India-Pakistan cricket match: Opposition parties attack BCCI, criticise it as anti-national
x
ಸಾಂದರ್ಭಿಕ ಚಿತ್ರ

ಭಾರತ-ಪಾಕಿಸ್ತಾನ ಪಂದ್ಯ: ಬಿಸಿಸಿಐ ವಿರುದ್ಧ ವಿಪಕ್ಷಗಳ ವಾಗ್ದಾಳಿ, 'ದೇಶ ವಿರೋಧಿ' ಎಂದು ಟೀಕೆ

ಹಣದಾಸೆ, ಟಿವಿ ಮತ್ತು ಜಾಹೀರಾತು ಆದಾಯಕ್ಕಾಗಿ ಅಥವಾ ಆಟಗಾರರ ಶುಲ್ಕಕ್ಕಾಗಿ ಬಿಸಿಸಿಐ ಪಾಕಿಸ್ತಾನದೊಂದಿಗೆ ಆಡಲು ಇಷ್ಟೊಂದು ಉತ್ಸುಕವಾಗಿದೆಯೇ?" ಎಂದು ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ತಿಳಿಸಿದ್ದಾರೆ.


Click the Play button to hear this message in audio format

ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ 2025ರ (ಸೆಪ್ಟೆಂಬರ್ 14) ಕ್ರಿಕೆಟ್ ಪಂದ್ಯಕ್ಕೆ ಮಹಾರಾಷ್ಟ್ರದ ವಿರೋಧ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಬಿಜೆಪಿ ಸರ್ಕಾರ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಹರಿಹಾಯ್ದಿರುವ ವಿಪಕ್ಷಗಳು, ಬಿಸಿಸಿಐ "ದೇಶ ವಿರೋಧಿ"ಯಾಗುತ್ತಿದೆ ಎಂದು ಆರೋಪಿಸಿವೆ.

ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ, "ರಕ್ತ ಮತ್ತು ಕ್ರಿಕೆಟ್ ಒಟ್ಟಿಗೆ ಹರಿಯಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ. ಭಾರತದಲ್ಲಿ ಪಾಕಿಸ್ತಾನ ಹಲವು ಭಯೋತ್ಪಾದಕ ದಾಳಿಗಳನ್ನು ನಡೆಸಿದೆ. ಹೀಗಿರುವಾಗ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದನ್ನು ದೇಶದ ಪ್ರಸಾರಕರು ಬಹಿಷ್ಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ. "ಹಣದಾಸೆ, ಟಿವಿ ಮತ್ತು ಜಾಹೀರಾತು ಆದಾಯಕ್ಕಾಗಿ ಅಥವಾ ಆಟಗಾರರ ಶುಲ್ಕಕ್ಕಾಗಿ ಬಿಸಿಸಿಐ ಪಾಕಿಸ್ತಾನದೊಂದಿಗೆ ಆಡಲು ಇಷ್ಟೊಂದು ಉತ್ಸುಕವಾಗಿದೆಯೇ?" ಎಂದು ಅವರು ಪ್ರಶ್ನಿಸಿದ್ದಾರೆ.

"ಸೈನಿಕರಿಗೆ ಮಾಡಿದ ಅವಮಾನ"

ಮಹಾರಾಷ್ಟ್ರ ಕಾಂಗ್ರೆಸ್ ವಕ್ತಾರ ಸಚಿನ್ ಸಾವಂತ್, ಈ ಪಂದ್ಯಕ್ಕೆ ಅವಕಾಶ ನೀಡಿರುವುದು ರಾಜತಾಂತ್ರಿಕ ವೈಫಲ್ಯ. ಇದು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಮಡಿದವರ ಕುಟುಂಬಗಳಿಗೆ ಮತ್ತು ಕರ್ತವ್ಯದ ವೇಳೆ ಹುತಾತ್ಮರಾದ ಸೈನಿಕರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ. "ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಹೇಳಿದ್ದ ಪ್ರಧಾನಿ ಮೋದಿಯವರ ಧಮನಿಗಳಲ್ಲಿ ಹರಿಯುವ ಬಿಸಿ ರಕ್ತದ ತಾಪಮಾನ ಈಗ ಕಡಿಮೆಯಾಗಿದೆಯೇ?" ಎಂದು ಅವರು ವ್ಯಂಗ್ಯವಾಡಿದ್ದಾರೆ.

ಸರ್ಕಾರದ ದ್ವಂದ್ವ ನೀತಿ: ಎನ್‌ಸಿಪಿ

ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ವಕ್ತಾರ ಜಿತೇಂದ್ರ ಅವ್ಹಾದ್, ಪಂದ್ಯಕ್ಕೆ ಅನುಮತಿ ನೀಡುವ ಮೂಲಕ ಸರ್ಕಾರದ ದ್ವಂದ್ವ ನಿಲುವು ಬಹಿರಂಗವಾಗಿದೆ ಎಂದು ಟೀಕಿಸಿದ್ದಾರೆ. ಈ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಸಚಿವ ಮತ್ತು ಕ್ರಿಕೆಟ್ ಆಡಳಿತಗಾರ ಆಶಿಶ್ ಶೆಲಾರ್, ದ್ವಿಪಕ್ಷೀಯ ರಾಜಕೀಯ ಬಿಕ್ಕಟ್ಟುಗಳಿಂದ ಅಂತರಾಷ್ಟ್ರೀಯ ಕ್ರೀಡಾಕೂಟಗಳನ್ನು ನಿರ್ದೇಶಿಸಲು ಸಾಧ್ಯವಿಲ್ಲ ಎಂದಿದ್ದಾರೆ. "ಭಾರತೀಯ ಕ್ರಿಕೆಟ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಳ್ಳುವುದಿಲ್ಲ ಮತ್ತು ಪಾಕಿಸ್ತಾನ ತಂಡ ಭಾರತಕ್ಕೆ ಬರುವುದಿಲ್ಲ ಎಂಬ ನಮ್ಮ ನಿಲುವು ಸ್ಪಷ್ಟವಾಗಿದೆ. ಆದರೆ, ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡುವುದನ್ನು ನಾವು ನಿರ್ಬಂಧಿಸಲು ಸಾಧ್ಯವಿಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Read More
Next Story