
ವೈದ್ಯ ದಂಪತಿಗೆ 14.85 ಕೋಟಿ ರೂ. ವಂಚನೆ: 17 ದಿನಗಳ ಡಿಜಿಟಲ್ ಅರೆಸ್ಟ್ನಲ್ಲಿಟ್ಟು ಲೂಟಿ
ಡಾ. ಓಂ ತನೇಜಾ ಮತ್ತು ಡಾ. ಇಂದಿರಾ ತನೇಜಾ ಅವರು ಸುಮಾರು 48 ವರ್ಷಗಳ ಕಾಲ ಅಮೆರಿಕಾದಲ್ಲಿ ವಿಶ್ವಸಂಸ್ಥೆಯ (UN) ವೈದ್ಯರಾಗಿ ಸೇವೆ ಸಲ್ಲಿಸಿ, 2015ರಲ್ಲಿ ನಿವೃತ್ತಿಯಾದ ಬಳಿಕ ಭಾರತಕ್ಕೆ ಮರಳಿದ್ದರು.
ದೇಶದ ರಾಜಧಾನಿಯಲ್ಲಿ ಅತ್ಯಂತ ಭೀಕರ ಹಾಗೂ ಆಘಾತಕಾರಿ ಸೈಬರ್ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ನಿವೃತ್ತ ವೈದ್ಯ ದಂಪತಿಯನ್ನು ಬರೋಬ್ಬರಿ 17 ದಿನಗಳ ಕಾಲ 'ಡಿಜಿಟಲ್ ಅರೆಸ್ಟ್'ನಲ್ಲಿ ಇರಿಸಿದ ವಂಚಕರು ಅವರಿಂದ 14.85 ಕೋಟಿ ರೂಪಾಯಿಗಳನ್ನು ದೋಚಿದ್ದಾರೆ.
ದೆಹಲಿಯ ಐಎಫ್‌ಎಸ್‌ಒ (IFSO) ಘಟಕಕ್ಕೆ ಈ ಸಂಬಂಧ ದೂರು ಸಲ್ಲಿಕೆಯಾಗಿದ್ದು, ವಂಚಕರು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಈ ಕೃತ್ಯ ಎಸಗಿದ್ದಾರೆ. ಸಂತ್ರಸ್ತ ದಂಪತಿಗಳಾದ ಡಾ. ಓಂ ತನೇಜಾ ಮತ್ತು ಡಾ. ಇಂದಿರಾ ತನೇಜಾ ಅವರು ಸುಮಾರು 48 ವರ್ಷಗಳ ಕಾಲ ಅಮೆರಿಕಾದಲ್ಲಿ ವಿಶ್ವಸಂಸ್ಥೆಯ (UN) ವೈದ್ಯರಾಗಿ ಸೇವೆ ಸಲ್ಲಿಸಿ, 2015ರಲ್ಲಿ ನಿವೃತ್ತಿಯಾದ ಬಳಿಕ ಭಾರತಕ್ಕೆ ಮರಳಿದ್ದರು. ತಾವು ಜೀವನವಿಡೀ ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲಾ ಈಗ ಸೈಬರ್ ಕಳ್ಳರ ಪಾಲಾಗಿರುವುದನ್ನು ಕಂಡು ದಂಪತಿಗಳು ದಿಗ್ಭ್ರಮೆಗೊಂಡಿದ್ದಾರೆ.
ಈ ಬೃಹತ್ ವಂಚನೆಯ ಜಾಲವು ಕಳೆದ ವರ್ಷದ ಡಿಸೆಂಬರ್ 24 ರಿಂದ ಆರಂಭವಾಗಿತ್ತು. ಅಂದು ದಂಪತಿಗೆ ಕರೆ ಮಾಡಿದ ಅಪರಿಚಿತರು ತಾವು ಕಾನೂನು ಜಾರಿ ಸಂಸ್ಥೆಯ ಅಧಿಕಾರಿಗಳೆಂದು ಪರಿಚಯಿಸಿಕೊಂಡಿದ್ದರು. ನಿಮ್ಮ ಹೆಸರಿನಲ್ಲಿ ಮನಿ ಲಾಂಡರಿಂಗ್ (PMLA) ನಡೆದಿದೆ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದಿರುವ ಆರೋಪದ ಮೇಲೆ ನಿಮ್ಮ ವಿರುದ್ಧ ಬಂಧನ ವಾರಂಟ್ ಜಾರಿಯಾಗಿದೆ ಎಂದು ಬೆದರಿಸಿದ್ದರು. ಅಲ್ಲಿಂದ ಸುಮಾರು 17 ದಿನಗಳ ಕಾಲ, ಅಂದರೆ ಜನವರಿ 10ರವರೆಗೆ ದಂಪತಿಯನ್ನು ವಿಡಿಯೋ ಕಾಲ್ ಮೂಲಕ ನಿರಂತರವಾಗಿ ನಿಗಾದಲ್ಲಿ ಇರಿಸಲಾಗಿತ್ತು. ಇದನ್ನು ಸೈಬರ್ ಲೋಕದಲ್ಲಿ 'ಡಿಜಿಟಲ್ ಅರೆಸ್ಟ್' ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಸಂತ್ರಸ್ತರು ಯಾರನ್ನೂ ಸಂಪರ್ಕಿಸದಂತೆ ಅಥವಾ ಮನೆಯಿಂದ ಹೊರಹೋಗದಂತೆ ವಂಚಕರು ಮಾನಸಿಕವಾಗಿ ಒತ್ತಡ ಹೇರಿದ್ದರು.
ವಿವಿಧ ಖಾತೆಗಳಿಗೆ ವರ್ಗಾವಣೆ
ಈ ಮಾನಸಿಕ ಕಿರುಕುಳದ ನಡುವೆಯೇ, ಡಾ. ಇಂದಿರಾ ತನೇಜಾ ಅವರನ್ನು ಎಂಟು ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸುವಂತೆ ವಂಚಕರು ಬಲವಂತಪಡಿಸಿದ್ದಾರೆ. ಹೀಗೆ ಹಂತಹಂತವಾಗಿ ಒಟ್ಟು 14.85 ಕೋಟಿ ರೂಪಾಯಿಗಳನ್ನು ವರ್ಗಾಯಿಸಿಕೊಳ್ಳಲಾಗಿದೆ. ವಿಶೇಷವೆಂದರೆ, ಬ್ಯಾಂಕಿಗೆ ಹಣ ವರ್ಗಾಯಿಸಲು ಹೋದಾಗ ಅಲ್ಲಿನ ಮ್ಯಾನೇಜರ್ ಪ್ರಶ್ನಿಸಿದರೆ ಏನು ಉತ್ತರ ನೀಡಬೇಕು ಎಂಬುದನ್ನು ಸಹ ವಂಚಕರು ಸಂತ್ರಸ್ತರಿಗೆ ಮೊದಲೇ ಹೇಳಿಕೊಟ್ಟಿದ್ದರು. 77 ವರ್ಷದ ಇಂದಿರಾ ತನೇಜಾ ಅವರು ಮನೆಯಿಂದ ಹೊರಬಂದಾಗಲೆಲ್ಲಾ ಅವರ ಪತಿಯ ಫೋನ್‌ಗೆ ವಿಡಿಯೋ ಕಾಲ್ ಮಾಡಿ ವಂಚಕರು ಅವರ ಪ್ರತಿಯೊಂದು ನಡೆಯನ್ನು ಗಮನಿಸುತ್ತಿದ್ದರು.
ಜನವರಿ 10 ರಂದು ಈ ವಂಚಕರೇ ಇಂದಿರಾ ಅವರಿಗೆ ಸ್ಥಳೀಯ ಪೊಲೀಸ್ ಠಾಣೆಗೆ ಹೋಗುವಂತೆ ಸೂಚಿಸಿದ್ದಾರೆ. ನೀವು ವರ್ಗಾಯಿಸಿದ ಹಣವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಮರುಪಾವತಿ ಮಾಡಲಿದೆ, ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ನಂಬಿಸಿದ್ದಾರೆ. ಈ ಸಂದರ್ಭದಲ್ಲೂ ಅವರು ವಿಡಿಯೋ ಕಾಲ್‌ನಲ್ಲೇ ಇದ್ದು, ಪೊಲೀಸ್ ಠಾಣೆಯ ಅಧಿಕಾರಿಯೊಂದಿಗೂ ಉದ್ಧಟತನದಿಂದ ಮಾತನಾಡಿದ್ದಾರೆ. ಅಲ್ಲಿಗೆ ಹೋದ ಮೇಲೆಯೇ ತಮಗೆ ಮೋಸವಾಗಿರುವುದು ಮತ್ತು ಆರ್‌ಬಿಐ ಅಂತಹ ಯಾವುದೇ ಹಣ ನೀಡುತ್ತಿಲ್ಲ ಎಂಬ ಸತ್ಯ ದಂಪತಿಗೆ ಅರಿವಾಗಿದೆ. ಸದ್ಯ ದೆಹಲಿ ಪೊಲೀಸರ ವಿಶೇಷ ಘಟಕದ ಸೈಬರ್ ವಿಭಾಗವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ವಂಚಕರ ಪತ್ತೆಗೆ ತನಿಖೆ ಚುರುಕುಗೊಳಿಸಿದೆ.

