
ವಿಮಾನ ರದ್ದು, ಪ್ರಯಾಣಿಕರ ಪರದಾಟ: ಇಂಡಿಗೋಗೆ 22.2 ಕೋಟಿ ರೂಪಾಯಿ ದಂಡ
ಇಂಡಿಗೋದ ನಿರ್ವಹಣಾ ರಚನೆ ಮತ್ತು ಕಾರ್ಯಾಚರಣೆಯ ನಿಯಂತ್ರಣದಲ್ಲಿನ ನ್ಯೂನತೆಗಳನ್ನೂ ಡಿಜಿಸಿಎ ಎತ್ತಿ ತೋರಿಸಿ ದಂಡವನ್ನು ವಿಧಿಸಿದೆ.
ಡಿಸೆಂಬರ್ ತಿಂಗಳಲ್ಲಿ ಸಂಭವಿಸಿದ ಭಾರೀ ಪ್ರಮಾಣದ ವಿಮಾನಗಳ ರದ್ದು ಮತ್ತು ವಿಳಂಬದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ದೇಶದ ಪ್ರಮುಖ ವಿಮಾನಯಾನ ಸಂಸ್ಥೆ 'ಇಂಡಿಗೋ'ಗೆ ಬಿಸಿ ಮುಟ್ಟಿಸಿದೆ. ಸಂಸ್ಥೆಗೆ ಬರೋಬ್ಬರಿ 22.20 ಕೋಟಿ ರೂಪಾಯಿ ದಂಡ ವಿಧಿಸಿರುವುದಲ್ಲದೆ, ಸಿಇಒ ಪೀಟರ್ ಎಲ್ಬರ್ಸ್ ಸೇರಿದಂತೆ ಉನ್ನತ ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ ನೀಡಿದೆ.
ವಿಮಾನಯಾನ ಇತಿಹಾಸದಲ್ಲೇ ಸಂಸ್ಥೆಯೊಂದರ ಕಾರ್ಯಾಚರಣೆಯ ವೈಫಲ್ಯಕ್ಕಾಗಿ ನಿಯಂತ್ರಕರು (Regulator) ವಿಧಿಸಿರುವ ಅತಿದೊಡ್ಡ ದಂಡಗಳಲ್ಲಿ ಇದೂ ಒಂದಾಗಿದೆ. ದಂಡದ ಜತೆಗೆ, ದೀರ್ಘಕಾಲದ ವ್ಯವಸ್ಥಿತ ಸುಧಾರಣೆಗಳನ್ನು ಖಚಿತಪಡಿಸಿಕೊಳ್ಳಲು 50 ಕೋಟಿ ರೂ.ಗಳ ಬ್ಯಾಂಕ್ ಗ್ಯಾರಂಟಿಯನ್ನು ಸಲ್ಲಿಸುವಂತೆಯೂ ಡಿಜಿಸಿಎ ಆದೇಶಿಸಿದೆ.
3 ಲಕ್ಷ ಪ್ರಯಾಣಿಕರಿಗೆ ಸಂಕಷ್ಟ
ಡಿಸೆಂಬರ್ 3 ರಿಂದ 5 ರ ನಡುವಿನ ಅಲ್ಪಾವಧಿಯಲ್ಲಿ ಇಂಡಿಗೋ ಸಂಸ್ಥೆಯ ಸುಮಾರು 2,507 ವಿಮಾನಗಳು ರದ್ದಾಗಿದ್ದವು ಮತ್ತು 1,852 ವಿಮಾನಗಳು ವಿಳಂಬವಾಗಿದ್ದವು. ಇದರಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪರದಾಡುವಂತಾಗಿತ್ತು. ಈ ಅವ್ಯವಸ್ಥೆಗೆ ನಿರ್ವಹಣಾ ಲೋಪವೇ ಕಾರಣ ಎಂದು ತನಿಖೆಯಿಂದ ದೃಢಪಟ್ಟಿದೆ.
ವೈಫಲ್ಯಕ್ಕೆ ಕಾರಣಗಳೇನು?
ಡಿಜಿಸಿಎ ನಡೆಸಿರುವ ಕೂಲಂಕಷ ತನಿಖೆಯ ಪ್ರಕಾರ, ಕಾರ್ಯಾಚರಣೆಯನ್ನು ಮಿತಿಮೀರಿ ಅತ್ಯುತ್ತಮವಾಗಿಸಲು ಹೋದದ್ದು, ಹೊಸ ನಿಯಮಾವಳಿಗಳಿಗೆ ತಕ್ಕಂತೆ ಸಿದ್ಧತೆ ಇಲ್ಲದಿರುವುದು ಮತ್ತು ಸಿಸ್ಟಮ್ ಸಾಫ್ಟ್‌ವೇರ್ ಬೆಂಬಲದಲ್ಲಿನ ದೋಷಗಳು ಈ ಅವಾಂತರಕ್ಕೆ ಪ್ರಮುಖ ಕಾರಣಗಳಾಗಿವೆ. ಇಂಡಿಗೋದ ನಿರ್ವಹಣಾ ರಚನೆ ಮತ್ತು ಕಾರ್ಯಾಚರಣೆಯ ನಿಯಂತ್ರಣದಲ್ಲಿನ ನ್ಯೂನತೆಗಳನ್ನೂ ಡಿಜಿಸಿಎ ಎತ್ತಿ ತೋರಿಸಿದೆ.
ದಂಡದ ಲೆಕ್ಕಾಚಾರ
ಪೈಲಟ್‌ಗಳ ಕೆಲಸದ ಅವಧಿಗೆ ಸಂಬಂಧಿಸಿದ ಹೊಸ ನಿಯಮಗಳನ್ನು (FDTL) ಪಾಲಿಸದ ಕಾರಣಕ್ಕಾಗಿ, ಡಿಸೆಂಬರ್ 5, 2025 ರಿಂದ ಫೆಬ್ರವರಿ 10, 2026 ರವರೆಗಿನ 68 ದಿನಗಳ ಅವಧಿಗೆ ದಿನಕ್ಕೆ 30 ಲಕ್ಷ ರೂ.ನಂತೆ ಒಟ್ಟು 20.40 ಕೋಟಿ ರೂ. ದಂಡ ವಿಧಿಸಲಾಗಿದೆ. ಉಳಿದಂತೆ, ಏರ್‌ಕ್ರಾಫ್ಟ್ ನಿಯಮಗಳ ಉಲ್ಲಂಘನೆಗಾಗಿ ಹೆಚ್ಚುವರಿ ದಂಡವನ್ನು ಸೇರಿಸಿ ಒಟ್ಟು 22.2 ಕೋಟಿ ರೂ. ಪಾವತಿಸಲು ಸೂಚಿಸಲಾಗಿದೆ.
ಉನ್ನತ ಅಧಿಕಾರಿಗಳ ತಲೆದಂಡ?
ಬಿಕ್ಕಟ್ಟು ನಿರ್ವಹಣೆ ಮತ್ತು ಮೇಲ್ವಿಚಾರಣೆಯಲ್ಲಿನ ವೈಫಲ್ಯಕ್ಕಾಗಿ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಎಚ್ಚರಿಕೆ ನೀಡಲಾಗಿದೆ. ವ್ಯವಸ್ಥಿತ ಯೋಜನೆಯಲ್ಲಿನ ವೈಫಲ್ಯಕ್ಕಾಗಿ ಇಂಡಿಗೋದ ಹಿರಿಯ ಉಪಾಧ್ಯಕ್ಷರಿಗೆ (Senior VP - OCC) ಪ್ರಸ್ತುತ ಜವಾಬ್ದಾರಿಗಳಿಂದ ಮುಕ್ತಿ ನೀಡುವಂತೆ ಮತ್ತು ಅವರಿಗೆ ಯಾವುದೇ ಹೊಣೆಗಾರಿಕೆಯ ಹುದ್ದೆ ನೀಡದಂತೆ ಡಿಜಿಸಿಎ ನಿರ್ದೇಶಿಸಿದೆ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (COO), ಫ್ಲೈಟ್ ಆಪರೇಷನ್ ನಿರ್ದೇಶಕರು ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಎಚ್ಚರಿಕೆ ಪತ್ರ ರವಾನಿಸಲಾಗಿದೆ.
ಇಂಡಿಗೋ ಪ್ರತಿಕ್ರಿಯೆ
ಡಿಜಿಸಿಎ ಆದೇಶದ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ, "ನಾವು ಆದೇಶವನ್ನು ಸ್ವೀಕರಿಸಿದ್ದೇವೆ. ಆಡಳಿತ ಮಂಡಳಿಯು ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಿದೆ. ಆಂತರಿಕ ಪ್ರಕ್ರಿಯೆಗಳನ್ನು ಬಲಪಡಿಸಲು ಈಗಾಗಲೇ ಪರಾಮರ್ಶೆ ನಡೆಸಲಾಗುತ್ತಿದೆ," ಎಂದು ಹೇಳಿಕೆಯಲ್ಲಿ ತಿಳಿಸಿದೆ.

