
ಸುಪ್ರೀಂ ಕೋರ್ಟ್
"ಪಂದ್ಯ ನಡೆಯಲಿ": ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ ರದ್ದತಿಗೆ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ
ಗುರುವಾರ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠದ ಮುಂದೆ ಈ ಅರ್ಜಿ ತುರ್ತು ವಿಚಾರಣೆಗೆ ಬಂದಾಗ, "ಇದರಲ್ಲಿ ತುರ್ತಾಗಿ ವಿಚಾರಣೆ ನಡೆಸುವಂತಹದ್ದು ಏನಿದೆ? ಅದೊಂದು ಪಂದ್ಯ, ನಡೆಯಲಿ ಬಿಡಿ," ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಏಷ್ಯಾಕಪ್ ಟೂರ್ನಿಯ ಭಾಗವಾಗಿ ಸೆಪ್ಟೆಂಬರ್ 14ರಂದು ದುಬೈನಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈ-ವೋಲ್ಟೇಜ್ ಟಿ20 ಕ್ರಿಕೆಟ್ ಪಂದ್ಯವನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. "ಅದೊಂದು ಪಂದ್ಯ, ಅದು ನಡೆಯಲಿ" ಎಂದು ಹೇಳುವ ಮೂಲಕ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದೆ.
ನಾಲ್ವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಈ ಅರ್ಜಿಯಲ್ಲಿ, "ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು 'ಆಪರೇಷನ್ ಸಿಂಧೂರ್' ನಂತರ, ಪಾಕಿಸ್ತಾನದೊಂದಿಗೆ ಕ್ರಿಕೆಟ್ ಆಡುವುದು ನಮ್ಮ ಯೋಧರ ತ್ಯಾಗಕ್ಕೆ ಮಾಡುವ ಅವಮಾನ ಮತ್ತು ಇದು ರಾಷ್ಟ್ರದ ಘನತೆಗೆ ಧಕ್ಕೆ ತರುತ್ತದೆ" ಎಂದು ವಾದಿಸಲಾಗಿತ್ತು. "ರಾಷ್ಟ್ರೀಯ ಹಿತಾಸಕ್ತಿ ಮತ್ತು ನಾಗರಿಕರ ಜೀವಕ್ಕಿಂತ ಕ್ರಿಕೆಟ್ ದೊಡ್ಡದಲ್ಲ" ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಗುರುವಾರ ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ವಿಜಯ್ ಬಿಷ್ಣೋಯ್ ಅವರಿದ್ದ ಪೀಠದ ಮುಂದೆ ಈ ಅರ್ಜಿ ತುರ್ತು ವಿಚಾರಣೆಗೆ ಬಂದಾಗ, "ಇದರಲ್ಲಿ ತುರ್ತಾಗಿ ವಿಚಾರಣೆ ನಡೆಸುವಂತಹದ್ದು ಏನಿದೆ? ಅದೊಂದು ಪಂದ್ಯ, ನಡೆಯಲಿ ಬಿಡಿ," ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು. ಅರ್ಜಿದಾರರ ಪರ ವಕೀಲರು, "ಭಾನುವಾರ ಪಂದ್ಯ ಇರುವುದರಿಂದ, ನಾಳೆಯೇ ವಿಚಾರಣೆ ನಡೆಸದಿದ್ದರೆ ಅರ್ಜಿ ಮಹತ್ವ ಕಳೆದುಕೊಳ್ಳುತ್ತದೆ," ಎಂದು ಮನವಿ ಮಾಡಿದರೂ, ಪೀಠವು ಅದನ್ನು ಪರಿಗಣಿಸಲಿಲ್ಲ.
ಈ ತೀರ್ಪಿನೊಂದಿಗೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಕ್ರಿಕೆಟ್ ಪಂದ್ಯಕ್ಕೆ ಎದುರಾಗಿದ್ದ ಕಾನೂನಾತ್ಮಕ ಅಡ್ಡಿ ನಿವಾರಣೆಯಾದಂತಾಗಿದ್ದು, ನಿಗದಿಯಂತೆ ಪಂದ್ಯ ನಡೆಯುವುದು ಖಚಿತವಾಗಿದೆ.