
ಥೈಲ್ಯಾಂಡ್‌ಗೆ ಹೊರಟಿದ್ದ ವಿಮಾನದಲ್ಲಿ ಸಮಸ್ಯೆ: ಡ್ಯೂಟಿ ಸಮಯ ಮುಗಿಯಿತೆಂದು ಹಾರಾಟಕ್ಕೆ ಒಪ್ಪದ ಪೈಲಟ್
ಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ವಿಮಾನದೊಳಗಿನ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಯಾಣಿಕರು ಹತಾಶೆಯಿಂದ ಕೂಗಾಡುವುದು ಕಂಡುಬಂದಿದೆ.
ಮುಂಬೈನಿಂದ ಥೈಲ್ಯಾಂಡ್‌ನ ಕ್ರಾಬಿಗೆ ಹೊರಟಿದ್ದ ಇಂಡಿಗೋ (IndiGo) ವಿಮಾನದಲ್ಲಿ ಗುರುವಾರ (ಜ.15) ಭಾರೀ ಗೊಂದಲದ ಸೃಷ್ಟಿಯಾದ ಘಟನೆ ನಡೆದಿದೆ. ತಮ್ಮ ಕರ್ತವ್ಯದ ಅವಧಿ ಮುಗಿದಿದೆ ಎಂದು ಕಾರಣ ನೀಡಿ ಪೈಲಟ್ ವಿಮಾನ ಚಲಾಯಿಸಲು ನಿರಾಕರಿಸಿದ್ದೇ ಈ ಎಲ್ಲ ರಂಪಾಟಕ್ಕೆ ಕಾರಣವಾಯಿತು. ಈ ಬಗ್ಗೆ ತಿಳಿದ ಪ್ರಯಾಣಿಕರಿಬ್ಬರು ಗಲಾಟೆ ಮಾಡಿದ ಕಾರಣ ಅಶಿಸ್ತಿನಿಂದ ವರ್ತಿಸಿದ ಆರೋಪದ ಮೇಲೆ ಅವರನ್ನು ವಿಮಾನದಿಂದ ಕೆಳಗಿಳಿಸಲಾಗಿದೆ.
ವಿಮಾನದಲ್ಲಿ ನಡೆದಿದ್ದೇನು?
ಮುಂಬೈ ವಿಮಾನ ನಿಲ್ದಾಣದಿಂದ ಗುರುವಾರ ಬೆಳಗಿನ ಜಾವ 4.05ಕ್ಕೆ ಇಂಡಿಗೋ ವಿಮಾನ (6E 1085) ಕ್ರಾಬಿಗೆ ಹಾರಾಟ ನಡೆಸಬೇಕಿತ್ತು. ಆದರೆ, ವಿಮಾನವು ಬರೋಬ್ಬರಿ ಮೂರು ಗಂಟೆಗೂ ಹೆಚ್ಚು ಕಾಲ ವಿಳಂಬವಾಯಿತು. ಫ್ಲೈಟ್‌ರಾಡಾರ್24 ಮಾಹಿತಿಯ ಪ್ರಕಾರ, ನಿಗದಿತ ಸಮಯಕ್ಕಿಂತ ತಡವಾಗಿ ಕಾರ್ಯಾಚರಣೆ ಆರಂಭವಾಯಿತು.
ವಿಮಾನದ ಪೈಲಟ್, ತಮ್ಮ ಶಿಫ್ಟ್ ಅವಧಿ ಮುಗಿದಿದೆ ಎಂದು ಹೇಳಿ ವಿಮಾನವನ್ನು ಮುನ್ನಡೆಸಲು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು. ವಿಮಾನದೊಳಗಿನ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಪ್ರಯಾಣಿಕರು ಹತಾಶೆಯಿಂದ ಕೂಗಾಡುವುದು ಕಂಡುಬಂದಿದೆ.
ಇಲಿಯಂತೆ ಅವಿತು ಕುಳಿತಿದ್ದಾನೆ...
ಆಕ್ರೋಶಗೊಂಡ ಪ್ರಯಾಣಿಕನೊಬ್ಬ, "ನಾವು ಮಾಡಿಕೊಂಡಿರುವ ಪ್ರವಾಸದ ಪ್ಲಾನ್ ಗತಿಯೇನು? ಆತ (ಪೈಲಟ್) ಯಾಕೆ ಇಲಿಯಂತೆ ಅವಿತು ಕುಳಿತಿದ್ದಾನೆ?" ಎಂದು ಜೋರಾಗಿ ಕಿರುಚಾಡುವುದು ವಿಡಿಯೋದಲ್ಲಿ ಸೆರೆಯಾಗಿದೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ, ಸಿಬ್ಬಂದಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡರು. ಮತ್ತೊಂದು ವಿಡಿಯೋದಲ್ಲಿ ಪ್ರಯಾಣಿಕನೊಬ್ಬ ಕೋಪದಿಂದ ವಿಮಾನದ ಎಕ್ಸಿಟ್ ಬಾಗಿಲಿಗೆ ಒದೆಯುತ್ತಿರುವುದು ಕಂಡುಬಂದಿದೆ.
ಇಂಡಿಗೋ ಸ್ಪಷ್ಟನೆ ಏನು?
ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ಇಂಡಿಗೋ ಸಂಸ್ಥೆ, ವಿಳಂಬಕ್ಕೆ ಹಲವು ಕಾರಣಗಳನ್ನು ನೀಡಿದೆ. "ಹಿಂದಿನ ವಿಮಾನದ ಆಗಮನದಲ್ಲಾದ ವಿಳಂಬ, ಏರ್ ಟ್ರಾಫಿಕ್ ದಟ್ಟಣೆ ಮತ್ತು ಸಿಬ್ಬಂದಿಯ ಕರ್ತವ್ಯದ ಸಮಯದ ಮಿತಿ ಸೇರಿದಂತೆ ಹಲವು ಕಾರಣಗಳಿಂದ ವಿಮಾನ ತಡವಾಯಿತು," ಎಂದು ಸಂಸ್ಥೆ ತಿಳಿಸಿದೆ.
ವಿಮಾನದಲ್ಲಿ ಗದ್ದಲ ಉಂಟುಮಾಡಿದ ಇಬ್ಬರು ಪ್ರಯಾಣಿಕರನ್ನು 'ಅಶಿಸ್ತಿನ ವರ್ತನೆ' ತೋರಿದರೆಂದು ಘೋಷಿಸಿ, ನಿಯಮಾವಳಿಗಳ ಪ್ರಕಾರ ವಿಮಾನದಿಂದ ಕೆಳಗಿಳಿಸಿ ಭದ್ರತಾ ಸಿಬ್ಬಂದಿಯ ವಶಕ್ಕೆ ನೀಡಲಾಗಿದೆ. ಈ ಪ್ರಕ್ರಿಯೆಯಿಂದಾಗಿ ವಿಮಾನ ಇನ್ನಷ್ಟು ವಿಳಂಬವಾಯಿತು ಎಂದು ಇಂಡಿಗೋ ಹೇಳಿದೆ. ಅಲ್ಲದೆ, ಕಾಯುವಿಕೆಯ ಸಮಯದಲ್ಲಿ ಪ್ರಯಾಣಿಕರಿಗೆ ಊಟ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು ಎಂದು ಏರ್‌ಲೈನ್ಸ್ ಸ್ಪಷ್ಟಪಡಿಸಿದೆ. ಅಂತಿಮವಾಗಿ, ಗುರುವಾರ ಬೆಳಗ್ಗೆ 10 ಗಂಟೆಗೆ ಕ್ರಾಬಿಯಲ್ಲಿ ಇಳಿಯಬೇಕಿದ್ದ ವಿಮಾನ, ಮಧ್ಯಾಹ್ನ 1 ಗಂಟೆಯ ಸುಮಾರಿಗೆ ತಲುಪಿದೆ.

