
ದೆಹಲಿಯಲ್ಲಿ ಮಂಜಿನ ಕತ್ತಲು: ಶೂನ್ಯಕ್ಕೆ ಕುಸಿದ ಗೋಚರತೆ; ವಿಮಾನ, ರೈಲು ಸಂಚಾರ ಅಸ್ತವ್ಯಸ್ತ
ಮುಂದಿನ ಕೆಲ ದಿನಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದ್ದು, ಜನವರಿ 17 ರಿಂದ 20 ರವರೆಗೆ ತಾಪಮಾನದಲ್ಲಿ ಏರಿಕೆಯಾಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ದೇಶದ ರಾಜಧಾನಿ ನವದೆಹಲಿ ಹಾಗೂ ಎನ್ಸಿಆರ್ ಪ್ರದೇಶ ದಟ್ಟ ಮಂಜಿನಿಂದ ಆವೃತವಾಗಿದ್ದು, ಭಾನುವಾರ ಬೆಳಿಗ್ಗೆ ಗೋಚರತೆ ಪ್ರಮಾಣ ಶೂನ್ಯಕ್ಕೆ ಕುಸಿದಿದೆ. ಮೈ ಕೊರೆಯುವ ಚಳಿಯ ನಡುವೆಯೇ ವಾಯುಮಾಲಿನ್ಯದ ಪ್ರಮಾಣವೂ ಮಿತಿಮೀರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಭಾನುವಾರ ಬೆಳಿಗ್ಗೆ ದೆಹಲಿಯಲ್ಲಿ ಕನಿಷ್ಠ ತಾಪಮಾನ 5.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 2.3 ಡಿಗ್ರಿಯಷ್ಟು ಕಡಿಮೆ. ಸಫ್ದರ್‌ಜಂಗ್ ಪ್ರದೇಶದಲ್ಲಿ ಗೋಚರತೆ ಶೂನ್ಯವಾಗಿದ್ದರೆ, ಪಾಲಂನಲ್ಲಿ ಕೇವಲ 100 ಮೀಟರ್‌ಗಳಷ್ಟಿತ್ತು ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ.
ವಾಯುಮಾಲಿನ್ಯದ ಹೊಡೆತ:
ಒಂದೆಡೆ ಮಂಜಿನಾಟವಾದರೆ, ಇನ್ನೊಂದೆಡೆ ವಾಯುಮಾಲಿನ್ಯದ ಪ್ರಮಾಣ (AQI) 439ಕ್ಕೆ ಏರಿಕೆಯಾಗಿದ್ದು, 'ತೀವ್ರ' (Severe) ಹಂತವನ್ನು ತಲುಪಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದಂತೆ ಎಚ್ಚೆತ್ತ ಆಡಳಿತ ವರ್ಗ, ಶನಿವಾರದಿಂದಲೇ ಅತ್ಯಂತ ಕಠಿಣವಾದ ಮಾಲಿನ್ಯ ತಡೆ ಕ್ರಮಗಳನ್ನು (GRAP-IV) ಜಾರಿಗೊಳಿಸಿದೆ.
ಸಾರಿಗೆ ವ್ಯವಸ್ಥೆಗೆ ಗ್ರಹಣ:
ದಟ್ಟ ಮಂಜಿನಿಂದಾಗಿ ಸಾರಿಗೆ ವ್ಯವಸ್ಥೆ ತೀವ್ರವಾಗಿ ಬಾಧಿತವಾಗಿದೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡುವ ಶೇ. 35ರಷ್ಟು ಮತ್ತು ಆಗಮಿಸುವ ಶೇ. 27ರಷ್ಟು ವಿಮಾನಗಳು ವಿಳಂಬವಾಗಿವೆ. ಏರ್ ಇಂಡಿಯಾ ಮತ್ತು ಇಂಡಿಗೋ ಸಂಸ್ಥೆಗಳು ಪ್ರಯಾಣಿಕರಿಗೆ ಮುನ್ಸೂಚನೆ ನೀಡಿವೆ.
ರಾಜಧಾನಿ, ಡುರೊಂಟೊ ಸೇರಿದಂತೆ ಡಜನ್‌ಗಟ್ಟಲೆ ರೈಲುಗಳು ಗಂಟೆಗಟ್ಟಲೆ ತಡವಾಗಿ ಸಂಚರಿಸುತ್ತಿವೆ. ಆನಂದ್ ವಿಹಾರ್–ಜಯನಗರ ಗರೀಬ್ ರಥ ಎಕ್ಸ್‌ಪ್ರೆಸ್ 12 ಗಂಟೆ, ನವದೆಹಲಿ–ಹೌರಾ ಡುರೊಂಟೊ 9 ಗಂಟೆ, ಮಗಧ್ ಎಕ್ಸ್‌ಪ್ರೆಸ್ 8.30 ಗಂಟೆ ತಡವಾಗಿವೆ. ಉಪಾಸನಾ ಎಕ್ಸ್‌ಪ್ರೆಸ್ ಮತ್ತು ಸಿಕ್ಕಿಂ ಮಹಾನಂದ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಮುಂದಿನ ಕೆಲ ದಿನಗಳಲ್ಲಿ ಅಲ್ಪ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದ್ದು, ಜನವರಿ 17 ರಿಂದ 20 ರವರೆಗೆ ತಾಪಮಾನದಲ್ಲಿ ಏರಿಕೆಯಾಗಬಹುದು. ಆದರೆ, ಜನವರಿ 23 ರಿಂದ 26 ರವರೆಗೆ ಮತ್ತೆ ಚಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಸ್ಕೈಮೆಟ್ ಹವಾಮಾನ ಸಂಸ್ಥೆ ಮುನ್ಸೂಚನೆ ನೀಡಿದೆ.

