Ground Report Part-5| ಬಂಡೆ ಸ್ಫೋಟದಿಂದ ದೊಡ್ಡ ಆಲದ ಮರಕ್ಕೆ ಕುತ್ತು ; ಪ್ರವಾಸಿ ತಾಣದಲ್ಲಿ ಧೂಳಿನದ್ದೇ ಕರಾಮತ್ತು


Ground Report Part-5| ಬಂಡೆ ಸ್ಫೋಟದಿಂದ ದೊಡ್ಡ ಆಲದ ಮರಕ್ಕೆ ಕುತ್ತು ; ಪ್ರವಾಸಿ ತಾಣದಲ್ಲಿ ಧೂಳಿನದ್ದೇ ಕರಾಮತ್ತು
x

ಬೆಂಗಳೂರಿನ ಕೆಂಗೇರಿ ಸಮೀಪದ ದೊಡ್ಡ ಆಲದ ಮರ ನೋಟ   ಚಿತ್ರ: ಆರ್‌.ಡಿ. ರಘು

ದೇಶದಲ್ಲೇ ಆರನೇ ಅತಿ ದೊಡ್ಡ ಮರ ಎಂಬ ಹೆಗ್ಗಳಿಕೆ ಪಡೆದಿರುವ ಕೆಂಗೇರಿ ಬಳಿಯ ದೊಡ್ಡ ಆಲದ ಮರವು ಕಲ್ಲು ಗಣಿಗಾರಿಕೆ ಹಾಗೂ ದೂಳಿನಿಂದ ಆಪತ್ತು ಎದುರಿಸುವಂತಾಗಿದೆ.

ಬೆಂಗಳೂರು ದಕ್ಷಿಣ ತಾಲೂಕು ತಾವರೆಕೆರೆ ಹೋಬಳಿ ವ್ಯಾಪ್ತಿಯ ಈ ದೊಡ್ಡ ಆಲದ ಮರ ಅಂದಾಜು 4 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು, 400 ವರ್ಷಗಳ ಇತಿಹಾಸ ಹೊಂದಿದೆ. ಪ್ರಸ್ತುತ, ಸೂಲಿವಾರ, ಎಸ್‌.ಗೊಲ್ಲಹಳ್ಳಿಯಲ್ಲಿ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಇಲ್ಲಿಂದ 4 ಕಿ.ಮೀ. ದೂರದಲ್ಲಿರುವ ದೊಡ್ಡ ಆಲದ ಮರಕ್ಕೆ ಕುತ್ತು ಎದುರಾಗುವ ಭೀತಿಯಿದೆ.

ಧೂಳು ಎಲೆಗಳ ಮೇಲೆ ಕುಳಿತುಕೊಳ್ಳುವುದರಿಂದ ಪತ್ರ ಹರಿತ್ತು( ದ್ಯುತಿ ಸಂಶ್ಲೇಷಣೆ) ಸಾಧ್ಯವಾಗದೇ, ಮರದ ಬೆಳವಣಿಗೆ ಕುಂಠಿತವಾಗಲಿದೆ. ದೊಡ್ಡ ಆಲದ ಮರ ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಬರುತ್ತಾರೆ. ಆದರೆ, ರಾಮೋಹಳ್ಳಿ ಪ್ರವೇಶಿಸಿದ ಕೂಡಲೇ ಪ್ರವಾಸಿಗರನ್ನು ಧೂಳು ಸ್ವಾಗತಿಸಲಿದೆ. ಟಿಪ್ಪರ್‌ಗಳ ಓಡಾಟ, ಕ್ರಷರ್‌ಗಳ ದೂಳಿನಿಂದ ಇಡೀ ಪ್ರದೇಶವು ಶ್ವೇತವರ್ಣಕ್ಕೆ ತಿರುಗಿದೆ. ಇದರಿಂದ ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗುತ್ತಿದೆ.

ಪಕ್ಷಿಗಳ ಆವಾಸಕ್ಕೂ ಕುತ್ತು

ದೊಡ್ಡ ಆಲದ ಮರವು ನೂರಾರು ಜಾತಿಯ ಪಕ್ಷಿಗಳಿಗೆ ಆವಾಸವಾಗಿತ್ತು. ಆದರೆ, ಮಾದಾಪಟ್ಟಣ, ಸೂಲಿವಾರ ಹಾಗೂ ಎಸ್‌.ಗೊಲ್ಲಹಳ್ಳಿ ಗ್ರಾಮದಲ್ಲಿ ಬಂಡೆಗಳ ಸ್ಫೋಟ, ಕ್ರಷರ್‌ಗಳ ಶಬ್ದದಿಂದ ಪಕ್ಷಿಗಳು ಬೇರೆಡೆ ವಲಸೆ ಹೋಗುತ್ತಿವೆ. ಬಂಡೆ ಸ್ಫೋಟದಿಂದ ಭೂಮಿ ಕಂಪಿಸುವ ಅನುಭವವಾಗುತ್ತಿದೆ. ಇದರಿಂದ ಆಲದ ಮರದ ಬುಡಗಳಿಗೂ ತೊಂದರೆಯಾಗುವ ಅಪಾಯವಿದೆ ಎಂದು ರಾಮೋಹಳ್ಳಿ ನಿವಾಸಿ ಹನುಮಂತಯ್ಯ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಬೆಟ್ಟಗಳ ನಡುವಿನ ಮಂಚನಬೆಲೆ ಜಲಾಶಯ, ಬಸವನತಾರ ಅರಣ್ಯ ಇರುವುದರಿಂದ ದೊಡ್ಡ ಆಲದ ಮರದಲ್ಲಿ ನೂರಾರು ಪ್ರಬೇಧದ ಪಕ್ಷಿಗಳು ವಾಸ ಮಾಡುತ್ತಿದ್ದವು. ಆದರೆ, ಇತ್ತೀಚೆಗೆ ನಗರೀಕರಣ, ವಾಹನಗಳ ವಿಪರೀತ ಸಂಚಾರ ಹಾಗೂ ಕಲ್ಲು ಗಣಿಗಾರಿಕೆಯ ಸ್ಫೋಟದಿಂದ ಪಕ್ಷಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು.

ದೊಡ್ಡ ಆಲದ ಮರದ ಬೇರುಗಳು ನೆಲಕ್ಕೆ ಇಳಿದಿರುವುದು ಚಿತ್ರ: ಆರ್‌.ಡಿ. ರಘು

ಮರದ ಅಧ್ಯಯನಕ್ಕೆ ಸಮಿತಿ ನೇಮಿಸಿದ್ದ ಸರ್ಕಾರ

2019ರಲ್ಲಿ ದೊಡ್ಡ ಆಲದ ಮರ ಹಾಗೂ ಸ್ಥಳದ ಅಭಿವೃದ್ಧಿಗೆ ಸಂಬಂಧಿಸಿದಂತೆ ವರದಿ ತಯಾರಿಸಲು ಪರಿಸರ ತಜ್ಞ ಎ.ಎನ್. ಯಲ್ಲಪ್ಪ ರೆಡ್ಡಿ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರವು ತಜ್ಞರ ಸಮಿತಿ ರಚಿಸಿತ್ತು. ವರದಿ ಆಧರಿಸಿ 2020ರಲ್ಲಿ ಮರದ ನಿರ್ವಹಣೆಯನ್ನು ತೋಟಗಾರಿಕೆ ಮತ್ತು ಪ್ರವಾಸೋದ್ಯಮ ಇಲಾಖೆಗೆ ವಹಿಸಲಾಯಿತು. ಸುಮಾರು 1.5 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಲಭ್ಯ ಒದಗಿಸಲಾಯಿತು.

2022ರಲ್ಲಿ ಮರದ ಕ್ಷೇಮ ಖಾತರಿಪಡಿಸಿಕೊಳ್ಳಲು ʼದೊಡ್ಡ ಆಲದ ಮರದ ಸಮಿತಿʼ (ಬಿಗ್ ಬನ್ಯಾನ್ ಟ್ರೀ ಕಮಿಟಿ) ʼಅರ್ಬಸ್ಕುಲರ್ ಮೈಕೋರೈಝಾ ಚಿಕಿತ್ಸೆʼಗೆ ಶಿಫಾರಸು ಮಾಡಿತ್ತು. ಮರದ ಬೆಳವಣಿಗೆಗೆ ಇನ್ನಷ್ಟು ಸ್ಥಳ ಕಲ್ಪಿಸಲು ಹೆಚ್ಚುವರಿಯಾಗಿ 2.5 ಎಕರೆ ಭೂಮಿ ಸ್ವಾಧೀನಕ್ಕೆ ಸಮಿತಿ ಸಲಹೆ ನೀಡಿತ್ತು.

ಪ್ರಸ್ತುತ, ದೊಡ್ಡ ಆಲದ ಮರವು 1,359 ಪೂರಕ ಬೇರುಗಳನ್ನು ಹೊಂದಿದೆ. ಅವುಗಳಲ್ಲಿ 811 ಬೇರುಗಳು ನೆಲವನ್ನು ಸ್ಪರ್ಶಿಸಿವೆ. 548 ಬೇರುಗಳು ನೆಲದಿಂದ 10 ರಿಂದ 15 ಅಡಿ ಎತ್ತರದಲ್ಲಿ ನೇತಾಡುತ್ತಿವೆ.

ಈ ಹಿಂದೆ ದೊಡ್ಡ ಆಲದ ಮರದ ಬಳಿ ಮಲಯಾಳಂನ ‘ಒಡಿಯನ್’ ಸಿನಿಮಾ ದೃಶ್ಯಗಳನ್ನು ಚಿತ್ರೀಕರಿಸಲು ಯೋಜಿಸಲಾಗಿತ್ತು. ಆದರೆ, ಚಿತ್ರೀಕರಣಕ್ಕೆ ಅನುಮತಿ ಸಿಗದ ಕಾರಣ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು ಎನ್ನಲಾಗಿದೆ.

ಆರ್ಬಸ್ಕುಲರ್ ಮೈಕೋರಿಜಾ ಚಿಕಿತ್ಸೆ ಏನು?

ಸಸ್ಯಗಳಿಗೆ ಪ್ರಯೋಜನಕಾರಿ ಶಿಲೀಂಧ್ರಗಳೊಂದಿಗೆ (ಎಎಂಎಫ್‌) ಚುಚ್ಚುಮದ್ದು ನೀಡುವುದನ್ನು ಆರ್ಬಸ್ಕುಲರ್ ಮೈಕೋರಿಜಾ (ಎಎಂ) ಚಿಕಿತ್ಸೆ ಎಂದು ಕರೆಯಲಾಗುತ್ತದೆ. ವಿಶೇಷ ಪೋಷಕಾಂಶ(ರಂಜಕ), ನೀರು ಹೀರಿಕೊಳ್ಳುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಹನಿ ನೀರಾವರಿ ಮೂಲಕ ಮರದ ಸುಸ್ಥಿರ ಬೆಳವಣಿಗೆ ಕಾಯ್ದುಕೊಳ್ಳಬಹುದಾಗಿದೆ. ನೈಸರ್ಗಿಕ, ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕದಂತೆಯೂ ಈ ಆರ್ಬಸ್ಕುಲರ್‌ ಮೈಕೋರಿಜಾ ಚಿಕಿತ್ಸೆ ಕಾರ್ಯನಿರ್ವಹಿಸಲಿದೆ.

"ತಾವರೆಕೆರೆ ಹೋಬಳಿಯಲ್ಲಿ ಕಲ್ಲು ಗಣಿಗಾರಿಕೆ ವಿಪರೀತವಾಗಿದೆ. ಬಂಡೆಗಳ ಸ್ಫೋಟದಿಂದ ಪ್ರವಾಸಿ ತಾಣ ದೊಡ್ಡ ಆಲದ ಮರಕ್ಕೆ ಅಪಾಯವಿದೆ. ಬಂಡೆಯ ಸ್ಫೋಟಕ್ಕೆ ಮರದ ಬುಡಗಳು ಸಡಿಲಗೊಂಡಿವೆ. ಇತ್ತೀಚೆಗೆ ಮರದ ಬೆಳವಣಿಗೆಯೂ ನಿಂತಿದೆ. ನೂರಾರು ವರ್ಷಗಳ ಇತಿಹಾಸ ಇರುವ ಮರವನ್ನು ಸಂರಕ್ಷಿಸಬೇಕಾದರೆ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಬೇಕು" ಎಂದು ಎಸ್‌. ಗೊಲ್ಲಹಳ್ಳಿ ಗ್ರಾಮದ ರಮೇಶ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

"ತಾವರೆಕೆರೆ ಭಾಗದಲ್ಲಿ ಪರಿಸರ ತುಂಬಾ ಚೆನ್ನಾಗಿತ್ತು. ಈಗ ಸಂಪೂರ್ಣ ಹಾಳಾಗಿದೆ. ಮೊದಲು ಕಲ್ಲು ಗಣಿಗಾರಿಕೆಯು ಗ್ರಾಮದಿಂದ ದೂರದಲ್ಲಿತ್ತು. ಐದು ವರ್ಷದಿಂದೀಚೆಗೆ ಗ್ರಾಮದ ಅಂಚಿಗೆ ಬಂದಿದೆ. ಇದರಿಂದ ಮಂಚನಬೆಲೆ ಜಲಾಶಯ, ದೊಡ್ಡ ಆಲದ ಮರ ಹಾಗೂ ಬ್ಯಾಲಾಳುವಿನ ಇಸ್ರೋ ಸಂಶೋಧನಾ ಸಂಸ್ಥೆಗೂ ಅಪಾಯದ ಆತಂಕ ಎದುರಾಗಿದೆ ಎಂದು ‌ಎಸ್‌. ಗೊಲ್ಲಹಳ್ಳಿ ನಿವಾಸಿ ಜಯ ರುದ್ರಯ್ಯ ತಿಳಿಸಿದರು.

ದೊಡ್ಡ ಆಲದ ಮರದ ಸಮೀಪವೇ ಸಾಗುತ್ತಿರುವ ಎಂ-ಸ್ಯಾಂಡ್‌ ತುಂಬಿದ ಟಿಪ್ಪರ್‌ ಲಾರಿಗಳು ಚಿತ್ರ: ಆರ್‌.ಡಿ.ರಘು

ದೇಶದ ಆರನೇ ದೊಡ್ಡ ಆಲದ ಮರ

ಕೆಂಗೇರಿ ಸಮೀಪದ ಕೇತೊಹಳ್ಳಿ-ರಾಮೋಹಳ್ಳಿಯಲ್ಲಿರುವ ದೊಡ್ಡ ಆಲದ ಮರವು ದೇಶದ ಆರನೇ ದೊಡ್ಡ ಮರವಾಗಿದೆ. ಮರವು ಒಟ್ಟು 10,322 ಚದರ ಮೀಟರ್‌ ವಿಸ್ತೀರ್ಣ ಹೊಂದಿದೆ.

ಆಂಧ್ರಪ್ರದೇಶದ ತಿಮ್ಮಮ್ಮ ಮರಿಮಾನು ದೇಶದ ಅತಿ ದೊಡ್ಡ ಆಲದ ಮರವಾಗಿದೆ. ಇದು 19,107 ಚದರ ಮೀ. ವಿಸ್ತೀರ್ಣದಲ್ಲಿದೆ. ಗುಜರಾತಿನ ಕಬೀರ್‌ ವಾಡ್‌ ಆಲದ ಮರವು 17,520 ಚದರ ಮೀ. ವಿಸ್ತೀರ್ಣ ಹೊಂದಿದ್ದರೆ, ಉತ್ತರ ಪ್ರದೇಶದಲ್ಲಿರುವ ಬೃಹತ್‌ ಆಲದ ಮರ 16,769 ಚದರ ಮೀ. ವಿಸ್ತೀರ್ಣವಿದೆ. ಪಶ್ಚಿಮ ಬಂಗಾಳದ ಕೊಲ್ಕತ್ತದ ಬೃಹತ್‌ ಆಲದ ಮರ 16,531 ಚದರ ಮೀ. ವಿಸ್ತೀರ್ಣ ಇದ್ದರೆ, ತೆಲಂಗಾಣದ ಪಿಲ್ಲಾಳದ ಮರವು 12,267 ಚದರ ಮೀ. ವಿಸ್ತೀರ್ಣ ಹೊಂದಿದೆ.

Next Story