಿಂಗ್ ಅವರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾಗಿದ್ದಾರೆ.

ಸ್ಥಳೀಯ ನಂಟು ಮತ್ತು ಬಂಧನ

ಇಷ್ಟು ಎತ್ತರದ ಪ್ರದೇಶದಲ್ಲಿ ಬೃಹತ್ ಪ್ರಮಾಣದ ರೇಷನ್ ಮತ್ತು ಕಲ್ಲಿನ ಬಂಕರ್‌ಗಳನ್ನು ನಿರ್ಮಿಸುವುದು ಸ್ಥಳೀಯರ ಸಹಾಯವಿಲ್ಲದೆ ಅಸಾಧ್ಯ ಎಂದು ಭದ್ರತಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಈ ಹಿನ್ನೆಲೆಯಲ್ಲಿ ಉಗ್ರರಿಗೆ ಸಹಕರಿಸುತ್ತಿದ್ದ (OGWs) ಜಾಲವನ್ನು ಪತ್ತೆಹಚ್ಚಲು ಸೇನೆಯು ಕಾರ್ಯಾಚರಣೆ ತೀವ್ರಗೊಳಿಸಿದ್ದು, ಈಗಾಗಲೇ ನಾಲ್ವರು ಸ್ಥಳೀಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

ಆಪರೇಷನ್ ಟ್ರಾಶಿ-I

ಜನವರಿ 18ರಂದು ಆರಂಭವಾದ ಈ ಬೃಹತ್ ಕಾರ್ಯಾಚರಣೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ತಡೆಯಲು ಡ್ರೋನ್ ಮತ್ತು ಸ್ನಿಫರ್ ಡಾಗ್‌ಗಳ ಸಹಾಯದಿಂದ ಅರಣ್ಯದ ಪ್ರತಿ ಮೂಲೆಯನ್ನೂ ಶೋಧಿಸಲಾಗುತ್ತಿದೆ.

Read More
Next Story